ಬೆಂಗಳೂರು: 2023-24 ಆರ್ಥಿಕ ವರ್ಷ ಮುಕ್ತಾಯದ ಹಂತದಲ್ಲಿದ್ದರೂ ವಿಶೇಷ ಅಭಿವೃದ್ಧಿ ಯೋಜನೆಯ (ಎಸ್ಡಿಪಿ) ಹಾಗೂ ಬಾಹ್ಯಾನುದಾನಿತ ಯೋಜನೆಗಳ ಪ್ರಗತಿ ನಿರಾಶಾದಾಯಕವಾಗಿದೆ.
ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ ರಾಜ್ಯ ಸರ್ಕಾರ ಸಾವಿರಾರು ಕೋಟಿ ರೂ. ಅನುದಾನ ನೀಡುತ್ತದೆ. ಅತಿ ಹಿಂದುಳಿದ ತಾಲೂಕುಗಳಲ್ಲೂ ಸಮತೋಲಿತ ಅಭಿವೃದ್ಧಿ ಸಾಧಿಸಲು ಎಸ್ಡಿಪಿ ಅನುಷ್ಠಾನಗೊಳಿಸಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿನ ಯೋಜನೆಗಳಿಗೆ SDP ಮೂಲಕ ಹೆಚ್ಚಿನ ಅನುದಾನ ನೀಡುವ ಮೂಲಕ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ.
ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿನ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಪ್ರತಿ ವರ್ಷ ಸರಾಸರಿ 3,000 ಕೋಟಿ ರೂ. ವಿಶೇಷ ಅಭಿವೃದ್ಧಿ ಯೋಜನೆಯಡಿ ಅನುದಾನ ನೀಡುತ್ತದೆ. ಒಟ್ಟು 11 ಇಲಾಖೆಗಳಿಗೆ ಯೋಜನೆಯಡಿ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, 2023-24 ಬಜೆಟ್ ವರ್ಷ ಮುಕ್ತಾಯದ ಅಂಚಿನಲ್ಲಿದ್ದರೂ ಅನುದಾನ ಬಳಕೆಯಲ್ಲಿ ನಿರಾಸಕ್ತಿ ಮುಂದುವರಿದಿದೆ.
ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಬಾಹ್ಯಾನುದಾನ ಯೋಜನೆಗಳು ವಿಶೇಷ ಅಭಿವೃದ್ಧಿ ಯೋಜನೆ ಪ್ರಗತಿ ಕೇವಲ ಶೇ 47ರಷ್ಟು :2023-24 ಆರ್ಥಿಕ ವರ್ಷ ಇನ್ನೇನು ಮುಕ್ತಾಯವಾಗಲಿದೆ. ವಿಶೇಷ ಅಭಿವೃದ್ಧಿ ಯೋಜನೆಯಡಿ ಹಂಚಿಕೆಯಾದ ಅನುದಾನದಲ್ಲಿ ಈವರೆಗೆ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು ಕೇವಲ 47.45%. ಕೆಡಿಪಿ ಪ್ರಗತಿ ಅಂಕಿ ಅಂಶದ ಪ್ರಕಾರ ಫೆಬ್ರವರಿ ವರೆಗೆ ವಿಶೇಷ ಅಭಿವೃದ್ಧಿ ಯೋಜನೆಯ ಪ್ರಗತಿ ಶೇ 50ರ ಗಡಿ ದಾಟಲೂ ಸಾಧ್ಯವಾಗಿಲ್ಲ.
ಕೆಡಿಪಿ ಪ್ರಗತಿ ಮಾಹಿತಿ ಪ್ರಕಾರ 2023-24 ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಯೋಜನೆಗೆ ಸುಮಾರು 3,046.18 ಕೋಟಿ ರೂ. ಅನುದಾನ ಹಂಚಿಕೆ ಮಾಡಲಾಗಿದೆ. ಫೆಬ್ರವರಿ ವರೆಗೆ ಕೇವಲ 1,649 ಕೋಟಿ ರೂ. ಮಾತ್ರ ಹಣ ಬಿಡುಗಡೆ ಮಾಡಲಾಗಿದೆ. ಫೆಬ್ರವರಿ ವರೆಗೆ ಒಟ್ಟು 1,445 ಕೋಟಿ ರೂ. ಎಸ್ಡಿಪಿಯಡಿ ವೆಚ್ಚವಾಗಿದೆ. ಅನುದಾನ ಬಿಡುಗಡೆಯಲ್ಲಿ ಶೇ 87.65 ರಷ್ಟು ವೆಚ್ಚವಾಗಿದೆ. ಆದರೆ, ಒಟ್ಟು ಹಂಚಿಕೆಯ ಮುಂದೆ ಆಗಿರುವ ವೆಚ್ಚ ಕೇವಲ ಶೇ47ರಷ್ಟು ಮಾತ್ರ.
ಬಾಹ್ಯಾನುದಾನ ಯೋಜನೆಯಲ್ಲೂ ಪ್ರಗತಿ ಕುಂಠಿತ:ಇತ್ತ ರಾಜ್ಯ ಸರ್ಕಾರ ಬಾಹ್ಯಾನುದಾನದಲ್ಲಿ ಹಲವು ಇಲಾಖೆಗಳಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುತ್ತದೆ. ಆದರೆ, 2023-24 ಆರ್ಥಿಕ ವರ್ಷ ಮುಕ್ತಾಯವಾಗುತ್ತಿದ್ದರೂ ಇನ್ನೂ ನಿರೀಕ್ಷಿತ ಪ್ರಗತಿ ಕಾಣಲು ಸಾಧ್ಯವಾಗಿಲ್ಲ.
ವಿಶ್ವ ಬ್ಯಾಂಕ್, ಏಷಿಯಾ ಅಭಿವೃದ್ಧಿ ಬ್ಯಾಂಕ್ ಆರ್ಥಿಕ ನೆರವಿನೊಂದಿಗೆ ರಾಜ್ಯ ಸರ್ಕಾರ ಹಲವು ಬಾಹ್ಯಾನುದಾನ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದೆ. ರಾಜ್ಯ ಸರ್ಕಾರ ಬಾಹ್ಯಾನುದಾನಗಳ ಮೂಲಕ ಲೋಕೋಪಯೋಗಿ, ಇಂಧನ, ನಗರಾಭಿವೃದ್ಧಿ, ಕೃಷಿ ಹಾಗೂ ಜಲಸಂಪನ್ಮೂಲ ಇಲಾಖೆಯಲ್ಲಿ ಯೋಜನೆ ಅನುಷ್ಠಾನಗೊಳಿಸುತ್ತಿದೆ. ಆದರೆ, ಫೆಬ್ರವರಿ ವರೆಗೆ ಬಾಹ್ಯಾನುದಾನ ಯೋಜನೆಯ ಪ್ರಗತಿ ಆಗಿದ್ದು ಕೇವಲ ಶೇ.51 ಮಾತ್ರ.
ಕೆಡಿಪಿ ಪ್ರಗತಿ ಅಂಕಿ ಅಂಶದಂತೆ ಬಾಹ್ಯಾನುದಾನ ಯೋಜನೆಗಾಗಿ 2023-24ರಲ್ಲಿ 3,604 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಈ ಪೈಕಿ ಬಿಡುಗಡೆಯಾದ ಅನುದಾನ 1,809 ಕೋಟಿ ರೂ. ಆ ಮೂಲಕ ಒಟ್ಟು ಹಂಚಿಕೆ ಮುಂದೆ ಈವರೆಗೆ ಕೇವಲ ಶೇ 51ರಷ್ಟು ಮಾತ್ರ ಪ್ರಗತಿ ಕಂಡಿದೆ.
ಇದನ್ನೂ ಓದಿ: ಕೇಂದ್ರದಿಂದ ರಾಜ್ಯಕ್ಕೆ 25,435 ಕೋಟಿ ಅನುದಾನ ಇಳಿಕೆ: ಹಣಕಾಸು ಆಯೋಗದ ವರದಿಯಲ್ಲಿ ವಿವರಣೆ