ಬೆಂಗಳೂರು:ಕಿಂಗ್‌ಫಿಶರ್ ಏರ್‌ಲೈನ್ಸ್ ಲಿಮಿಟೆಡ್ ಮತ್ತು ಡೆಕ್ಕನ್ ಏವಿಯೇಷನ್ ಲಿಮಿಟೆಡ್‌ನ ವಿಲೀನ ಪ್ರಕ್ರಿಯೆಯಲ್ಲಿ ಮೋಸ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ಕಿಂಗ್‌ಫಿಶರ್ ಮಾಜಿ ಮಾಲೀಕ ವಿಜಯ್ ಮಲ್ಯ, ಏರ್ ಡೆಕ್ಕನ್ ಸಂಸ್ಥಾಪಕ ಆರ್ ಗೋಪಿನಾಥ್ ವಿರುದ್ಧ ಗಂಭೀರ ವಂಚನೆ ತನಿಖೆ ಕಚೇರಿ(ಎಸ್‌ಎಫ್‌ಐಒ)ಯಿಂದ ತನಿಖೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಕಿಂಗ್‌ಫಿಶರ್, ಡೆಕ್ಕನ್ ಚಾರ್ಟರ್ಸ್, ಕ್ಯಾಪ್ಟನ್ ಗೋಪಿನಾಥ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಏಕ ಸದಸ್ಯ ಪೀಠ, ಎರಡೂ ಕಂಪನಿಗಳ ವಿಲೀನ ಪ್ರಕ್ರಿಯೆ ಕುರಿತಂತೆ, ನ್ಯಾಯಾಲಯದ ಅನುಮತಿಯ ಬಳಿಕ ನಡೆದಿದೆ. ಆದ್ದರಿಂದ ಎಸ್‌ಎಫ್‌ಐಒ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಯಾವುದೇ ಬಾಧಿತರು ಈ ಸಂಬಂಧ ದೂರು ನೀಡಿಲ್ಲ ಎಂಬುದಾಗಿ ಪೀಠ ತಿಳಿಸಿದೆ.
ಪ್ರಾಸಿಕ್ಯೂಷನ್ ಆರೋಪಿಸಿರುವಂತೆ ಘಟನೆ ನಡೆದಿರುವುದು 2007ರಲ್ಲಿ. ಆ ಸಂದರ್ಭದಲ್ಲಿ ಕಂಪನಿಗಳ ಕಾಯ್ದೆ 1956ರ ಜಾರಿಯಲ್ಲಿತ್ತು. ಆದರೆ, 2013ರ ಕಂಪನಿ ಕಾಯ್ದೆ ಅಡಿ ಪ್ರಕ್ರಿಯೆ ಪ್ರಾರಂಭಿಸಿರುವುದು ನಿಯಮಬಾಹಿರವಾಗಿದೆ. 2013ರ ಕಾಯ್ದೆ ಅಡಿ ವಿಶೇಷ ನ್ಯಾಯಾಲಯದ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ಕಂಪನಿಗಳ ಕಾಯ್ದೆ 1956ರ ಅಡಿ ಆರೋಪಕ್ಕೆ 2013ರ ಕಂಪನಿ ಕಾಯ್ದೆ ಅಡಿ ವಿಚಾರಣೆ ನಡೆಸಲಾಗದು. ಈ ಕ್ರಮವು ಪೂರ್ವಾನ್ವಯ ಅಪರಾಧೀಕರಣದಿಂದ ರಕ್ಷಣೆ ಒದಗಿಸುವ ಸಂವಿಧಾನದ ಅಡಿ ದೊರೆತಿರುವ 20 (1)ನೇ ವಿಧಿಯ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್ ತಿಳಿಸಿದೆ.
ಅಲ್ಲದೆ, ಆರೋಪಿಗಳಿಗೆ ಎಸ್‌ಎಫ್‌ಐಒ ವಿಶೇಷ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 204 ಅಡಿಯಲ್ಲಿ ಜಾರಿ ಮಾಡಿರುವ ಪ್ರಕ್ರಿಯೆಯು ಅಸಿಂಧುವಾಗಲಿದೆ. ಜತೆಗೆ, ವಿಶೇಷ ನ್ಯಾಯಾಲಯವು ಮೊದಲಿಗೆ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡದೆ ಬಂಧನ ವಾರೆಂಟ್ ಹೊರಡಿಸಿದೆ. ಇದು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ:ಕಡಿಮೆ ದರದ ಏರ್ಲೈನ್ ಡೆಕ್ಕನ್ ಏರ್ ಅನ್ನು ವಶಪಡಿಸಿಕೊಳ್ಳುವಾಗ ಕಿಂಗ್‌ಫಿಶರ್ 1,234 ಕೋಟಿ ನಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ಅರ್ಹತಾ ಷರತ್ತುಗಳನ್ನು ಪೂರೈಸದೇ ವಿಲೀನ ಪ್ರಕ್ರಿಯೆ ನಡೆಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಬಂಡವಾಳ ಲಾಭದ ಮೇಲಿನ ತೆರಿಗೆಯನ್ನು ತಪ್ಪಿಸಲು ಮತ್ತು ಡೆಕ್ಕನ್ ಏರ್ನ ಹೂಡಿಕೆದಾರರನ್ನು ವಂಚಿಸಲು ವಿಲೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ಕಿಂಗ್‌ಫಿಶರ್ ಮತ್ತು ಇತರರ ವಿರುದ್ಧ ಎಸ್‌ಎಫ್‌ಐಒ ತನಿಖೆ ಆರಂಭಿಸಿತ್ತು.
ಬಂಡವಾಳ ಲಾಭ ತೆರಿಗೆ ತಪ್ಪಿಸಲು ಕಿಂಗ್‌ಫಿಶರ್ ಕೃತಕ ವಿಭಜಿತ ಸಂಸ್ಥೆಯ ಮೂಲಕ ಡೆಕ್ಕನ್ ಏರ್ ವಿಲೀನ ಪ್ರಕ್ರಿಯೆ ನಡೆಸಿದೆ. ವಿಲೀನ ಪ್ರಕ್ರಿಯೆ ನಂತರ ದೊರೆತ ಬ್ರ್ಯಾಂಡ್ ಮೌಲ್ಯ ಬಳಸಿ ಹೆಚ್ಚುವರಿ ಹಣಕಾಸಿನ ನೆರವು ಪಡೆದಿದೆ. ಇದನ್ನು ಕಿಂಗ್‌ಫಿಶರ್ ಮುಖ್ಯಸ್ಥ ವಿಜಯ್ ಮಲ್ಯ ಇತರರು ನಡೆಸಿದ್ದಾರೆ ಎಂಬುದು ಆರೋಪವಾಗಿತ್ತು. ಕಿಂಗ್‌ಪಿಶರ್ ಏರ್‌ಲೈನ್ಸ್ ನಿರ್ದೇಶಕ ಮತ್ತು ಯುನೈಟೆಡ್ ಬ್ರೀವರೀಸ್ ಸಮೂಹದ ಪ್ರಧಾನ ಹಣಕಾಸು ಅಧಿಕಾರಿ ಎ.ಕೆ. ರವಿ ನೆಡುಂಗಡಿ, ಯುನೈಟೆಡ್ ಬ್ರೀವರೀಸ್ ಖಜಾಂಚಿ ಎ. ಹರೀಶ್ ಭಟ್, ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಸಿಎಫ್‌ಓ ಎ ರಘುನಾಥನ್, ಕಿಂಗ್‌ಫಿಶರ್ ಏರ್‌ಲೈನ್ಸ್ ಕಂಪನಿ ಕಾರ್ಯದರ್ಶಿ ಭರತ್ ವೀರರಾಘವನ್, ಡೆಕ್ಕನ್ ಏರ್ ಸಂಸ್ಥಾಪಕ ಕ್ಯಾಪ್ಟರ್ ಆರ್ ಗೋವಿನಾಥ್, ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಲಿಮಿಟೆಡ್‌ನ ಅಧ್ಯಕ್ಷ ಸುಪ್ರತಿಮ್ ಸರ್ಕಾರ್ ಮತ್ತಿರರನ್ನು ಆರೋಪಿಗಳನ್ನಾಗಿಸಲಾಗಿತ್ತು.
ಈ ಕುರಿತಂತೆ 2018ರಲ್ಲಿ ವಿಚಾರಣೆ ನಡೆಸಿದ್ದ ಬೆಂಗಳೂರಿನ ವಿಶೇಷ ನ್ಯಾಯಾಲಯವು ಮಲ್ಯ ಮತ್ತು ಇತರರ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಿತ್ತು. ವಾರೆಂಟ್ ಮತ್ತು ಎಸ್‌ಎಫ್‌ಐಒ ಪ್ರಕ್ರಿಯೆ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಕದ ತಟ್ಟಿದ್ದರು. ಇದರಲ್ಲಿ ಮಲ್ಯ ಅರ್ಜಿ ಸಲ್ಲಿಸಿರಲಿಲ್ಲ ಎಂಬುದು ಉಲ್ಲೇಖನೀಯ.
ಇದನ್ನೂ ಓದಿ:ಕೆಎಸ್ಪಿಸಿಬಿ ಸದಸ್ಯ ಕಾರ್ಯದರ್ಶಿ ನೇಮಕಾತಿಗೆ ನೀಡಿದ್ದ ತಡೆ ಆದೇಶ ಮುಂದುವರಿಸಲು ಹೈಕೋರ್ಟ್ ನಿರಾಕರಣೆ - High Court