ಕರ್ನಾಟಕ

karnataka

ETV Bharat / state

ಮುಂಗಾರು ಅಧಿವೇಶನ: ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ - BPL Card - BPL CARD

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯರಾದ ಪ್ರತಾಪ್ ಸಿಂಹ ಮತ್ತು ರವಿಕುಮಾರ್ ಪ್ರಶ್ನೆಗಳಿಗೆ ಸಚಿವ ಕೆ.ಹೆಚ್​ ಮುನಿಯಪ್ಪ ಉತ್ತರಿಸಿದರು. ಈ ವೇಳೆ ಬಿಪಿಎಲ್​ ಕಾರ್ಡ್​ ಅರ್ಜಿ ಸಲ್ಲಿಸಿದವರಿಗೆ ಗುಡ್​ ನ್ಯೂಸ್​ ನೀಡಿದರು.

CONGRESS GOVERNMENT  APPLIED FOR BPL CARD  BENGALURU  KARNATAKA MONSOON SESSION
ಬಿಪಿಎಲ್ ಕಾರ್ಡ್​ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ (ETV Bharat)

By ETV Bharat Karnataka Team

Published : Jul 15, 2024, 2:21 PM IST

ಬೆಂಗಳೂರು: 1.73 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇದ್ದು ಆದಷ್ಟು ಬೇಗ ಈ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ಮಂಜೂರು ಮಾಡಿ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಳೆದ ಸರ್ಕಾರದ ಅಂತ್ಯದಲ್ಲಿ 2.95 ಲಕ್ಷ ಬಿಪಿಎಲ್ ಕಾರ್ಡ್ ಅರ್ಜಿ ವಿಲೇವಾರಿ ಬಾಕಿ ಇತ್ತು. ಅದರಲ್ಲಿ ನಾವು ಪರಿಶೀಲಿಸಿದ್ದು, ಅರ್ಜಿ ಸಲ್ಲಿಸಿದವರಲ್ಲಿ 236162 ಅರ್ಹರಿದ್ದು, ಬಾಕಿ 56930 ಅರ್ಜಿದಾರರು ಬಿಪಿಎಲ್ ಕೆಳಗೆ ಬರಲ್ಲ. ಅರ್ಹರಲ್ಲಿ 62 ಸಾವಿರ ಕಾರ್ಡ್ ಗಳನ್ನು ಈಗಾಗಲೇ ಪಟ್ಟಿಗೆ ತಂದು ದವಸ ಧಾನ್ಯ ಕೊಡಲಾಗುತ್ತಿದೆ. ಬಾಕಿ ಕಾರ್ಡ್​ಗಳ ಪರಿಶೀಲಿಸುತ್ತಿದ್ದು, ಬಾಕಿ ಇರುವ 1.73 ಲಕ್ಷ ಕಾರ್ಡ್​ದಾರರಿಗೂ ಆದಷ್ಟು ಬೇಗ ಪಡಿತರ ವಿತರಿಸಲಾಗುತ್ತದೆ ಎಂದರು.

ಆರೋಗ್ಯ ಸಂಬಂಧಿ ಚಿಕಿತ್ಸೆ ಪಡೆಯಲು ಪಡಿತರ ಕಾರ್ಡ್ ವಿತರಿಸಲು ಕಾಲಮಿತಿ ಇಲ್ಲ. ವಾರದಲ್ಲಿ ಕಾರ್ಡ್ ವಿತರಿಸಲಾಗುತ್ತದೆ. ಈವರೆಗೂ ಎಪಿಎಲ್ ಮತ್ತು ಬಿಪಿಎಲ್ ಸೇರಿ 4 ಕೋಟಿ ಜನರ ಮೀರಿ ಅಧಿಕ ಕಾರ್ಡ್​ಗಳ ವಿತರಣೆ ಮಾಡಿದ್ದೇವೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಯಾರೇ ಅರ್ಜಿ ಸಲ್ಲಿಸುತ್ತಿದ್ದಂತೆ ಕೂಡಲೇ ಕಾರ್ಡ್ ಕೊಡಲು ಕ್ರಮ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಅನ್ನಭಾಗ್ಯ, ಅಕ್ಷರ ಭಾಗ್ಯದ ಅಕ್ಕಿ ಖರೀದಿ ದರ ವ್ಯತ್ಯಾಸಕ್ಕೆ ಸರ್ಕಾರ ನೀಡಿದ ಕಾರಣವೇನು?; ಅಕ್ಷರ ದಾಸೋಹಕ್ಕೆ ರಾಜ್ಯದ ಟೆಂಡರ್ ಅನ್ನಭಾಗ್ಯಕ್ಕೆ ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಮಾಡುತ್ತಿರುವ ಹಿನ್ನೆಲೆ ಖರೀದಿ ದರದಲ್ಲಿ ವ್ಯತ್ಯಾಸವಿದೆ ಎಂದು ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ‌ ಸದಸ್ಯ ರವಿಕುಮಾರ್ ಅಕ್ಷರ ದಾಸೋಹಕ್ಕೆ 29.30 ರೂ.ಗೆ ಕೆಜಿ ಅಕ್ಕಿ ಶಿಕ್ಷಣ ಇಲಾಖೆ ಖರೀದಿಸುತ್ತಿದೆ. ಮುನಿಯಪ್ಪ ಅವರು 34.60 ರೂ.ಗೆ ಖರೀದಿಸಿತ್ತಿದ್ದಾರೆ. 5.5 ರೂ. ವ್ಯತ್ಯಾಸವಾಗಿದೆ. ಈ ಹಣ ವ್ಯತ್ಯಾಸ ಯಾಕೆ, ಎಲ್ಲಿ ಹೋಗುತ್ತಿದೆ, ಹೆಚ್ಚುವರಿ ಹಣ ಯಾಕೆ ಕೊಡಲಾಗುತ್ತಿದೆ? ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ಕೇಂದ್ರಕ್ಕೆ ಸೇರಿದ ಎರಡು ಸಂಸ್ಥೆಗಳಿಂದಲೇ ಅಕ್ಕಿ ಖರೀದಿ ಮಾಡಲಾಗುತ್ತಿದೆ. ಪಾರದರ್ಶಕವಾಗಿ ಖರೀದಿಸಿದೆ. ಅನ್ನಭಾಗ್ಯಕ್ಕೆ ನಮಗೆ ಹೆಚ್ಚುವರಿ ಅಕ್ಕಿ ಕೇಂದ್ರ ಕೊಡಲಿಲ್ಲ. ನಂತರ ನಾವು ಕೇಂದ್ರ ಸ್ವಾಮ್ಯದ ಸಂಸ್ಥೆಗಳ ಮೂಲಕವೇ ಖರೀದಿಸುತ್ತಿದ್ದೇವೆ. ಎ.ಗ್ರೇಡ್ ರಾರೈಸ್ ಖರೀದಿಸಿ ವಿತರಣೆ ಮಾಡಲಾಗುತ್ತಿದೆ. ಎನ್​ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ್ ಸಂಸ್ಥೆಗಳಿಂದಲೇ ನಾವು ಅಕ್ಕಿ ಖರೀದಿಸುತ್ತಿದ್ದೇವೆ. ನಾವು ಟೆಂಡರ್ ಕೂಡ ಕರೆಯದೇ ಕೇಂದ್ರದ ಸಂಸ್ಥೆಗಳಿಂದಲೇ ಖರೀದಿ ಮಾಡಿ ವಿತರಿಸುತ್ತಿದ್ದೇವೆ ಎಂದರು.

ಇದಕ್ಕೆ ತೃಪ್ತರಾಗದ ರವಿಕುಮಾರ್, ಅನ್ನಭಾಗ್ಯಕ್ಕೆ ಹೆಚ್ಚಿನ‌ದರ ನೀಡಿ ಎ ಗ್ರೇಡ್ ಖರೀದಿಸಿದರೆ ಮಕ್ಕಳಿಗೆ ಯಾವ ಗುಣಮಟ್ಟದ ಅಕ್ಕಿ ಖರೀದಿಸಲಾಗುತ್ತಿದೆ? ಎಂದು ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟೀಕರಣ ನೀಡಿದ ಶಿಕ್ಷಣ ಸಚಿವ ಮಧುಬಂಗಾರಪ್ಪ, ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಅಕ್ಕಿ ಕೊಡಲಾಗುತ್ತಿದೆ. ನಾವು ಕೊಡುತ್ತಿರುವ ವ್ಯವಸ್ಥೆ ಬೇರೆ. ನಾವು ಟೆಂಡರ್ ಕರೆದು ಕೊಡುತ್ತಿದ್ದೇವೆ ಎಂದರು. ನಂತರ ಮಾತನಾಡಿದ ಮುನಿಯಪ್ಪ, ಈ ವ್ಯತ್ಯಾಸಕ್ಕೆ ಕಾರಣ ಕೇಂದ್ರ ಸರ್ಕಾರ. ಮಾರುಕಟ್ಟೆ ದರ ವ್ಯತ್ಯಾಸವಾಗುತ್ತಲೇ ಇರುತ್ತದೆ. ಅದಕ್ಕಾಗಿ ನಾವು ಕೇಂದ್ರ ಭಂಡಾರದಿಂದ ಏಕರೂಪ ದರಕ್ಕೆ ಖರೀದಿ ಮಾಡುತ್ತಿದ್ದೇವೆ ಎಂದರು.

ಈ ವೇಳೆ ಸ್ಪಷ್ಟ ಉತ್ತರಕ್ಕೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಪತ್ರ ಕೊಡಿ, ಅರ್ಧ ಗಂಟೆ ಚರ್ಚೆಗೆ ಅವಕಾಶ ನೀಡಲಾಗುತ್ತದೆ ಎಂದು ಚರ್ಚೆಗೆ ತೆರೆ ಎಳೆದರು.

ಓದಿ:"ಕಾವೇರಿಯ ಹಿತಾಸಕ್ತಿಗಿಂತ ಹೆಚ್​ಡಿಕೆಗೆ ಬಾಡೂಟವೇ ಮುಖ್ಯ": ಶಾಸಕ ಬಾಲಕೃಷ್ಣ ಟೀಕೆ - HC Balakrishna

ABOUT THE AUTHOR

...view details