ಬೆಂಗಳೂರು: ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಐದು ತಿಂಗಳಾದರೂ ಬರ ಪರಿಹಾರ ಹಣ ಬಿಡುಗಡೆ ಮಾಡದಿರುವ ಕಾರಣ ಅನಿವಾರ್ಯವಾಗಿ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ರಾಜ್ಯ ಸರ್ಕಾರದಿಂದ ಅರ್ಜಿ ಹಾಕಿದ್ದೇವೆ ಎಂದು ತಿಳಿಸಿದರು.
ಇಂದು ಸರ್ವೋಚ್ಛ ನ್ಯಾಯಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಅರ್ಜಿ ಸಲ್ಲಿಸಲಾಗಿದ್ದು, ಅರ್ಜಿಗೆ ಸ್ವೀಕೃತಿ ಸಿಕ್ಕಿದೆ. ಮುಂದಿನ ಒಂದು ವಾರ ರಜೆ ಇರುವ ಕಾರಣ ಬಳಿಕ ವಿಚಾರಣೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆರ್ಟಿಕಲ್ 32 ಅಡಿ ರಿಟ್ ಪಿಟಿಷನ್ ಹಾಕಿದ್ದೇವೆ. ಶೀಘ್ರದಲ್ಲಿ ಬರ ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿ ಸಲ್ಲಿಕೆ ಮಾಡಿದ್ದೇವೆ. ಎನ್ಡಿಆರ್ಎಫ್ ಅಡಿ ಬರ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಸಿಎಂ ಮಾಹಿತಿ ನೀಡಿದರು.
ದೇಶದಲ್ಲಿ ಎನ್ಡಿಆರ್ಎಫ್ ಕಾಯ್ದೆ ಇದೆ. ಬರಗಾಲ ಬಂದಾಗ, ಅತಿವೃಷ್ಟಿ ಬಂದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸಲು ಈ ಕಾನೂನು ಮಾಡಲಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಹಾಗಾಗಿ ಐದು ವರ್ಷಕ್ಕೊಮ್ಮೆ ಹಣಕಾಸು ಆಯೋಗ ರಚನೆ ಆಗುತ್ತೆ. ಅದರ ಶಿಫಾರಸು ಮೇರೆಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಹಣ ನಿಗದಿಯಾಗುತ್ತೆ ಎಂದರು.
ರಾಜ್ಯದಲ್ಲಿ ಒಟ್ಟು 223 ತಾಲೂಕುಗಳಲ್ಲಿ ಬರಗಾಲ ಇದೆ. 196 ತಾಲೂಕುಗಳು ತೀವ್ರ ಬರಗಾಲ ಇದೆ. 48 ಲಕ್ಷ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಷ್ಟವಾಗಿದೆ. ಈಗಾಗಲೇ ಮೂರು ಪತ್ರಗಳನ್ನು ಬರೆದಿದ್ದೇವೆ. 23.09.2023ಕ್ಕೆ ಮೊದಲ ಪತ್ರ, 20.10.2023ಕ್ಕೆ ಎರಡನೇ ಪತ್ರ ಕೊಟ್ಟಿದ್ದೇವೆ. ಮತ್ತೊಂದು ಪತ್ರವನ್ನು 15.11.2023ರಂದು ಕೊಟ್ಟಿದ್ದೇವೆ. ಕಾನೂನು ಪ್ರಕಾರ, ಮೊದಲ ಮೆಮೊರಾಡಂ ಕೊಟ್ಟಾಗ ವಾರದೊಳಗೆ ಅಂತರ ಇಲಾಖಾವಾರು ಕೇಂದ್ರ ತಂಡ ಬಂದು ರಾಜ್ಯ ಪ್ರವಾಸ ಮಾಡಬೇಕು ಎಂದಿದೆ. ಕೇಂದ್ರ ತಂಡವು ಅಕ್ಟೋಬರ್ ತಿಂಗಳಲ್ಲಿ ಬಂದು ಅ.4-9ರವರೆಗೆ ಪ್ರವಾಸ ಮಾಡಿ ಬರ ಅಧ್ಯಯನ ಕೈಗೊಂಡಿದೆ ಎಂದು ತಿಳಿಸಿದರು.