ಬೆಂಗಳೂರು: ಕಳೆದ ಡಿಸೆಂಬರ್‌ನಲ್ಲಿ ನಡೆದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಬಾರದು ಹಾಗೂ ಮರುಪರೀಕ್ಷೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.
ಡಿಸೆಂಬರ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಸಾಕಷ್ಟು ಗೊಂದಲಗಳಿವೆ. ಆದ್ದರಿಂದ ಫಲಿತಾಂಶವನ್ನು ತಡೆಹಿಡಿದು, ಹೊಸದಾಗಿ ನೋಟಿಫಿಕೇಶನ್ ಹೊರಡಿಸಿ ಮರುಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ ಕರವೇ ನಾರಾಯಣ ಗೌಡ ಬಣದ ಕಾರ್ಯಕರ್ತರು ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪ್ರಶ್ನೆಗಳ ಕನ್ನಡ ತರ್ಜುಮೆಯಲ್ಲಿ ಲೋಪ ಆರೋಪ: ಕೆಪಿಎಸ್‌ಸಿಯಿಂದ ಕಳೆದ ಡಿಸೆಂಬರ್‌ನಲ್ಲಿ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪರೀಕ್ಷೆ ನಡೆಸಲಾಗಿತ್ತು. ಆದರೆ ಪ್ರಶ್ನೆಪತ್ರಿಕೆಯಲ್ಲಿನ ಪ್ರಶ್ನೆಗಳ ಕನ್ನಡದ ತರ್ಜುಮೆಯಲ್ಲಿ ಸಾಕಷ್ಟು ಲೋಪಗಳಿವೆ, ಇದರಿಂದಾಗಿ ನಮಗೆ ಅನ್ಯಾಯವಾಗಿದೆ ಎಂದು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಎದುರಿಸಿದ್ದ ಅಭ್ಯರ್ಥಿಗಳು ಆಕ್ರೋಶ ಹೊರಹಾಕಿದ್ದರು. ಕನ್ನಡದಲ್ಲಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಪರ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಬೆಂಬಲ ಸೂಚಿಸಿದ್ದರು. ಬಳಿಕ ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಭಾಗಿಯಾಗಿದ್ದರು.
ಇಂದು ಕೆಪಿಎಸ್‌ಸಿ ಮುಂದೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು "ಹೊಸದಾಗಿ ನೋಟಿಫಿಕೇಶನ್ ಹೊರಡಿಸಿ ಮರು ಪರೀಕ್ಷೆ ನಡೆಸಬೇಕು. ಡಿಸೆಂಬರ್‌ನಲ್ಲಿ ನಡೆದಿರುವ ಪರೀಕ್ಷೆಯ ಫಲಿತಾಂಶವನ್ನು ಯಾವುದೇ ಕಾರಣಕ್ಕೂ ಪ್ರಕಟಿಸಬಾರದು" ಎಂದು ಆಗ್ರಹಿಸಿದರು.