ಬೆಂಗಳೂರು: ಶ್ವಾನಗಳಲ್ಲಿಯೇ ಅತ್ಯಂತ ಅಪಾಯಕಾರಿ ಹಾಗೂ ಕ್ರೂರವಾಗಿರುವ ತಳಿಗಳ ಸಂತಾನೋತ್ಪತ್ತಿ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಇಂದು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಬೆಂಗಳೂರು ನಿವಾಸಿಗಳಾದ ಕಿಂಗ್ ಸೋಲ್ಮನ್ ಡೇವಿಡ್ ಮತ್ತು ಮರ್ಡೋನಾ ಜಾನ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿತು.
ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸುವುದಕ್ಕೂ ಮುನ್ನ ಸಂಬಂಧಿತ ಯಾರ ಅಭಿಪ್ರಾಯವನ್ನೂ ಆಲಿಸಿಲ್ಲ. ಪ್ರಾಣಿಗಳ ಮೇಲಿನ ಹಿಂಸೆ ನಿಷೇಧ ಕಾಯಿದೆಗೆ ಪೂರಕವಾಗಿ ಸಮಿತಿ ಇಲ್ಲ. ಸೂಕ್ತ ಸಮಿತಿಯ ಶಿಫಾರಸು ಆಧರಿಸದೇ ಕೇಂದ್ರ 23 ಶ್ವಾನ ತಳಿಗಳನ್ನು ನಿಷೇಧಿಸಬಾರದಿತ್ತು. ಹಾಲಿ ಜಾರಿಯಲ್ಲಿರುವ ನಿಯಮಗಳಿಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ನಿಷೇಧ ಆದೇಶ ಮಾಡಬಾರದಿತ್ತು. ಪ್ರಾಣಿ ಜನನ ನಿಯಂತ್ರಣ ನಿಯಮಗಳನ್ನು ಮೀರಿ ಸುತ್ತೋಲೆ ಹೊರಡಿಸಲಾಗಿದೆ. ಹೀಗಾಗಿ ಸುತ್ತೋಲೆ ಕಾನೂನಿಗೆ ವಿರುದ್ಧವಾಗಿದೆ ಎಂದು ಪೀಠ ಹೇಳಿದೆ.
ಸಂಬಂಧಿತ ಎಲ್ಲರ ಜತೆ ಸಮಾಲೋಚನೆ ನಡೆಸಿ, ತಿದ್ದುಪಡಿಯ ಮೂಲಕ ಕೇಂದ್ರ ಸರ್ಕಾರವು ಹೊಸ ಸುತ್ತೋಲೆ ಹೊರಡಿಸಬಹುದಾಗಿದೆ. ಶ್ವಾನ ತಳಿ ಪ್ರಮಾಣೀಕರಿಸುವ ಸಂಸ್ಥೆಗಳು ಮತ್ತು ಪ್ರಾಣಿ ದಯಾ ಸಂಘಟನೆಯ ಸಂಘಟನೆಗಳನ್ನು ಸರ್ಕಾರ ಕಡ್ಡಾಯವಾಗಿ ಆಲಿಸಬೇಕು. ಶ್ವಾನದ ಮಾಲೀಕರ ಜವಾಬ್ದಾರಿಯು ನೈತಿಕ ಜವಾಬ್ದಾರಿ ಹೊಂದುವುದಕ್ಕೆ ಮಾತ್ರ ಸೀಮಿತವಾಗಬಾರದು. ಶ್ವಾನದಿಂದ ಹಾನಿಗೊಳಗಾದ ವ್ಯಕ್ತಿಯ ಇಡೀ ಚಿಕಿತ್ಸೆಗೆ ಹೊಣೆಗಾರರನ್ನಾಗಿ ಮಾಡುವುದರ ಜೊತೆಗೆ ಹಾನಿಗೆ ಪ್ರತ್ಯೇಕ ಪರಿಹಾರಕ್ಕೂ ಅವರನ್ನು ಹೊಣೆಗಾರರನ್ನಾಗಿಸಬೇಕು ಎಂದು ಪೀಠ ತಿಳಿಸಿದೆ.
ಕ್ರೂರ ಹಾಗೂ ಅಪಾಯಕಾರಿ ಶ್ವಾನಗಳ ತಳಿಗಳಾದ ಅಮೆರಿಕನ್ ಸ್ಟಾಫರ್ಡ್‌ಶೈರ್ ಟೆರಿಯರ್, ಡೊಗೊ ಅರ್ಜೆಂಟಿನೊ, ಬುಲ್ ಡಾಗ್, ಕಂಗಾಲ್, ಸೆಂಟ್ರಲ್ ಏಷ್ಯನ್ ಶಫರ್ಡ್ ಡಾಗ್ ಸೇರಿದಂತೆ ಮಿಶ್ರ ತಳಿಯ ಶ್ವಾನಗಳ ಸಂತಾನೋತ್ಪತ್ತಿ ನಿಷೇಧಿಸುವ ಸಲುವಾಗಿ ಅವುಗಳ ಮಾಲೀಕರು ಸಂತಾನ ಹರಣಕ್ಕಾಗಿ ಅಗತ್ಯವಿರವ ಕ್ರಿಮಿನಾಶಕಗಳನ್ನು ಬಳಕೆ ಮಾಡಬೇಕು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಈ ವರ್ಷ ಮಾರ್ಚ್ 12ರಂದು ಹೊರಡಿಸಿದ್ದ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಇದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ನ್ಯಾಯಾಲಯ ಆದೇಶ ಪಾಲಿಸದ ಸರ್ಕಾರದ ಪ್ರಾಧಿಕಾರಗಳು: ಹೈಕೋರ್ಟ್‌ನಲ್ಲಿ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಅರ್ಜಿ ದಾಖಲು - High Court