ಕರ್ನಾಟಕ

karnataka

ETV Bharat / state

ಗ್ಯಾರಂಟಿ, ಬರ, ತೆರಿಗೆ ಸಂಗ್ರಹ ಕುಂಠಿತ ಎಫೆಕ್ಟ್: ಸಾಲದ ಮೊರೆ ಹೋದ ರಾಜ್ಯ ಸರ್ಕಾರ

ಬರ ನಿರ್ವಹಣೆ, ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಮುಟ್ಟದ ಕಾರಣ ರಾಜ್ಯ ಸರ್ಕಾರಕ್ಕೆ ಹಣಕಾಸು ನಿರ್ವಹಣೆ ಸವಾಲಾಗಿದೆ. ಹೀಗಾಗಿ ಪ್ರಸಕ್ತ ತ್ರೈಮಾಸಿಕದಲ್ಲಿ ಸರ್ಕಾರ ಹೆಚ್ಚಿನ ಸಾಲದ ಮೊರೆ ಹೋಗಿದೆ.

By ETV Bharat Karnataka Team

Published : Feb 4, 2024, 8:06 AM IST

Updated : Feb 4, 2024, 8:45 AM IST

Etv Bharat Assembly
ವಿಧಾನಸಭೆ

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಬಾರಿ ಪಂಚ ಗ್ಯಾರಂಟಿಯ ಹೊರೆ ಹಾಗೂ ಬರದ ಬರೆಯ ಮಧ್ಯೆ ಬಜೆಟ್ 2024-25 ಮಂಡಿಸಲಿದೆ. ಒಂದೆಡೆ ಕೇಂದ್ರದಿಂದ ಬಾರದ ನಿರೀಕ್ಷಿತ ಅನುದಾನ, ಮತ್ತೊಂದೆಡೆ ತೆರಿಗೆ ಸಂಗ್ರಹ ಕುಂಠಿತದಿಂದಾಗಿ ಸರ್ಕಾರ ಕೊನೇಯ ತ್ರೈಮಾಸಿಕದಲ್ಲಿ ಹೆಚ್ಚಿನ ಸಾಲದ ಮೊರೆ ಹೋಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಸರ್ಕಾರ ಈವರೆಗೆ ಮಾಡಿದ ಸಾಲದ ಸ್ಥಿತಿಗತಿಯ ಸಮಗ್ರ ವರದಿ ಇಲ್ಲಿದೆ.

2023-24ನೇ ಆರ್ಥಿಕ ವರ್ಷ ಮುಕ್ತಾಯದ ಅಂಚಿಗೆ ಬಂದಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಗೆ ತಯಾರಿ ಆರಂಭಿಸಿದ್ದಾರೆ. ಆದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆರ್ಥಿಕ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಹೀಗಾಗಿ, ಹಣಕಾಸು ನಿರ್ವಹಣೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಪಂಚ ಗ್ಯಾರಂಟಿಗಳ ಹೊರೆಯ ಮಧ್ಯೆ ಬರಸಿಡಿಲಿನಂತೆ ಹೊಡೆದ ಬರ ರಾಜ್ಯದ ಆರ್ಥಿಕ ಸ್ಥಿತಿಗೆ ಸಂಕಷ್ಟ ತಂದೊಡ್ಡಿದೆ.

ತೆರಿಗೆ ಸಂಗ್ರಹ ನಿರೀಕ್ಷಿತ ಗುರಿ ಮುಟ್ಟದ ಕಾರಣ ಬಜೆಟ್​​ನಲ್ಲಿ ಅಂದಾಜಿಸಿದಂತೆ ಸಾಲದ ಮೊರೆ ಹೋಗುವುದು ಅನಿವಾರ್ಯವಾಗಿದೆ.‌ 2023-24ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರ ಕೇಂದ್ರ ಸರ್ಕಾರದಿಂದ 6,254 ಕೋಟಿ ರೂ. ಸಾಲ ಮಾಡಲು ಮುಂದಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ 78,363 ಕೋಟಿ ರೂ., ಎಲ್ಐಸಿ, ಎನ್​​ಎಸ್ಎಸ್ಎಫ್, ಎನ್​​ಸಿಡಿಸಿಯಿಂದ 1,201 ಕೋಟಿ ರೂ. ಸೇರಿ ಒಟ್ಟು ಅಂದಾಜು 85,818 ಕೋಟಿ ರೂ. ಸಾಲ ಪಡೆಯಲು ಅಂದಾಜಿಸಿದೆ.

ವೇಗ ಪಡೆದ ಸಾಲ ಎತ್ತುವಳಿ:ಪಂಚ ಗ್ಯಾರಂಟಿ ಹಾಗೂ ಬರ ನಿರ್ವಹಣೆಯ ಜೊತೆಗೆ ಇತ್ತ ತೆರಿಗೆ ಸಂಗ್ರಹ ನಿಗದಿತ ಗುರಿ ಮುಟ್ಟದಿರುವ ಕಾರಣ ಸರ್ಕಾರ ಕಳೆದೊಂದು ತಿಂಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮುಕ್ತ ಮಾರುಕಟ್ಟೆಯಿಂದ ಸಾಲ ಎತ್ತುವಳಿ ಮಾಡುತ್ತಿದೆ. ಆರ್​ಬಿಐ ಮೂಲಕ ರಾಜ್ಯ ಅಭಿವೃದ್ಧಿ ಸಾಲದ ಮೂಲಕ ಮುಕ್ತ ಮಾರುಕಟ್ಟೆಯಿಂದ ಹೆಚ್ಚಿನ ಸಾಲವನ್ನು ಅಕ್ಟೋಬರ್ 17ರಿಂದ ಎತ್ತುವಳಿ ಆರಂಭಿಸಿದೆ. ಕಳೆದ ಎರಡು ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರ ಯಾವುದೇ ಸಾಲ ಎತ್ತುವಳಿ ಮಾಡಿರಲಿಲ್ಲ. ಮೂರನೇ ತ್ರೈಮಾಸಿಕದಲ್ಲಿ ಆರ್​​ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಲ್ಲಿ ಸಾಲ ಎತ್ತುವಳಿ ಮಾಡಲು ಆರಂಭಿಸಿದೆ. ಅದರಲ್ಲೂ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ಹೆಚ್ಚಿನ ಸಾಲ ಪಡೆದಿದೆ.

ಆರ್​ಬಿಐ ಮೂಲಕ 47,000 ಕೋಟಿ ರೂ‌. ಸಾಲ:ಅಕ್ಟೋಬರ್ 17ರಿಂದ ಜನವರಿವರೆಗೆ ಆರ್​ಬಿಐ ಮೂಲಕ ಬಹಿರಂಗ ಮಾರುಕಟ್ಟೆಯಿಂದ ರಾಜ್ಯ ಅಭಿವೃದ್ಧಿ ಸಲುವಾಗಿ ರಾಜ್ಯ ಸರ್ಕಾರ ಸುಮಾರು 47,000 ಕೋಟಿ ರೂ‌. ಸಾಲ ಮಾಡಿದೆ.‌ ಅಕ್ಟೋಬರ್ 17ರಂದು 1,000 ಕೋಟಿ ರೂ., ಅ.23ರಂದು 2,000 ಕೋಟಿ ರೂ., ಅ.31ರಂದು 2,000 ಕೋಟಿ ರೂ., ನ.1ರಂದು 3,000 ಕೋಟಿ ರೂ., ನ.21ರಂದು 1,000 ಕೋಟಿ ರೂ., ಡಿ.5ರಂದು 4,000 ಕೋಟಿ ರೂ., ಡಿ.12ರಂದು 4,000 ಕೋಟಿ ರೂ. ಸಾಲ ಎತ್ತುವಳಿ ಮಾಡಿದೆ. ಡಿ.19ರಂದು 4,000 ಕೋಟಿ ರೂ. ಡಿ.26ರ‌ಂದು 3,000 ಕೋಟಿ ರೂ., ಜ.2ರಂದು 6,000 ಕೋಟಿ ರೂ., ಜ.9ರಂದು 7,000 ಕೋಟಿ ರೂ., ಜ.16ರಂದು 5,000 ಕೋಟಿ ರೂ., ಜ.23ರಂದು‌ 5,000 ಕೋಟಿ ರೂ. ಸಾಲ ಪಡೆದಿದೆ.

ಕೊನೆ ತ್ರೈಮಾಸಿಕದಲ್ಲಿ 58,000 ಕೋಟಿ ಸಾಲಕ್ಕೆ ನಿರ್ಧಾರ:ಇತ್ತ ಆರ್ಥಿಕ ವರ್ಷದ ಕೊನೆ ಮೂರು ತಿಂಗಳಲ್ಲಿ ಜನವರಿ-ಮಾರ್ಚ್‌ವರೆಗೆ ಆರ್​​ಬಿಐ ಮೂಲಕ ಮುಕ್ತ ಮಾರುಕಟ್ಟೆಯಿಂದ ಸುಮಾರು 58,000 ಕೋಟಿ ಸಾಲ ಮಾಡಲು ನಿರ್ಧರಿಸಿತ್ತು. ಫೆಬ್ರವರಿ ಮತ್ತು ಮಾರ್ಚ್​ನಲ್ಲಿ 32,000 ಕೋಟಿ ರೂ ಮುಕ್ತ ಮಾರುಕಟ್ಟೆ ಮೂಲಕ ಸಾಲ ಎತ್ತುವಳಿ ಮಾಡುವುದಾಗಿ ಆರ್​​ಬಿಐಗೆ ಮಾಹಿತಿ ನೀಡಿದೆ.‌ ಇತ್ತ ಆರ್ಥಿಕ ಇಲಾಖೆ ನೀಡಿರುವ ಅಂಕಿಅಂಶದ ಪ್ರಕಾರ ಕಳೆದ ಒಂಬತ್ತು ತಿಂಗಳಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕ ಸಾಲದ ಮೂಲಕ ಸುಮಾರು 32,290 ಕೋಟಿ ರೂ. ಸಾಲ ಮಾಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ನೂರು ರಾಮ ಮಂದಿರ ಜೀರ್ಣೋದ್ಧಾರಕ್ಕೆ ₹ 100 ಕೋಟಿ ಪ್ರಸ್ತಾವನೆ ಸಲ್ಲಿಸಿದ ಮುಜರಾಯಿ ಇಲಾಖೆ

Last Updated : Feb 4, 2024, 8:45 AM IST

ABOUT THE AUTHOR

...view details