ಬೆಂಗಳೂರು: ರಾಜ್ಯದಲ್ಲಿ ಪ್ರಕರಣಗಳ ತನಿಖೆ ಸಂಬಂಧ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಮುಕ್ತ ಅನುಮತಿ ನೀಡಿರುವ ಅಧಿಸೂಚನೆ ವಾಪಸ್ ಪಡೆಯಲು ಇಂದು ನಡೆದ ಸಂಪುಟ ಸಭೆ ತೀರ್ಮಾನಿಸಿದೆ. ಹಾಗೆಯೇ, ರಾಜ್ಯಪಾಲರ ಯಾವುದೇ ಪತ್ರಗಳಿಗೆ ಮುಖ್ಯಕಾರ್ಯದರ್ಶಿ ಉತ್ತರಿಸದಂತೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ವಿಧಾನಸೌಧದಲ್ಲಿ ಇಂದು ಮೂಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ, ಕೈಗೊಂಡ ನಿರ್ಣಯಗಳ ಕುರಿತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಹೆಚ್.ಕೆ.ಪಾಟೀಲ್ ಸುದ್ದಿಗೋಷ್ಠಿ (ETV Bharat) ಸಿಬಿಐಗೆ ಮುಕ್ತ ಅನುಮತಿ ಕೊಟ್ಟ ಅಧಿಸೂಚನೆ ವಾಪಸ್:''ಸಿಬಿಐ ತನಿಖಾ ದಳಕ್ಕೆ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ವಾಪಸ್ ಪಡೆಯಲು ಸಂಪುಟ ಸಭೆ ನಿರ್ಧರಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಮುಕ್ತವಾಗಿ ಸಿಬಿಐ ತನಿಖೆ ರಾಜ್ಯದಲ್ಲಿ ನಡೆಸಬಹುದಿತ್ತು. ಈ ಹಿಂದೆ ಮುಕ್ತ ತನಿಖೆ ನಡೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿತ್ತು. ಆದರೆ, ಈಗ ಸಿಬಿಐ ಮುಕ್ತ ತನಿಖೆಗೆ ಇದ್ದ ಅಧಿಸೂಚನೆ ಹಿಂಪಡೆಯಲು ತೀರ್ಮಾನ ಮಾಡಲಾಗಿದೆ. ಕಾರಣ ಸಿಬಿಐ ತನಿಖಾ ಸಂಸ್ಥೆ ದುರ್ಬಳಕೆ ಆಗಬಹುದು ಎಂಬುದರ ಬಗ್ಗೆ ಚರ್ಚೆಯಾಗಿದೆ'' ಎಂದರು.
''ನಾವು ಸಿಬಿಐಗೆ ವಹಿಸಿದ್ದ ಎಲ್ಲಾ ಪ್ರಕರಣಗಳಲ್ಲಿ ಸಿಬಿಐನವರು ಚಾರ್ಜ್ಶೀಟ್ ಸಲ್ಲಿಸಿಲ್ಲ. ಅನೇಕ ಪ್ರಕರಣಗಳು ಬಾಕಿ ಉಳಿದಿವೆ. ಸಿಬಿಐ ಪೂರ್ವಾಗ್ರಹ ಪೀಡಿತವಾಗಿ ಕೆಲಸ ಮಾಡುವುದನ್ನು ಗಮನಿಸಿದ್ದೇವೆ. ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ದುರ್ಬಳಕೆ ಮಾಡುತ್ತಿರುವ ಸಂಸ್ಥೆಗಳು ಪೂರ್ವಾಗ್ರಹ ಪೀಡಿತವಾಗಿದೆ. ಹೀಗಾಗಿ, ಕೇಂದ್ರ ತನಿಖಾ ಸಂಸ್ಥೆಯು ತಪ್ಪು ದಾರಿ ಹಿಡಿಯುವುದನ್ನು ತಡೆಯುವ ನಿಟ್ಟಿನಲ್ಲಿ ಅಧಿಸೂಚನೆ ಯನ್ನು ಹಿಂದಕ್ಕೆ ಪಡೆಯಲು ತೀರ್ಮಾನಿಸಲಾಗಿದೆ'' ಎಂದು ತಿಳಿಸಿದರು.
ರಾಜ್ಯಪಾಲರ ಪತ್ರಗಳಿಗೆ ಉತ್ತರಿಸದಂತೆ ನಿರ್ಣಯ: ''ರಾಜ್ಯಪಾಲರ ಯಾವುದೇ ಪತ್ರಗಳಿಗೆ ಸರ್ಕಾರದ ಮುಖ್ಯಕಾರ್ಯದರ್ಶಿ ಅವರು ಉತ್ತರಿಸದಂತೆ ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯಪಾಲರು ಯಾವುದೇ ಪತ್ರ ಬರೆದರೂ ಸಚಿವ ಸಂಪುಟ ಸಭೆಯ ಗಮನಕ್ಕೆ ತರಲು ಮುಖ್ಯಕಾರ್ಯದರ್ಶಿ ಅವರಿಗೆ ಸೂಚನೆ ನೀಡಲಾಗಿದೆ. ನೇರವಾಗಿ ರಾಜ್ಯಪಾಲರಿಗೆ ಉತ್ತರಿಸದಂತೆ ನಿರ್ಣಯದ ಮೂಲಕ ಮುಖ್ಯಕಾರ್ಯದರ್ಶಿಗೆ ತಿಳಿಸಲಾಗಿದೆ. ಅಲ್ಲದೇ ರಾಜ್ಯಪಾಲರ ಪತ್ರವನ್ನು ಸಚಿವ ಸಂಪುಟದ ಗಮನಕ್ಕೆ ತರಲು ಸಚಿವ ಸಂಪುಟ ನಿರ್ಣಯ ತೆಗೆದುಕೊಳ್ಳಲಾಗಿದೆ'' ಎಂದು ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದರು.
ರಾಜ್ಯಪಾಲರ ಪತ್ರಗಳಿಗೆ ಸರ್ಕಾರದಿಂದ ಉತ್ತರ: ''ಮುಖ್ಯಕಾರ್ಯದರ್ಶಿ ಬದಲು ಸಚಿವ ಸಂಪುಟ ಸಭೆ ಮೂಲಕ ರಾಜ್ಯಪಾಲರ ಪತ್ರಗಳಿಗೆ ಸರ್ಕಾರದ ಉತ್ತರ ನೀಡಲು ತೀರ್ಮಾನಿಸಲಾಗಿದೆ. ಇದಲ್ಲದೆ, ಅಗತ್ಯವಿದ್ದರಷ್ಟೇ ಉತ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯಪಾಲರು ಅಸಹನೆಯ ವರ್ತನೆಯಲ್ಲಿ ಪತ್ರ ಬರೆಯುತ್ತಿದ್ದಾರೆ. ತಕ್ಷಣ ಅಥವಾ ಇವತ್ತೇ ಮಾಹಿತಿ ಕಳುಹಿಸಿ ಎಂದು ರಾಜ್ಯಪಾಲರು ಸೂಚಿಸುತ್ತಿದ್ದಾರೆ. ಎಲ್ಲಾ ನಿಯಮಾವಳಿ ಪರಿಶೀಲನೆ ಮಾಡಿ ಸಂಪುಟ ನಿರ್ಣಯಿಸಿದೆ. ಕಾರ್ಯದರ್ಶಿಗಳು ಸಂಪುಟ ನಿರ್ಣಯದ ಮೇಲೆ ಮುಂದುವರೆಯಬೇಕು. ಮಾಹಿತಿಯನ್ನು ಕಳಿಸುವ ಮೊದಲು ಸಂಪುಟ ಸಭೆಯ ನಿರ್ಣಯ ಪಾಲಿಸಬೇಕು. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇವೆ. ರಾಜ್ಯಪಾಲರ ಯಾವುದೇ ಪತ್ರಕ್ಕೂ ಸಂಪುಟ ಮೂಲಕ ಉತ್ತರಿಸಬೇಕೆಂದು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ'' ಎಂದು ಹೇಳಿದರು.
ಇದನ್ನೂ ಓದಿ:ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah