ಬೆಂಗಳೂರು: ಉಡುಪಿಯಲ್ಲಿ 44 ವರ್ಷಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬರನ್ನು ಕಾನೂನು ಪ್ರಕ್ರಿಯೆಗಳಿಂದ ಹೈಕೋರ್ಟ್ ಮುಕ್ತಗೊಳಿಸಿ ಆದೇಶಿಸಿದೆ.
44 ವರ್ಷಗಳ ಹಿಂದೆ ನಡೆದ ಪ್ರಕರಣದಲ್ಲಿ ತನಿಖೆ ಪ್ರಾರಂಭಿಸಿದ್ದ ಉಡುಪಿ ಪೊಲೀಸರು ಮತ್ತು ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ಆರೋಪಿ ಸೀತಾರಾಮ ಭಟ್ ಎಂಬುವರು ಹೈಕೋರ್ಟ್ಗೆ ಅರ್ಜಿ ಸಲ್ಲಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣವನ್ನು ಮುಕ್ತಾಯಗೊಳಿಸಿ ಆದೇಶಿಸಿದೆ.
ಅಲ್ಲದೆ, ಕಳೆದ 44 ವರ್ಷದ ಹಿಂದಿನ ಈ ಪ್ರಕರಣದ ಪ್ರಮುಖ ಪ್ರತ್ಯಕ್ಷ ಸಾಕ್ಷಿಗಳು ಈಗ ಲಭ್ಯರಿಲ್ಲ. ಜೊತೆಗೆ ಇಬ್ಬರು ಸಹ ಆರೋಪಿಗಳನ್ನು ಪ್ರತ್ಯಕ್ಷ ಸಾಕ್ಷಿಗಳು ಗುರುತು ಹಿಡಿಯಲು ವಿಫಲವಾಗಿದ್ದರಿಂದ ಅವರು ಖುಲಾಸೆಯಾಗಿದ್ದಾರೆ. ಇದೇ ಸ್ಥಿತಿ ಈ ಪ್ರಕರಣಕ್ಕೂ ಆಗಲಿದೆ. ನ್ಯಾಯಾಲಯದ ಅತ್ಯಮೂಲ್ಯ ಸಮಯ ಉಳಿಸುವ ದೃಷ್ಟಿಯಿಂದ ಮತ್ತು ಅಮೂಲ್ಯವಾದ ನ್ಯಾಯಿಕ ಸಂಪನ್ಮೂಲ ಉಳಿಸುವ ದೃಷ್ಟಿಯಿಂದ ರಾಜ್ಯದ ಕ್ರಿಮಿನಲ್ ನ್ಯಾಯದಾನ ಪ್ರಕ್ರಿಯೆಯಲ್ಲಿನ ಅತ್ಯಂತ ಹಳೆಯ ಪ್ರಕರಣಗಳಲ್ಲಿ ಒಂದಾಗಿರುವ ಈ ಪ್ರಕರಣವನ್ನು ಕೈ ಬಿಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟು ವಿಚಾರಣೆಯನ್ನು ಮುಕ್ತಾಯಗೊಳಿಸಿತು.
ಪ್ರಕರಣದ ಹಿನ್ನೆಲೆ: 1979ರ ಜೂನ್ 8 ರಂದು ಉಡುಪಿಯ ಅದಮಾರು ಮಠಕ್ಕೆ ಸಂಬಂಧಿಸಿದ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆ ಜಮೀನಿನಲ್ಲಿ ಬೋಗ್ಯದಲ್ಲಿದ್ದ ಅರ್ಜಿದಾರ ಸೀತಾರಾಮ ಭಟ್ ಮತ್ತು ಕಿಟ್ಟ ಅಲಿಯಾಸ್ ಕೃಷ್ಣಪ್ಪ ಎಂಬವರು ಸೇರಿಕೊಂಡು ನಾರಾಯಣ ನಾಯರ್ ಹಾಗೂ ಕುಂಜ್ಞಿ ರಾಮ ಅವರ ಮೇಲೆ ಚೂರಿಯಿಂದ ದಾಳಿ ನಡೆಸಿದ್ದ ಆರೋಪವಿತ್ತು. ಘಟನೆಯಲ್ಲಿ ಕುಂಜ್ಞಿ ರಾಮ ಸಾವನ್ನಪ್ಪಿದ್ದರು. ಈ ಸಂಬಂಧ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂದರ್ಭದಲ್ಲಿ ಸೀತಾರಾಮ ಭಟ್ ಮತ್ತು ಕಿಟ್ಟರ ಜೊತೆ ಸಂಜೀವ ಹಂಡ, ಬಸವ ಹಂಡ ಮತ್ತು ಚಂದ್ರಶೇಖರ್ ಭಟ್ ಎಂಬುವರೂ ಆರೋಪಿಗಳಾಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸೀತಾರಾಮ್ ಭಟ್ ಮತ್ತು ಕಿಟ್ಟನ ಮೇಲಿನ ಆರೋಪ ಸಾಬೀತಾಗಿತ್ತು. ಆದರೆ ಮೇಲ್ಮನವಿಯಲ್ಲಿ ಕಿಟ್ಟ ಖುಲಾಸೆಗೊಂಡಿದ್ದ. ಸಹ ಆರೋಪಿಗಳಾಗಿದ್ದ ಸಂಜೀವ ಹಂಡ, ಬಸವ ಹಂಡ ಖುಲಾಸೆಗೊಂಡಿದ್ದರು.
ಆದರೆ, ಇತ್ತೀಚೆಗೆ ಉಡುಪಿ ಪೊಲೀಸರು ಚಂದ್ರಶೇಖರ್ ಭಟ್ ವಿಚಾರಣೆಯ ಸಂದರ್ಭದಲ್ಲಿ ತಲೆಮರೆಸಿಕೊಂಡಿದ್ದ ಎಂದು ಆರೋಪಿಸಿ ವಿಚಾರಣೆ ಆರಂಭಿಸಲು ಮುಂದಾಗಿದ್ದರು. ಈ ನಡುವೆ ಚಂದ್ರಶೇಖರ್ ಭಟ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನನ್ನು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಚಂದ್ರಶೇಖರ್ ಭಟ್ ಪರ ವಕೀಲರು, ನಮ್ಮ ಕಕ್ಷಿದಾರರು ಕಳೆದ 1979 ರಿಂದ 2022ರ ವರೆಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಈವರೆಗೂ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವ ಸಂಬಂಧ ಸಮನ್ಸ್ ಅಥವಾ ವಾರಂಟ್ ಆಗಲಿ ಜಾರಿಯಾಗಿರಲಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇದನ್ನೂ ಓದಿ:ಮಾನಸಿಕ ಅಸ್ವಸ್ಥರ ಹೇಳಿಕೆ ದಾಖಲಿಸುವಾಗ ಅನುವಾದಕ, ವಿಡಿಯೋಗ್ರಫಿ ಮಾಡುವುದು ಕಡ್ಡಾಯ: ಹೈಕೋರ್ಟ್