ಬೆಂಗಳೂರು:ಜುಲೈ 1ರಿಂದ ಅನ್ವಯವಾಗುವಂತೆ ದುಬಾರಿ ಬೆಲೆಯ ಬ್ರಾಂಡ್‌ಗಳ ಮದ್ಯದ ದರ ಅಗ್ಗವಾಗಲಿದೆ. ಈ ಸಂಬಂಧ ಹೆಚ್ಚುವರಿ ಅಬಕಾರಿ ತೆರಿಗೆ ಇಳಿಕೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.
ನೆರೆಹೊರೆಯ ರಾಜ್ಯಗಳಲ್ಲಿನ ಮದ್ಯದ ಬೆಲೆಗೆ ಅನುಗುಣವಾಗಿ ರಾಜ್ಯದಲ್ಲೂ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಬ್ರಾಂಡ್‌ಗಳ ಮದ್ಯದ ಬೆಲೆಯನ್ನು ಪರಿಷ್ಕರಿಸುವುದಾಗಿ ಸರ್ಕಾರ ಕಳೆದ ಫೆಬ್ರವರಿಯಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿತ್ತು.
2023ರ ಜುಲೈನಲ್ಲಿ ಭಾರತೀಯ ಉತ್ಪಾದಿತ ಮದ್ಯದ ಮೇಲಿನ ತೆರಿಗೆ ಹೆಚ್ಚಿಸಲಾಗಿತ್ತು. 2024ರ ಜನವರಿಯಲ್ಲಿ ಬಿಯರ್ ಮೇಲಿನ ತೆರಿಗೆ ಏರಿಕೆ ಮಾಡಲಾಗಿತ್ತು. ಆದರೆ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರ ತೆರಿಗೆ ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಅಬಕಾರಿ ತೆರಿಗೆ ಇಳಿಕೆ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ. ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಲಾಗಿದೆ.
ಹೆಚ್ಚುವರಿ ಅಬಕಾರಿ ತೆರಿಗೆ ಪ್ರಮಾಣ ರಾಜ್ಯದಲ್ಲಿ ಹೆಚ್ಚಿರುವ ಕಾರಣ ನೆರೆಹೊರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸೆಮಿ ಪ್ರೀಮಿಯಂ ಮತ್ತು ಪ್ರೀಮಿಯಂ ಸ್ಲಾಬ್‌ಗಳ ಮದ್ಯದ ದರ ದುಬಾರಿಯಾಗಿದೆ. ಈ ಕಾರಣಕ್ಕೆ ನೆರೆಯ ರಾಜ್ಯಗಳಿಂದ ಇಲ್ಲಿಗೆ ಅಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಪೂರೈಕೆಯಾಗುತ್ತಿದೆ. ಗಡಿ ಭಾಗದ ಜಿಲ್ಲೆಗಳ ಜನರು ಪಕ್ಕದ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ. ಇದರಿಂದ ರಾಜ್ಯ ಸರ್ಕಾರಕ್ಕೆ ನಷ್ಟವಾಗುತ್ತಿತ್ತು. ಮದ್ಯ ಮಾರಾಟ ಹೆಚ್ಚಿಸಿ, ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ದರ ಪರಿಷ್ಕರಣೆಯ ನಿರ್ಧಾರ ಮಾಡಿದೆ ಎಂದು ಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:7ನೇ ವೇತನ ಆಯೋಗದ ವರದಿ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ: ಸಚಿವ ಹೆಚ್.ಕೆ.ಪಾಟೀಲ್ - 7th Pay Commission