ಬೆಂಗಳೂರು:ದೇವಸ್ಥಾನಗಳ ಹುಂಡಿಗೆ ಬರುವ ಹಣದಲ್ಲಿ ಸಾಮಾನ್ಯ ಸಂಗ್ರಹಣ ನಿಧಿಗೆ ವಂತಿಗೆ ಸಂಗ್ರಹಿಸುವ ತಿದ್ದುಪಡಿ ವಿಧೇಯಕವನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಪ್ರತಿಪಕ್ಷಗಳ ಪ್ರಬಲ ವಿರೋಧದ ಮಧ್ಯೆ ಕಳೆದ ತಿಂಗಳ ಬಜೆಟ್ ಅಧಿವೇಶನದಲ್ಲಿ 2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ (ತಿದ್ದುಪಡಿ) ವಿಧೇಯಕವನ್ನು ಸರ್ಕಾರ ಮಂಡಿಸಿ ಅಂಗೀಕಾರ ಪಡೆದಿತ್ತು. ಬಳಿಕ ರಾಜ್ಯಪಾಲರ ಅಂಕಿತಕ್ಕಾಗಿ ವಿಧೇಯಕವನ್ನು ರಾಜಭವನಕ್ಕೆ ಕಳುಹಿಸಿಕೊಡಲಾಗಿತ್ತು. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೆಚ್ಚಿನ ಸ್ಪಷ್ಟೀಕರಣ ಕೋರಿ ಮಾ.14ರಂದು ವಿಧೇಯಕ ವಾಪಸ್ ಕಳಹಿಸಿದ್ದಾರೆ. ಹೆಚ್ಚಿನ ಮಾಹಿತಿ, ಸ್ಪಷ್ಟನೆಯೊಂದಿಗೆ ಮಸೂದೆಯನ್ನು ರಾಜ್ಯಪಾಲರ ಕಚೇರಿಗೆ ಮರುಸಲ್ಲಿಕೆ ಮಾಡುವಂತೆ ರಾಜಭವನ ಕಚೇರಿ ತಿಳಿಸಿದೆ.
ರಾಜ್ಯಪಾಲರು ವಿಧೇಯಕ ವಾಪಸ್ ಕಳುಹಿಸಲು ಕಾರಣ ಏನು?:ಕರ್ನಾಟಕ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆ 1997 ಮತ್ತು 2011 ಹಾಗೂ 2012ರಲ್ಲಿ ಮಾಡಲಾದ ತಿದ್ದುಪಡಿಗಳನ್ನು ಹೈಕೋರ್ಟ್ ಧಾರವಾಡ ಪೀಠ ಈಗಾಗಲೇ ವಜಾ ಮಾಡಿದೆ. ಧಾರವಾಡ ಹೈಕೋರ್ಟ್ ಪೀಠದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಧಾರವಾಡ ಹೈಕೋರ್ಟ್ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಪ್ರಕರಣದ ವಿಚಾರಣೆ ಅಂತಿಮ ಹಂತದಲ್ಲಿದೆ ಎಂದು ರಾಜ್ಯಪಾಲರು ಉಲ್ಲೇಖಿಸಿ ರಾಜ್ಯ ಸರ್ಕಾರದಿಂದ ಹೆಚ್ಚಿನ ಮಾಹಿತಿ ಕೋರಿದ್ದಾರೆ.
ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆಯಲ್ಲಿರುವಾಗ ಈ ಸಂಬಂಧ ತಿದ್ದುಪಡಿ ವಿಧೇಯಕ ತರಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟನೆಯ ಅಗತ್ಯವಿದೆ. ಈಗಾಗಲೇ ಈ ಹಿಂದಿನ ಕಾಯ್ದೆಯನ್ನೇ ಹೈಕೋರ್ಟ್ ವಜಾ ಮಾಡಿ, ಈಗ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆ ಅಂತಿಮ ಹಂತದಲ್ಲಿರುವಾಗ ತಿದ್ದುಪಡಿ ಮಾಡಬಹುದೇ ಎಂದು ಪ್ರಶ್ನಿಸಿ ಹೆಚ್ಚಿನ ಮಾಹಿತಿ, ಸ್ಪಷ್ಟನೆ ಕೋರಿದ್ದಾರೆ.
ಇತರ ಧಾರ್ಮಿಕ ಸಂಸ್ಥೆಗಳನ್ನೂ ಸೇರಿಸುತ್ತೀರಾ?:ರಾಜ್ಯಪಾಲರು ತಿದ್ದುಪಡಿ ವಿಧೇಯಕ ಸಂಬಂಧ ಕೇಳಿದ ಸ್ಪಷ್ಟನೆಯಲ್ಲಿ ಇದೇ ಮಾದರಿ ಇತರ ಧಾರ್ಮಿಕ ಸಂಸ್ಥೆಗಳನ್ನು ಸೇರಿಸಿ ವಿಧೇಯಕವನ್ನು ಮಾಡುವ ಚಿಂತನೆ ಇದೆಯೇ ಎಂಬ ಬಗ್ಗೆಯೂ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ವಾಪಸ್ ಕಳುಹಿಸಲಾದ ತಿದ್ದುಪಡಿ ವಿಧೇಯಕವನ್ನು ಹೆಚ್ಚಿನ ಮಾಹಿತಿ, ಸ್ಪಷ್ಟನೆಯೊಂದಿಗೆ ರಾಜ್ಯಪಾಲರಿಗೆ ಮರುಸಲ್ಲಿಕೆ ಮಾಡುವಂತೆ ಸರ್ಕಾರಕ್ಕೆ ರಾಜಭವನದ ಅಧಿಕಾರಿಗಳು ತಿಳಿಸಿದ್ದಾರೆ.