ಬೆಳಗಾವಿ:ಕನ್ನಡಿಗ ಕಂಡಕ್ಟರ್ ಮೇಲಿನ ಹಲ್ಲೆ ಪ್ರಕರಣದಿಂದಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ಇದು ಫೆ.27ರ ವರೆಗೂ ಮುಂದುವರಿಯುವ ಸಾಧ್ಯತೆಯಿದೆ.
ಸದ್ಯಕ್ಕೆ ಕರ್ನಾಟಕದಿಂದ ಮಹಾರಾಷ್ಟ್ರ ಗಡಿಯವರೆಗೆ ಮಾತ್ರ ಬಸ್ ಬಿಡಲಾಗುತ್ತಿದೆ. ಅದೇ ರೀತಿ ಮಹಾರಾಷ್ಟ್ರದಿಂದ ಕರ್ನಾಟಕ ಗಡಿಯವರೆಗೆ ಪ್ರಯಾಣಿಕರನ್ನು ಇಳಿಸಲಾಗುತ್ತಿದೆ. ಅಲ್ಲಿಂದ ಆಯಾ ರಾಜ್ಯದ ವಾಹನಗಳಲ್ಲಿ ಪ್ರಯಾಣಿಕರು ತಾವು ಹೋಗಬೇಕಾದ ಸ್ಥಳಗಳಿಗೆ ತೆರಳುತ್ತಿದ್ದಾರೆ. ಈ ವೇಳೆ ಖಾಸಗಿ ವಾಹನಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ಆರೋಪವೂ ಕೇಳಿ ಬಂದಿದೆ.
ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ಈಟಿವಿ ಭಾರತದ ಜೊತೆಗೆ ಮಾತನಾಡಿದ ಪ್ರಯಾಣಿಕ ಫುರ್ಕಾನ್ ಸಯ್ಯದ್, ''ನಾನು ಮಹಾರಾಷ್ಟ್ರದ ನಾಸಿಕ್ಗೆ ಹೋಗಬೇಕು. ಆದರೆ, ಬೆಳಗಾವಿಯಿಂದ ಬಸ್ ಬಿಡುತ್ತಿಲ್ಲ. ಭಾಷಾ ವಿಚಾರದಲ್ಲಿ ನಡೆದ ಗಲಾಟೆಯಿಂದ ಬಸ್ ಸಂಚಾರಕ್ಕೆ ಅಡ್ಡಿಯಾಗಿದೆ. ಶೀಘ್ರವೇ ಎರಡೂ ಸರ್ಕಾರಗಳು ಸಮಸ್ಯೆ ಬಗೆಹರಿಸಿ ಎಂದಿನಂತೆ ಬಸ್ ಬಿಟ್ಟರೆ ತುಂಬಾ ಅನುಕೂಲ ಆಗುತ್ತದೆ'' ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರತಿಕ್ರಿಯೆ: ''ಉಭಯ ರಾಜ್ಯಗಳ ನಡುವೆ ಬಸ್ ಸಂಚಾರ ಪುನರಾರಂಭ ಕುರಿತು ಕೊಲ್ಹಾಪುರ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿದ್ದೇವೆ. ಎರಡು-ಮೂರು ದಿನಗಳಿಂದ ಬಸ್ ಸಂಚಾರ ಸ್ಥಗಿತವಾಗಿದೆ. ನಮ್ಮ ಗಡಿಯಲ್ಲಿ ನಾವು, ಮಹಾರಾಷ್ಟ್ರ ಗಡಿಯಲ್ಲಿ ಅವರು ಭದ್ರತೆ ಹೆಚ್ಚಿಸಿಕೊಳ್ಳಲು ಇಬ್ಬರೂ ಪೊಲೀಸ್ ವರಿಷ್ಠಾಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಹಾಗಾಗಿ, 48 ಗಂಟೆಯೊಳಗೆ ಸುಗಮ ಬಸ್ ಕಾರ್ಯಾಚರಣೆ ಪ್ರಕ್ರಿಯೆ ರೂಪಿಸಿಕೊಳ್ಳಲಿದ್ದೇವೆ. 27ರಂದು ಮಧ್ಯಾಹ್ನ ಮಹಾರಾಷ್ಟ್ರಕ್ಕೆ ಪುನಃ ಬಸ್ ಸೇವೆ ಆರಂಭಿಸಲು ಎಲ್ಲ ವ್ಯವಸ್ಥೆ ಮಾಡಿದ್ದೇವೆ'' ಎಂದು ಹೇಳಿದರು.
''ನಿನ್ನೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದರು. ಅಲ್ಲದೇ ನಮ್ಮ ಮುಖ್ಯ ಕಾರ್ಯದರ್ಶಿ ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಜೊತೆಗೆ, ಅದೇ ರೀತಿ ನಮ್ಮ ಡಿಜಿಪಿ ಮಹಾರಾಷ್ಟ್ರ ಡಿಜಿಪಿ ಜೊತೆಗೆ ಮಾತನಾಡಿದ್ದಾರೆ. ಕೇವಲ ಬೆಳಗಾವಿ ಕೊಲ್ಹಾಪುರ ಅಷ್ಟೇ ಅಲ್ಲದೇ ಸಾಂಗಲಿ, ಸೊಲ್ಲಾಪುರ ಸೇರಿ ಎಲ್ಲೆಲ್ಲಿ ಅಹಿತಕರ ಘಟನೆಗಳು ಸಂಭವಿಸಿವೆಯೋ ಅಲ್ಲೆಲ್ಲಾ ಸೂಕ್ತ ಬಂದೋಬಸ್ತ್ ನೀಡಬೇಕು. ಕರ್ನಾಟಕದ ವಿವಿಧ ಭಾಗದಲ್ಲಿ ನಾವು ಬಂದೋಬಸ್ತ್ ನೀಡುವ ಬಗ್ಗೆ ಉನ್ನತ ಮಟ್ಟದಲ್ಲಿ ಅವರು ಚರ್ಚಿಸಿದ್ದಾರೆ. ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಗಮನಕ್ಕೂ ತರಲಿದ್ದಾರೆ'' ಎಂದರು.