ಕರ್ನಾಟಕ

karnataka

By ETV Bharat Karnataka Team

Published : Feb 15, 2024, 6:01 PM IST

ETV Bharat / state

ವಿಧಾನಸಭೆಯಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ವಿಧೇಯಕಗಳ ಮಂಡನೆ

ಕರ್ನಾಟಕ ಸಹಕಾರಿ ಸಂಘಗಳ(ತಿದ್ದುಪಡಿ) ವಿಧೇಯಕ-2024 ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕಗಳನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಧಾನಸಭೆಯಲ್ಲಿ ಮಂಡಿಸಿದರು.

Minister K N Rajanna
ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ವಿಧೇಯಕ ಮಂಡಿಸಿದರು.

ಬೆಂಗಳೂರು: ಕರ್ನಾಟಕ ಸಹಕಾರ ಸಂಘಗಳ(ತಿದ್ದುಪಡಿ) ವಿಧೇಯಕ-2024 ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ(ತಿದ್ದುಪಡಿ) ವಿಧೇಯಕಗಳನ್ನು ವಿಧಾನಸಭೆಯಲ್ಲಿ ಇಂದು ಮಂಡಿಸಲಾಯಿತು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ವಿಧೇಯಕಗಳನ್ನು ಮಂಡಿಸಿದರು. ಸಹಕಾರಿ ಸಂಘಗಳ ತಿದ್ದುಪಡಿ ವಿಧೇಯಕದಲ್ಲಿ ಎರಡನೇ ಆಡಳಿತ ಸುಧಾರಣೆಗಳ ಆಯೋಗದ ವರದಿಯ ಶಿಫಾರಸುಗಳ ಅನುಸಾರ ಮತ್ತು ಸಹಕಾರ ಚುನಾವಣಾ ಪ್ರಾಧಿಕಾರದ ನಿರ್ವಹಣೆಗಾಗಿ ಭರಿಸಲಾದ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶವಿದೆ. ಈ ದೃಷ್ಟಿಯಿಂದ ಸಹಕಾರ ಚುನಾವಣಾ ಪ್ರಾಧಿಕಾರವನ್ನು ರದ್ದು ಮಾಡಿ, ರಿಜಿಸ್ಟ್ರಾರ್ ನಿಯಂತ್ರಣದಡಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲು ಪ್ರಕರಣ 39 ಎಎ ತಿದ್ದುಪಡಿಗೆ ಪ್ರಸ್ತಾಪಿಸಲಾಗಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಪ್ರಕರಣ 20ರ ಉಪ ಪ್ರಕರಣ (2)ರ (ಎ-iv) ಮತ್ತು (ಎ-v) ಖಂಡದ ಉಪಬಂಧಗಳನ್ನಜ ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅಸಂಖ್ಯಾತ ರಿಟ್ ಅರ್ಜಿಗಳು ದಾಖಲಾಗಿವೆ ಮತ್ತು ಉಚ್ಚ ನ್ಯಾಯಾಲಯವು ಎಲ್ಲಾ ಅರ್ಜಿಗಳಲ್ಲಿನ ಅರ್ಜಿದಾರರಿಗೆ ಮತದಾನ ಮಾಡಲು ಅನುಮತಿಸುತ್ತದೆ. ಆದ್ದರಿಂದ ಎಲ್ಲಾ ಸದಸ್ಯರಿಗೆ ಮತದಾನ ಮಾಡುವುದನ್ನು ಕಾತರಿ ಪಡಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 28 ಎ (3)ರ ಉಪ ಪ್ರಕರಣ (3)ರಲ್ಲಿ ಪ್ರಾಥಮಿಕ ಸಹಕಾರ ಸಂಘಗಳ ಮಂಡಳಿಯಲ್ಲಿ ಅನುಸೂಚಿತ ಜಾತಿಗಳು/ಅನುಸೂಚಿತ ಬುಡಕಟ್ಟುಗಳು, ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗಾಗಿ ಈಗಾಗಲೇ ಮೀಸಲಾತಿ ಕಲ್ಪಿಸಲಾಗಿದೆ. ಅದಕ್ಕನುಸಾರವಾಗಿ, ಮಾಧ್ಯಮಿಕ ಫೆಡರಲ್ ಮತ್ತು ಅಪೆಕ್ಸ್ ಸಹಕಾರ ಸಂಘಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಅಥವಾ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸದುದ್ದೇಶದಿಂದ ಈ ತಿದ್ದುಪಡಿ ತರಲಾಗುತ್ತಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959ರ ಪ್ರಕರಣ 28-ಎ ರ (4 ಬಿ) ಉಪ ಪ್ರಕರಣವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಂಡಳಿಯನ್ನು ಹೊರತುಪಡಿಸಿ ಪ್ರತಿಯೊಂದು ನೆರವು ಪಡೆದ ಸಂಘದ ಮಂಡಳಿಯಲ್ಲಿನ ಪ್ರಾತಿನಿಧ್ಯಕ್ಕೆ ಅನುಸಾರವಾಗಿ ರಾಜ್ಯ ಸರ್ಕಾರವು ನಾಮ ನಿರ್ದೇಶನ ಮಾಡುವುದಕ್ಕಾಗಿ ಈಗಾಗಲೇ ಅವಕಾಶ ಕಲ್ಪಿಸಲಾಗಿದೆ.

ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿಗೆ ಸರ್ಕಾರದ ನಾಮನಿರ್ದೇಶನವನ್ನು ವಿಸ್ತರಿಸಲು ಮತ್ತು ಸಹಕಾರ ಚಳುವಳಿಯಲ್ಲಿ ಸಮಾಜದ ವಂಚಿತ ಹಾಗೂ ಪ್ರಾತಿನಿಧ್ಯ ಇರದ ವರ್ಗಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಹಾಗೂ ಅವಕಾಶವನ್ನು ಕಲ್ಪಿಸುವ ಸದುದ್ದೇಶದಿಂದ ಸರ್ಕಾರದ ನಾಮ ನಿರ್ದೇಶನ ಸ್ಥಾನಗಳ ಸಂಖ್ಯೆಯನ್ನು ಮೂರಕ್ಕೆ (ಒಂದು ಸ್ಥಾನ ಅನುಸೂಚಿತ ಜಾತಿಗಳು ಅನುಸೂಚಿತ ಬುಡಕಟ್ಟುಗಳ ಸದಸ್ಯರಿಗಾಗಿ ಒಂದು ಸ್ಥಾನವನ್ನು ಮಹಿಳೆಯರಿಗಾಗಿ ಹಾಗೂ ಇನ್ನೊಂದು ಸ್ಥಾನವನ್ನು ಇತರೆ ಪ್ರವರ್ಗ ಪ್ರವರ್ಗಗಳಿಗಾಗಿ ಮೀಸಲಿಸುವುದು) ಹೆಚ್ಚಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.

ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ವಿಧೇಯಕ: ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997 ರ 20 ಬಿ ಪ್ರಕರಣದ ಉಪಪ್ರಕರಣ (1)ರ (ಸಿ)ಖಂಡದ ಉಪಪ್ರಕರಣ (1) ಮತ್ತು (2) ರ ಉಪಬಂಧಗಳನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದಲ್ಲಿ ಅಸಂಖ್ಯಾತ ರಿಟ್ ಅರ್ಜಿಗಳು ದಾಖಲಾಗಿವೆ. ಉಚ್ಚನ್ಯಾಯಾಲಯವು ಎಲ್ಲಾ ಅರ್ಜಿಗಳಲ್ಲಿನ ಅರ್ಜಿದಾರರಿಗೆ ಮತದಾನ ಮಾಡಲು ಅನುಮತಿಸಿರುತ್ತದೆ. ಆದ್ದರಿಂದ ಎಲ್ಲಾ ಸದಸ್ಯರಿಗೆ ಮತದಾನ ಮಾಡುವುದನ್ನು ಖಾತರಿಪಡಿಸಲು ಈ ತಿದ್ದುಪಡಿಯನ್ನು ಪ್ರಸ್ತಾಪಿಸಲಾಗಿದೆ.

ಎರಡನೇ ಆಡಳಿತ ಸುಧಾರಣೆಗಳ ಆಯೋಗದ ವರದಿಯ ಶಿಫಾರಸ್ಸಿಗನುಸಾರವಾಗಿ ಮತ್ತು ಸಹಕಾರಿ ಚುನಾವಣೆ ಪ್ರಾಧಿಕಾರದ ನಿರ್ವಹಣೆಗಾಗಿ ಭರಿಸಲಾದ ಹೆಚ್ಚುವರಿ ವೆಚ್ಚವನ್ನು ಕಡಿಮೆ ಮಾಡುವ ದೃಷ್ಟಿಯಿಂದ ಸಹಕಾರಿ ಚುನಾವಣಾ ಪ್ರಾಧಿಕಾರವನ್ನು ರದ್ದುಪಡಿಸಿ, ರಿಜಿಸ್ಟ್ರಾರ್ ನಿಯಂತ್ರಣದಡಿಯಲ್ಲಿ ಸಹಕಾರ ಚುನಾವಣಾ ವಿಭಾಗವನ್ನು ಸೃಜಿಸಲು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ, 1959 ರಪ್ರಕರಣ 39 ಎಎ-ಗೆ ತಿದ್ದುಪಡಿ ತರುವ ತತ್ಪರಿಣಾಮವಾಗಿ 26 ಎ ಪ್ರಕರಣಕ್ಕೆ ತಿದ್ದುಪಡಿ ಮಾಡಲು ಪ್ರಸ್ರಾಪಿಸಲಾಗಿದೆ.

ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ, 1997 ರ ಪ್ರಕರಣ 24 (1) (ಇ) ರಲ್ಲಿ ಪ್ರಾಥಮಿಕ ಸಹಕಾರಿಗಳ ಮಂಡಳಿಯಲ್ಲಿ ಅನುಸೂಚಿತ ಜಾತಿಗಳು/ಅನುಸೂಚಿ ಬುಡಕಟ್ಟುಗಳು, ಹಿಂದುಳಿದ ವರ್ಗಳು ಮತ್ತು ಮಹಿಳೆಯರಿಗಾಗಿ ಈಗಾಗಲೇ ಮೀಸಲಾತಿಯನ್ನು ಕಲ್ಪಿಸಲಾಗಿದೆ. ಅದಕ್ಕನುಸಾರವಾಗಿ, ಪೂರಕ ಸಹಕಾರಿ, ಸಂಯುಕ್ತ ಸಹಕಾರಿ ಮತ್ತು ಅಪೆಕ್ಸ್ ಸಹಕಾರಿಗಳ ಮಂಡಳಿಯಲ್ಲಿ ಪ್ರಾತಿನಿಧ್ಯ ಹೊಂದಿರದ ವರ್ಗದ ಅಥವಾ ಸಮುದಾಯದ ಜನರಿಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಸದುದ್ದೇಶದಿಂದ ಈ ತಿದ್ದುಪಡಿ ಪ್ರಸ್ತಾಪಿಸಲಾಗಿದೆ. ಹಾಗಾಗಿ, ಈ ವಿಧೇಯಕವನ್ನು ಸದನದಲ್ಲಿ ಸಚಿವರು ಮಂಡಿಸಿದರು.

ಇದನ್ನೂಓದಿ:ರಾಜ್ಯಸಭೆ ಚುನಾವಣೆ: ಕಾಂಗ್ರೆಸ್​​ನಿಂದ ಮೂವರು ನಾಮಪತ್ರ ಸಲ್ಲಿಕೆ

ABOUT THE AUTHOR

...view details