ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಎಲೆಕ್ಟ್ರಿಕ್ ಬೈಕ್ ತಯಾರಿಕಾ ಘಟಕ ಸೇರಿ 64 ಸಂಸ್ಥೆಗಳಿಂದ ಹೂಡಿಕೆ: ಈ ಜಿಲ್ಲೆಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ - Investment Projects In Karnataka - INVESTMENT PROJECTS IN KARNATAKA

ರಾಜ್ಯದಲ್ಲಿ 3,587 ಕೋಟಿ ರೂ ಬಂಡವಾಳ ಹೂಡಿಕೆಯಾಗಲಿದ್ದು, 13,896 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಖನಿಜ ಭವನದಲ್ಲಿ ನಡೆದ ಸಭೆ
ಖನಿಜ ಭವನದಲ್ಲಿ ನಡೆದ ಸಭೆ (ETV Bharat)

By ETV Bharat Karnataka Team

Published : Jun 21, 2024, 9:30 PM IST

ಬೆಂಗಳೂರು: ಇಂಟರ್‌ನ್ಯಾಷನಲ್‌ ಬ್ಯಾಟರಿ ಕಂಪನಿ ಇಂಡಿಯಾ, ರಿವರ್‌ ಮೊಬಿಲಿಟಿ, ವೆಗಾ ಆಟೊ ಆ್ಯಕ್ಸೆಸರೀಸ್‌, ಮಿರ್ರಾ ಆ್ಯಂಡ್‌ ಮಿರ್ರಾ ಇಂಡಸ್ಟ್ರೀಸ್‌ ಸೇರಿದಂತೆ ಒಟ್ಟಾರೆ 64 ಯೋಜನೆಗಳಲ್ಲಿ 3,587 ಕೋಟಿ ರೂ ಬಂಡವಾಳ ಹೂಡಿಕೆಗೆ ಶುಕ್ರವಾರ ನಡೆದ 146ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 64 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆ ಮೂಲಕ ರಾಜ್ಯದಲ್ಲಿ 3,587 ಕೋಟಿ ರೂ ಬಂಡವಾಳ ಹೂಡಿಕೆಯಾಗಲಿದೆ. ಜೊತೆಗೆ 13,896 ಜನರಿಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ.

ಅನುಮೋದನೆ ಪಡೆದ ಯೋಜನೆಗಳಲ್ಲಿ ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ, ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ವಿದ್ಯುತ್‌ ಉತ್ಪಾದನಾ ಕೇಂದ್ರ ಹಾಗೂ ಹಾಲು ಉತ್ಪಾದನಾ ಘಟಕಗಳು ಸೇರಿವೆ. ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ಬೆಳಗಾವಿ, ತುಮಕೂರು, ಯಾದಗಿರಿ, ಹಾವೇರಿ, ಗದಗ, ಮೈಸೂರು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ದೊರೆಯಲಿದೆ.

ಇಂಟರ್‌ನ್ಯಾಷನಲ್‌ ಬ್ಯಾಟರಿ ಕಂಪನಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ದೇವನಹಳ್ಳಿ ಬಳಿ 390 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಿರುವ ಪ್ರೈಮರಿ ಸೆಲ್ಸ್‌ ಆ್ಯಂಡ್‌ ಬ್ಯಾಟರೀಸ್‌ ಘಟಕವು 300 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಿದೆ. ಬೆಂಗಳೂರು ಮೂಲದ ರಿವರ್‌ ಮೊಬಿಲಿಟಿ ಪ್ರೈವೇಟ್‌ ಲಿಮಿಟೆಡ್‌ ನವೋದ್ಯಮವು ಹೊಸಕೋಟೆ ಬಳಿ 306.9 ಕೋಟಿ ವೆಚ್ಚದಲ್ಲಿ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನ ತಯಾರಿಕಾ ಘಟಕ ಸ್ಥಾಪಿಸಲಿದೆ. ಇದರಿಂದ 690 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ವೆಗಾ ಆಟೊ ಆ್ಯಕ್ಸೆಸರೀಸ್‌ ಪ್ರೈವೇಟ್‌ ಲಿಮಿಟೆಡ್‌ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಇಪಿಎಸ್‌ ಲೀನರ್‌ ತಯಾರಿಕಾ ಘಟಕ ಸ್ಥಾಪಿಸಲು 205 ಕೋಟಿ ವೆಚ್ಚ ಮಾಡಲಿದೆ. ಮಿರ್ರಾ ಆ್ಯಂಡ್‌ ಮಿರ್ರಾ ಇಂಡಸ್ಟ್ರೀಸ್‌ ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ಉಕ್ಕಿನ ತಂತಿ ಸಂಸ್ಕರಣಾ ಘಟಕ ಸ್ಥಾಪಿಸಲು 200 ಕೋಟಿ ವೆಚ್ಚ ಹೂಡಿಕೆ ಮಾಡಲಿರುವ ಪ್ರಮುಖ ಯೋಜನೆಗಳಾಗಿವೆ.

ದಲಿತ ಉದ್ಯಮಿಗಳ ಸಮಸ್ಯೆ ಇತ್ಯರ್ಥಕ್ಕೆ ಉನ್ನತ ಮಟ್ಟದ ಸಮಿತಿ-ಸಚಿವ ಎಂ.ಬಿ.ಪಾಟೀಲ್:
ರಾಜ್ಯದ ದಲಿತ ಉದ್ಯಮಿಗಳು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದಿಂದ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಖನಿಜ ಭವನದಲ್ಲಿ ಶುಕ್ರವಾರ ನಡೆದ ರಾಜ್ಯಸಭೆ ಮಾಜಿ ಸದಸ್ಯ ಎಲ್.ಹನುಮಂತಯ್ಯ ಅಧ್ಯಕ್ಷತೆಯ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಸದಸ್ಯರ ಜತೆ ನಡೆದ ಸಭೆಯಲ್ಲಿ ಸಚಿವರು ಈ ಘೋಷಣೆ ಮಾಡಿದರು. ದಲಿತ ಉದ್ದಿಮೆದಾರರು ಎದುರಿಸುತ್ತಿರುವ ನಾನಾ ಸಮಸ್ಯೆಗಳನ್ನು ಆಲಿಸುವುದು ಮತ್ತು ಅದಕ್ಕೆ ಪರಿಹಾರ ಕಂಡುಹಿಡಿಯುವ ಕೆಲಸವನ್ನು ಈ ಸಮಿತಿ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ: ನೀವು SBI ಖಾತೆದಾರರಾ?, ಆಫ್​​ಲೈನ್​- ಆನ್​ಲೈನ್​ನಲ್ಲೂ ತಿಳಿಯಬಹುದು ಬ್ಯಾಂಕ್​ ಬ್ಯಾಲೆನ್ಸ್​​.. ಈ ಸ್ಟೆಪ್ಸ್​ಗಳನ್ನು ಫಾಲೋ ಮಾಡಿ! - Check Your SBI Account Balance

ನಿಯಮಗಳ ಪ್ರಕಾರ ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ದಿಮೆದಾರರಿಗೆ ಶೇಕಡ 24.10ರಷ್ಟು ಕೈಗಾರಿಕಾ ನಿವೇಶನಗಳನ್ನು ಹಂಚಲು ಸರ್ಕಾರ ಬದ್ಧವಾಗಿದೆ. ಇದರಂತೆ, ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನೂ 391 ಎಕರೆಯಷ್ಟು ಜಾಗವನ್ನು ಪರಿಶಿಷ್ಟರಿಗೆ ಹಂಚುವುದು ಬಾಕಿ ಇದ್ದು, ಆದಷ್ಟು ಬೇಗ ಹಂಚಿಕೆ ಮಾಡಲಾಗುವುದು. ಕೋವಿಡ್ ಪೂರ್ವದಲ್ಲಿ ಹಂಚಿಕೆಯಾಗಿರುವ ಫಲಾನುಭವಿಗಳಿಗೆ ಯೋಜನೆ ಜಾರಿ ಮತ್ತು ಹಣ ಪಾವತಿಗೆ ಈ ಹಿಂದೆ ಒಂದು ವರ್ಷ ನೀಡಿದ್ದ ವಿನಾಯಿತಿಯನ್ನು ಸಚಿವರು ಉದ್ದಿಮೆದಾರರ ಮನವಿ ಮೇರೆಗೆ ಎರಡು ವರ್ಷಗಳ ವಿನಾಯಿತಿ ನೀಡಿದರು.

ಹಳೇ ಕೈಗಾರಿಕಾ ಪ್ರದೇಶಗಳಲ್ಲಿ ಹಂಚಿಕೆಯಾಗದೆ ಉಳಿದಿರುವ ನಿವೇಶನಗಳ ಪೈಕಿ ಶೇ.25ರಷ್ಟು‌ ನಿವೇಶನಗಳನ್ನು ಪರಿಶಿಷ್ಟರಿಗೆ ಹಂಚಿಕೆ ಮಾಡಲಾಗುವುದು ಎಂದೂ ಸಚಿವರು ಸಭೆಗೆ ತಿಳಿಸಿದರು. ಕೆಲವು ಸಂದರ್ಭಗಳಲ್ಲಿ ದಲಿತ ಉದ್ದಿಮೆದಾರರ ಯೋಜನಾ ಪ್ರಸ್ತಾವನೆಗಳ ಸ್ವರೂಪ ಬದಲಾದಂತೆ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಕೈಗಾರಿಕಾ ನಿವೇಶನ ಕೊಡಲಾಗಿದೆ. ಇಂತಹ ಪ್ರಕರಣಗಳಲ್ಲಿ ಹೂಡಿಕೆಯು 15 ಕೋಟಿ ರೂ.ಗಳಿಗಿಂತ ಕಡಿಮೆಯಾಗಿದ್ದಲ್ಲಿ ಅಂತಹ ಪ್ರಕರಣಗಳನ್ನು ಆಯಾ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ವಹಿಸುವ ಬಗ್ಗೆ ಕ್ರಮವಹಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ದಾಬಸ್ ಪೇಟೆ, ಹಾಸನ, ಬಿಡದಿ ಸೇರಿದಂತೆ ಹಲವೆಡೆಗಳಲ್ಲಿ ಪರಿಶಿಷ್ಟರಿಗೆ ಕೊಟ್ಟಿರುವ ನಿವೇಶನಗಳಲ್ಲಿ ಸಮಸ್ಯೆ ಇದ್ದು, ಅದನ್ನು ಆದಷ್ಟು ಬೇಗ ಪರಿಹರಿಸುವ ಬಗ್ಗೆ ಕ್ರಮವಹಿಸಲಾಗಿದೆ ಎಂದರು.

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ, ಕೆಐಎಡಿಬಿ ಸಿಇಒ ಡಾ.ಆರ್. ಮಹೇಶ, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಇಂದೂಧರ ಹೊನ್ನಾಪುರ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ: ತುರ್ತು ಸಂದರ್ಭಗಳಲ್ಲಿ ನೆರವಾಗುವ ತುರ್ತು ನಿಧಿಯನ್ನು ಹೊಂದಿಸುವುದು ಹೇಗೆ? - Emergency fund

ABOUT THE AUTHOR

...view details