ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಹಿಂಗಾರು ಮಳೆ ಮತ್ತಷ್ಟು ಚುರುಕು: 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ - KARNATAKA RAIN FORECAST

ರಾಜ್ಯದಲ್ಲಿ ಹಿಂಗಾರು ಮಳೆ ಮುಂದುವರಿದಿದ್ದು, ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Karnataka rain
ರಾಜ್ಯದಲ್ಲಿ ಹಿಂಗಾರು ಮಳೆ ಮತ್ತಷ್ಟು ಚುರುಕು (IANS)

By ETV Bharat Karnataka Team

Published : Oct 31, 2024, 3:07 PM IST

ಬೆಂಗಳೂರು: ಹಿಂಗಾರು ರಾಜ್ಯದಲ್ಲಿ ಮತ್ತೆ ಚುರುಕಾಗಿದ್ದು ಹಲವೆಡೆ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ಮುಂದಿನ 24 ಗಂಟೆಗಳಿಗೆ ಅನ್ವಯವಾಗುವಂತೆ ನಾಲ್ಕು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.

ದಕ್ಷಿಣ ಒಳನಾಡಿನ ಚಾಮರಾಜನಗರ ಜಿಲ್ಲೆಗೆ ಇಂದೂ ಸೇರಿದಂತೆ ಮೂರೂ ದಿನ, ರಾಮನಗರಕ್ಕೆ ಎರಡು ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನು ನಾಳೆ ಮತ್ತು ನಾಡಿದ್ದು (ಶುಕ್ರವಾರ- ಶನಿವಾರ) ಕೊಡಗು, ಮಂಡ್ಯ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಉಳಿದಂತೆ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗೆ ಮುಂದಿನ 24 ಗಂಟೆಗಳ ಕಾಲ ಯೆಲ್ಲೋ ಅಲರ್ಟ್ ಕೊಡಲಾಗಿದೆ.

ಚಿಕ್ಕಮಗಳೂರು, ರಾಮನಗರ, ಚಾಮರಾಜನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಇನ್ನು ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಗದಗ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಂಭವವಿದೆ. ಚಿತ್ರದುರ್ಗ, ಬಳ್ಳಾರಿ, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಸಾಧಾರಣ ಮಳೆ:ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದೆ. ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕೆಲವು ಸ್ಥಳಗಳಲ್ಲಿ ಬೆಳಗಿನ ಜಾವ ಮಂಜು ಬೀಳಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 26 ಮತ್ತು 20 ಡಿಗ್ರಿ ದಾಖಲಾಗಲಿದೆ ಎಂದು ಹೇಳಿದೆ.

ದಕ್ಷಿಣ ಆಂಧ್ರಪ್ರದೇಶದ ನೈಋತ್ಯ ಬಂಗಾಳ ಕೊಲ್ಲಿಯ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಮತ್ತು 5.8 ಕಿ.ಮೀ ಎತ್ತರದಲ್ಲಿದೆ. ಉಳಿದಂತೆ ಮನ್ನಾರ್ ಕೊಲ್ಲಿ ಮತ್ತು ನೆರೆಹೊರೆಯಲ್ಲಿ ಇನ್ನೊಂದು ಚಂಡಮಾರುತದ ಪರಿಚಲನೆಯು ಮುಂದುವರಿಯುತ್ತಿದ್ದು, ಸರಾಸರಿ ಸಮುದ್ರ ಮಟ್ಟದಿಂದ 900 ಮೀಟರ್​ ಎತ್ತರದಲ್ಲಿ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಒಳನಾಡಿನಲ್ಲಿ ಹಿಂಗಾರು ಮಳೆ ಸಾಮಾನ್ಯವಾಗಿದ್ದು, ಕರಾವಳಿಯಲ್ಲಿ ದುರ್ಬಲವಾಗಿತ್ತು. ನಿನ್ನೆಯಿಂದ ರಾಜ್ಯದ ಹಲವು ಸ್ಥಳಗಳಲ್ಲಿ ಮಳೆಯಾಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಅತಿ ಹೆಚ್ಚು ಮಳೆ (5 ಸೆಂಟಿ ಮೀಟರ್) ದಾಖಲಾಗಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಎನ್‌. ಪುವಿಯರಸನ್ ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಹಿಂಗಾರು ಮಳೆ ಮತ್ತೆ ಚುರುಕು; ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ABOUT THE AUTHOR

...view details