ಕರ್ನಾಟಕ

karnataka

ETV Bharat / state

ಕರ್ನಾಟಕವು ದೇಶದ ಯಂತ್ರೋಪಕರಣಗಳ ರಾಜಧಾನಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ - MACHINERY CAPITAL

ಭಾರತದ ಯಂತ್ರೋಪಕರಣ ಉದ್ಯಮದಲ್ಲಿ ಕರ್ನಾಟಕ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ ಎಂದು ಕೇಂದ್ರ ಸಚಿವ ಹೆಚ್​​.ಡಿ.ಕುಮಾರಸ್ವಾಮಿ ತಿಳಿಸಿದರು.

ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ
ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ (ETV Bharat)

By ETV Bharat Karnataka Team

Published : Jan 24, 2025, 9:36 AM IST

ಬೆಂಗಳೂರು: ಯಂತ್ರೋಪಕರಣ ಕ್ಷೇತ್ರವು ಉತ್ಪಾದನಾ ವಲಯಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಭಾರತದ ಯಂತ್ರೋಪಕರಣಗಳಲ್ಲಿ ಕರ್ನಾಟಕ ಶೇ.50ರಷ್ಟು ಉತ್ಪಾದನೆ ಪಾಲು ಹೊಂದಿದೆ. ಆದ್ದರಿಂದ ರಾಜ್ಯ ದೇಶದ ಯಂತ್ರೋಪಕರಣಗಳ ರಾಜಧಾನಿ ಎಂದು ಪ್ರಖ್ಯಾತಿ ಆಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಬೆಂಗಳೂರಿನ ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ ನಡೆದ ಭಾರತೀಯ ಯಂತ್ರೋಪಕರಣ ತಂತ್ರಜ್ಞಾನ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಯಂತ್ರೋಪಕರಣ ಕ್ಷೇತ್ರಕ್ಕೆ ಕರ್ನಾಟಕವು ಐದು ದಶಕಗಳ ಹಿಂದೆಯೇ ಬಲಿಷ್ಠವಾದ ಅಡಿಪಾಯ ಹಾಕಿದೆ. ಹಿಂದೂಸ್ತಾನ್ ಮಷಿನ್ ಅಂಡ್ ಟೂಲ್ಸ್ (HMT) ಈ ಕ್ಷೇತ್ರಕ್ಕೆ ಮಹೋನ್ನತ ಕೊಡುಗೆ ನೀಡಿ, ಉತ್ಪಾದನಾ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿತ್ತು. ಆಗಿನಿಂದಲೇ ಕರ್ನಾಟಕವು ನಾವೀನ್ಯತೆ ಮತ್ತು ಉತ್ಪಾದನಾ ಉತ್ಕೃಷ್ಟತೆಯನ್ನು ಪ್ರೋತ್ಸಾಹಿಸುವುದನ್ನು ಮುಂದುವರೆಸಿದೆ. ಪ್ರಸ್ತುತ, ಯಂತ್ರೋಪಕರಣ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಎಲ್ಲ ಆಯಾಮಗಳಲ್ಲಿಯೂ ಉತ್ತೇಜನ ನೀಡುತ್ತಿದೆ ಎಂದು ಸಚಿವರು ತಿಳಿಸಿದರು.

ತಂತ್ರಜ್ಞಾನದ ಉನ್ನತೀಕರಣ, ಕೌಶಲ್ಯ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ಭಾರತ ಸ್ಪಷ್ಟ ಗುರಿ ಹೊಂದಿದ್ದು, ಆ ನಿಟ್ಟಿನಲ್ಲಿ ಭಾರತೀಯ ಬಂಡವಾಳ ಸರಕುಗಳ ವಲಯದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮಹತ್ವದ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಎಂದು ಸಚಿವರು ಹೇಳಿದರು.

ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯವು ತುಮಕೂರಿನಲ್ಲಿ ಮಷಿನ್ ಅಂಡ್ ಟೂಲ್ ಪಾರ್ಕ್ ಸ್ಥಾಪನೆಗೆ ಉತ್ತೇಜನ ನೀಡಿದೆ ಮತ್ತು ಐಐಟಿ-ಮದ್ರಾಸ್‌ನಲ್ಲಿ ಸುಧಾರಿತ ಉತ್ಪಾದನಾ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರದಂತಹ ಉತ್ಕೃಷ್ಟತೆಯ ಕೇಂದ್ರಗಳನ್ನು ಸ್ಥಾಪಿಸಲು ಉದ್ಯಮ ಮತ್ತು ಅಕಾಡೆಮಿಗಳೊಂದಿಗೆ ಪಾಲುದಾರಿಕೆ ಹೊಂದಿದೆ ಎಂದು ಕುಮಾರಸ್ವಾಮಿ ಮಾಹಿತಿ ನೀಡಿದರು.

ಶೀಘ್ರದಲ್ಲಿ ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ - 2025:ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿ - 2025 ರೂಪಿಸಲು ನಮ್ಮ ಸಚಿವಾಲಯ ಕೆಲಸ ಮಾಡುತ್ತಿದೆ. ಈ ವಲಯದಲ್ಲಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡುವತ್ತ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಆದಷ್ಟು ಬೇಗ ಈ ನೀತಿಯು ಹೊರಬರಲಿದೆ ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.

ರಾಷ್ಟ್ರೀಯ ಬಂಡವಾಳ ಸರಕುಗಳ ನೀತಿಯು ನಾವೀನ್ಯತೆಯನ್ನು ಉತ್ತೇಜಿಸಲು, ಆಮದು ಮೇಲಿನ ಅವಲಂಬನೆ ಕಡಿಮೆ ಮಾಡಲು ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ವ್ಯವಸ್ಥಿತವಾದ ಚೌಕಟ್ಟು ಒದಗಿಸಲಿದೆ ಎಂದರು.

ಮಳಿಗೆಗಳಿಗೆ ಭೇಟಿ ಕೊಟ್ಟ ಕೇಂದ್ರ ಸಚಿವರು:ಈ ಪ್ರದರ್ಶನದಲ್ಲಿ 23 ದೇಶಗಳಿಂದ 1,100ಕ್ಕೂ ಹೆಚ್ಚು ಪ್ರದರ್ಶಕರು ಪಾಲ್ಗೊಂಡಿದ್ದಾರೆ. ಯಂತ್ರೋಪಕರಣ ಉದ್ಯಮಕ್ಕೆ ಇದು ಅತ್ಯುತ್ತಮ ವೇದಿಕೆ ಆಗಿದೆ ಎಂದರು. ಮಳಿಗೆಗಳಿಗೆ ಭೇಟಿ ನೀಡಿದ ಸಚಿವ ಕುಮಾರಸ್ವಾಮಿ, ಯತ್ರೋಪಕರಣ ಉದ್ಯಮದ ಆವಿಷ್ಕಾರ ಮತ್ತು ನಾವೀಣ್ಯತೆಯನ್ನು ಖುದ್ದು ವೀಕ್ಷಿಸಿದರು. ಇದೇ ವೇಳೆ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಚ್​​ಎಂಟಿ ಮಳಿಗೆಗೆ ಭೇಟಿ ನೀಡಿದರು.

ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಎಂ.ಬಿ.ಪಾಟೀಲ್ ಸೇರಿ ಅನೇಕರು ಉಪಸ್ಥಿತರಿದ್ದರು.

ಇದನ್ನೂ ಓದಿ: ರೀಚಾರ್ಜ್​ ಮಾಡದೇ ಸಿಮ್​ ಎಷ್ಟು ದಿನ ಬಳಸಬಹುದು?: ಡೇಟಾರಹಿತ ವಾಯ್ಸ್​ ಕರೆಗಳ ಪ್ಲಾನ್​ ಹೀಗಿದೆ.. ಟ್ರಾಯ್​​ ಹೇಳುವುದೇನು?

ಇದನ್ನೂ ಓದಿ: ಕುಂಭಮೇಳ: ಜನದಟ್ಟಣೆ, ಕಾಲ್ತುಳಿತ ತಡೆಗೆ AI ತಂತ್ರಜ್ಞಾನ ಅಳವಡಿಕೆ

ABOUT THE AUTHOR

...view details