ಕರ್ನಾಟಕ

karnataka

ETV Bharat / state

ಎಂಇಎಸ್ ಕಾರ್ಯಕರ್ತರು ಕನ್ನಡದ ತಂಟೆಗೆ ಬಂದರೆ ಸರಿ ಇರಲ್ಲ : ಸಚಿವ ತಂಗಡಗಿ ಎಚ್ಚರಿಕೆ - WARNS MES WORKERS

ನಾವು ಕನ್ನಡಿಗರು, ಬೇರೆ ಭಾಷೆಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಆದರೆ, ಈ ರೀತಿ ನಡೆದುಕೊಳ್ಳುವುದಿಲ್ಲ ಎಂದು ಎಂಇಎಸ್ ಕಾರ್ಯಕರ್ತರ ವರ್ತನೆ ಬಗ್ಗೆ ಸಚಿವ ಶಿವರಾಜ್ ತಂಗಡಗಿ ಬೇಸರ ವ್ಯಕ್ತಪಡಿಸಿದ್ದಾರೆ.

Shivaraj Tangadagi On MES Workers
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವರಾಜ್ ಎಸ್.ತಂಗಡಗಿ (ETV Bharat)

By ETV Bharat Karnataka Team

Published : Feb 25, 2025, 6:14 PM IST

ಬೆಂಗಳೂರು : ಎಂಇಎಸ್ ಕಾರ್ಯಕರ್ತರು ಕನ್ನಡದ ತಂಟೆಗೆ ಬಂದರೆ ಸರಿ ಇರುವುದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇಂದು ತಮ್ಮ ಗೃಹ ಕಚೇರಿ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕದ ನೀರು, ಗಾಳಿ, ಅನ್ನ ತಿಂದು ಮತ್ತೊಂದು ಭಾಷೆಯ ಬಗ್ಗೆ ಬಹಳ ಪ್ರೀತಿ ವ್ಯಾಮೋಹ ತೋರಿಸಿದರೆ ಮುಂದೆ ಪರಿಣಾಮ ನೆಟ್ಟಗಿರಲ್ಲ ಎಂದು ಕಿಡಿಕಾರಿದರು.

ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯೆ (ETV Bharat)

ಎಂಇಎಸ್ ಕಾರ್ಯಕರ್ತರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡುತ್ತೇವೆ. ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಅಂತ ಹೇಳಿದ್ದೇವೆ. ಕನ್ನಡದ ವಿಚಾರಕ್ಕೆ ಬಂದರೆ ನಿಮಗೆ ಸರಿಯಾದ ಶಿಸ್ತು ಕಲಿಸುವ ಪರಿಸ್ಥಿತಿ ನಿರ್ಮಾಣ ಆಗುತ್ತೆ ಎಂದು ತೀಕ್ಷ್ಣವಾಗಿ ಹೇಳಿದರು.‌

ಹೀಗೆ ಮುಂದುವರೆದರೆ ಗೂಂಡಾ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕಾಗುತ್ತದೆ. ನಾವು ಕನ್ನಡಿಗರು, ಬೇರೆ ಭಾಷೆಯನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಆದರೆ, ಈ ರಾಜ್ಯದಲ್ಲಿ ವಾಸವಿರುವ ಅನ್ಯ ಭಾಷಿಕರು ಈ ನೆಲದ ಭಾಷೆ ಮತ್ತು ಕಾನೂನನ್ನು ಗೌರವಿಸಿ, ಪಾಲಿಸಬೇಕು ಎಂದು ಹೇಳಿದರು.

ಕನ್ನಡಿಗರು ಈ ರೀತಿ ನಡೆದುಕೊಳ್ಳುವುದಿಲ್ಲ. ಕನ್ನಡಿಗರು ಆ ರೀತಿ ಮಾತಮಾಡೋಕೆ ನಿಂತರೆ, ನೀವ್ಯಾರು ಉಳಿಯಂಗಿಲ್ಲ, ಹುಷಾರಾಗಿರಿ ಎಂದು ಎಂಇಎಸ್ ಕಾರ್ಯಕರ್ತರಿಗೆ ಸಚಿವ ತಂಗಡಗಿ ಎಚ್ಚರಿಕೆ ರವಾನಿಸಿದರು.

ಎಲ್ಲಾ ಮರಾಠಿಗರು ಈ ರೀತಿ ದುರ್ವರ್ತನೆ ತೋರುವುದಿಲ್ಲ. ಕೆಲವೇ ಕೆಲವರು ಈ ರೀತಿಯ ಕೃತ್ಯ ಮಾಡುತ್ತಿದ್ದಾರೆ. ಅದಕ್ಕೆ ಸರಿಯಾಗಿ ಉತ್ತರ ಕೊಡುವ ಪರಿಸ್ಥಿತಿ ಬಂದಿದೆ. ಕೊಟ್ಟೆ ಕೊಡುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು‌‌.

ಕನ್ನಡ ಭಾಷೆ, ನೆಲ ಮತ್ತು ಜಲದ ವಿಚಾರದ ಬಗ್ಗೆ ಪ್ರತಿಯೊಬ್ಬರು ಧ್ವನಿ ಎತ್ತಬೇಕು. ಬೆಳಗಾವಿ ನಾಯಕರು ಈ ಬಗ್ಗೆ ಮಾತನಾಡಬೇಕು.‌ ನಾವು ಇಲ್ಲಿ ಹೇಳೋದಲ್ಲ, ಮರಾಠರ ಜಾಗದಲ್ಲೇ ನಿಂತು ಉತ್ತರ ಕೊಡ್ತೇವೆ. ನಮಗೆ ಯಾವುದೇ ಅಂಜಿಕೆ ಇಲ್ಲ. ಕನ್ನಡದ ವಿಚಾರಕ್ಕೆ ಬಂದರೆ ನಾವು ಸುಮ್ಮನಿರುವ ಪ್ರಶ್ನೆ ಇಲ್ಲ. ಈ ಹಿಂದೆ ಪ್ರತಿ ವರ್ಷ ಎಂಇಎಸ್​ನವರು ಕರಾಳ ದಿನಾಚರಣೆ ಆಚರಿಸುತ್ತಿದ್ದರು. ಅದಕ್ಕೆ ಕಡಿವಾಣ ಹಾಕಿದ್ದೇವೆ. ಮುಂದೆಯೂ ಕಡಿವಾಣ ಹಾಕುತ್ತೇವೆ ಎಂದು ಹೇಳಿದರು.‌

ಇದನ್ನೂ ಓದಿ:ಕಂಡಕ್ಟರ್ ಮೇಲಿನ ಪೋಕ್ಸೋ ಕೇಸ್ ವಾಪಸ್ : ನಾವು ಕನ್ನಡಾಭಿಮಾನಿಗಳು ಎಂದ ಬಾಲಕಿ ಪೋಷಕರು; ಸಿಪಿಐ ವರ್ಗಾವಣೆ - BELAGAVI CONDUCTOR CASE

ABOUT THE AUTHOR

...view details