ಬೆಳಗಾವಿ:ಮುಂದಿನ ಯಾವುದೇ ಹೋರಾಟದಲ್ಲೂ ನಮ್ಮನ್ನು ಬಂಧಿಸಿ ಜೈಲಿಗೆ ಹಾಕಿದರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ನಾರಾಯಣ ಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಶನಿವಾರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
"ನಾಡಿಗಾಗಿ ಮನೆ ಬಿಟ್ಟು ಹೊರಬಂದು ಹೋರಾಟ ಮಾಡುವವರು ನಾವು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಯಡಿಯೂರಪ್ಪನವರೇ ರಾಜ್ಯಕ್ಕೆ ನಿಮ್ಮ ಕೊಡುಗೆ ಏನಾದರೂ ಇದೆಯೇ?. ರಾಜಕಾರಣಿಗಳ ಕೊಡುಗೆಗಳ ಬಗ್ಗೆ ಪ್ರಶ್ನಿಸಿದಾಗ ಬರುವ ಉತ್ತರ ಶೂನ್ಯ" ಎಂದು ಟೀಕಿಸಿದರು.
"ಬೆಳಗಾವಿ ನಮ್ಮದು ಅಂತಾ ಹೇಳುವ ಪದ್ಧತಿ ಕರವೇ ಹೋರಾಟದಿಂದ ಶುರುವಾಗಿದೆ. ಕರ್ನಾಟಕದ ಸಚಿವ ಸಂಪುಟ ಅಂದರೆ ನಮ್ಮ ಕನ್ನಡಿಗರು. ಅಪ್ಪಟ ಕನ್ನಡಿಗರು ಈ ಸಭೆಯಲ್ಲಿ ಕುಳಿತಿರುತ್ತಾರೆ. ಪಾಟೀಲ ಪುಟ್ಟಪ್ಪ, ಕುವೆಂಪು ನಮ್ಮ ನಾಯಕರು, ದೇವರು. ನಮಗೆ ಕನ್ನಡವೇ ಧರ್ಮ, ಕನ್ನಡವೇ ಜಾತಿ" ಎಂದರು. "ಎಂಇಎಸ್ನವರಿಗೆ ಮಹಾರಾಷ್ಟ್ರದಲ್ಲಿ ಸಣ್ಣ ಕಾರ್ಪೊರೇಟರ್ ಕೂಡ ಆಗಲು ಆಗಲ್ಲ. ನೀವು ಮೊದಲು ಕನ್ನಡ ಮಾತಾಡಿ" ಎಂದು ಗರಂ ಆದರು.