ಬೆಂಗಳೂರು:ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮೇ 20ಕ್ಕೆ ಗದ್ದುಗೆ ಏರಿ ಒಂದು ವರ್ಷ ಪೂರೈಸುತ್ತಿದೆ. ಪ್ರಚಂಡ ಬಹುಮತದೊಂದಿಗೆ ಕರುನಾಡಿನ ಚುಕ್ಕಾಣಿ ಹಿಡಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವರ್ಷದ ಆಡಳಿತದಲ್ಲಿ ಐದು ಗ್ಯಾರಂಟಿ ಯಶಸ್ವಿ ಅನುಷ್ಠಾನದ ಮಧ್ಯೆ ಕೆಲ ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ.
ಒಂದು ವರ್ಷದ ಅಧಿಕಾರವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಪ್ರಮುಖವಾಗಿ ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತ ನಡೆಸಿ ನುಡಿದಂತೆ ನಡೆದಿದ್ದೇವೆ ಎಂಬ ಬದ್ಧತೆಯ ಸಂದೇಶವನ್ನು ನೀಡಲು ಯತ್ನಿಸಿದೆ. ಭೀಕರ ಬರಗಾಲ, ಆರ್ಥಿಕ ಹೊರೆಯ ಮಧ್ಯೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಮತೋಲಿತ ಆಡಳಿತ ನೀಡುವಲ್ಲಿ ಹೆಜ್ಜೆ ಹಾಕುತ್ತಿದೆ. ಕಾಂಗ್ರೆಸ್ ಸರ್ಕಾರ ವರ್ಷದ ಆಡಳಿತದಲ್ಲಿ ಹಲವು ಸವಾಲು, ಸಂಕಷ್ಟವನ್ನು ಎದುರಿಸಿದ್ದು, ಅದರ ಮಧ್ಯೆ ಅಭಿವೃದ್ಧಿ ಪೂರಕ ಆಡಳಿತ ನಡೆಸಲು ಮುಂದಡಿ ಇಟ್ಟಿದೆ.
ಕರ್ನಾಟಕ ಮಾದರಿಯ ಆಡಳಿತ ಸೂತ್ರ: ಕಾಂಗ್ರೆಸ್ ಸರ್ಕಾರ ಕರ್ನಾಟಕ ಮಾದರಿಯ ಆಡಳಿತ ಸೂತ್ರದ ಮೂಲಕ ಮುನ್ನಡೆಯುತ್ತಿದೆ. ತನ್ನ ಒಂದು ವರ್ಷದ ಆಡಳಿತದಲ್ಲಿ ಸಿಎಂ ಸಿದ್ದರಾಮಯ್ಯ ಕರ್ನಾಟಕ ಮಾದರಿಯ ಆಡಳಿತಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಜನ ಕಲ್ಯಾಣ ಮತ್ತು ಆರ್ಥಿಕ ಸ್ಥಿತಿ ಎರಡನ್ನು ಸಮತೂಕದಲ್ಲಿ ನಿಭಾಯಿಸಿ ಕರ್ನಾಟಕದ್ದೇ ಆದ ಹೊಸ ಮಾದರಿಯೊಂದನ್ನು ಪರಿಚಯಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ ಕೆ ಶಿವಕುಮಾರ್ (ETV Bharat) ರಾಜ್ಯದಲ್ಲಿ ಆರ್ಥಿಕ ಶಕ್ತಿಯನ್ನು ಬೆಳೆಸುವುದರ ಜೊತೆಗೆ ಸಂಪತ್ತಿನ ಮರುಹಂಚಿಕೆಯ ಮೂಲಕ ಕರ್ನಾಟಕ ಮಾದರಿ ಆಡಳಿತ ಸೂತ್ರವನ್ನು ದೇಶಕ್ಕೆ ಮಾದರಿಯಾಗುವಂತ ನಿಟ್ಟಿನಲ್ಲಿ ಸಿದ್ದರಾಮಯ್ಯ ಸರ್ಕಾರ ಹೆಜ್ಜೆ ಇಡಲು ಯತ್ನಿಸುತ್ತಿದೆ. ಆ ಮೂಲಕ ಜನಕಲ್ಯಾಣ ಹಾಗೂ ರಾಜ್ಯದ ಅಭಿವೃದ್ಧಿ ಎರಡನ್ನೂ ಸಮತೂಕದಲ್ಲಿ ಕೊಂಡೊಯ್ಯುವತ್ತ ಕಾಂಗ್ರೆಸ್ ಸರ್ಕಾರ ಬಲವಾದ ಹೆಜ್ಜೆ ಇಡಲು ಯತ್ನಿಸುತ್ತಿದೆ.
ಪಂಚ ಗ್ಯಾರಂಟಿಯ ಯಶಸ್ವಿ ಅನುಷ್ಠಾನ:ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಯನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವ ಮೂಲಕ ನುಡಿದಂತೆ ನಡೆದ ಸರ್ಕಾರ ಎಂಬ ಸಂದೇಶ ರವಾನಿಸುತ್ತಿದೆ. ಚುನಾವಣೆ ಘೋಷಣೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಗದ್ದುಗೆ ಹಿಡಿದ ಎಂಟು ತಿಂಗಳೊಳಗೆ ಅನುಷ್ಠಾನ ಮಾಡಿ ಜನರ ಆರ್ಥಿಕ ಶಕ್ತಿ ಹೆಚ್ಚಿಸುವ ಬೃಹತ್ ಸವಾಲನ್ನು ಬಹುತೇಕ ಯಶಸ್ವಿಯಾಗಿ ನಿಭಾಯಿಸುತ್ತಿದೆ. ಆರ್ಥಿಕ ಸಂಕಷ್ಟ, ಬರದ ಮಧ್ಯೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಅಡಚಣೆ ಆಗದಂತೆ ನೋಡಿಕೊಳ್ಳುವಲ್ಲಿ ಕಾಂಗ್ರೆಸ್ ಸರ್ಕಾರ ಸಫಲವಾಗಿದೆ.
ಮೊದಲ ವರ್ಷದ ಆಡಳಿತದಲ್ಲಿ ಪಂಚ ಗ್ಯಾರಂಟಿಗಳಿಗೆ ಸಂಪನ್ಮೂಲ ಕ್ರೋಢೀಕರಿಸಿ ಅನುಷ್ಠಾನ ಮಾಡುವ ಸವಾಲು ಹೊಂದಿತ್ತು. ಸುಮಾರು 40,000 ಕೋಟಿ ರೂ. ಬೃಹತ್ ಅನುದಾನವನ್ನು ಹೊಂದಾಣಿಕೆ ಮಾಡಿ, ಪಂಚ ಗ್ಯಾರಂಟಿಗಳನ್ನು ನಿಭಾಯಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ಯಶಸ್ವಿಯಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ವರ್ಷದ ಆಡಳಿತದಲ್ಲಿ ಪಂಚ ಗ್ಯಾರಂಟಿಗಳಾದ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಅನ್ನ ಭಾಗ್ಯ, ಯುವ ನಿಧಿ ಯೋಜನೆ ಜಾರಿ ಮಾಡುವ ಮೂಲಕ ಬದ್ಧತೆಯನ್ನು ಪ್ರದರ್ಶಿಸುವಲ್ಲಿ ಯಶ ಕಂಡಿದೆ.
ಬ್ರ್ಯಾಂಡ್ ಬೆಂಗಳೂರಿನತ್ತ ಮುಂದಡಿ:ವರ್ಷದ ಆಡಳಿತಾವಧಿಯಲ್ಲಿ ರಾಜಧಾನಿ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡುವತ್ತ ಚಿತ್ತ ಹರಿಸಿದೆ. 'ಬ್ರ್ಯಾಂಡ್ ಬೆಂಗಳೂರು' ಪರಿಕಲ್ಪನೆಯಡಿ ಬೆಂಗಳೂರು ನಗರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಕಾಂಗ್ರೆಸ್ ಸರ್ಕಾರ ಆರಂಭಿಕ ಹೆಜ್ಜೆ ಇಟ್ಟಿದೆ. ಈಗಾಗಲೇ ಬ್ರ್ಯಾಂಡ್ ಬೆಂಗಳೂರು ನಿರ್ಮಾಣಕ್ಕಾಗಿ ಪರಿಣಿತರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ತಜ್ಞರ ಜೊತೆ ಸಭೆ ನಡೆಸಿ ಸಲಹೆ ಅಭಿಪ್ರಾಯಗಳನ್ನು ಸಂಗ್ರಹಿಸಿದೆ.
ನಗರದ ಸಂಚಾರ ವ್ಯವಸ್ಥೆ, ಪರಿಸರ, ಘನತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸದ್ಬಳಕೆ, ಆರೋಗ್ಯ, ಪ್ರಾಣಿಗಳ ಆರೋಗ್ಯ, ಜನಸ್ನೇಹಿ ಇ-ಆಡಳಿತ ವ್ಯವಸ್ಥೆ, ನೀರಿನ ಭದ್ರತೆ ಹಾಗೂ ಪ್ರವಾಹ ನಿರ್ವಹಣೆಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ರೂಪಿಸಿದೆ.
ಕೇಂದ್ರದಿಂದ ಬರ ಪರಿಹಾರ ತರಿಸುವಲ್ಲಿ ಸಫಲ:ಕಾಂಗ್ರೆಸ್ ಸರ್ಕಾರಕ್ಕೆ ಭೀಕರ ಬರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅಧಿಕಾರ ಹಿಡಿದಾಗಿನಿಂದ ತೀವ್ರ ಬರದ ಬರೆ ಕಾಂಗ್ರೆಸ್ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿತು. ಬರ ಹಿನ್ನೆಲೆಯಲ್ಲಿ ರೈತರಿಗೆ ಗರಿಷ್ಠ 2000 ರೂ. ಪರಿಹಾರ ನೀಡಿತು. ಬಳಿಕ ಕೇಂದ್ರದಿಂದ ಸುಮಾರು 18,000 ಕೋಟಿ ರೂ. ಬರ ಪರಿಹಾರದ ಮೊತ್ತಕ್ಕೆ ಮನವಿ ಸಲ್ಲಿಸಿತು. ಆದರೆ ಮನವಿ ಸಲ್ಲಿಸಿ ನಾಲ್ಕೈದು ತಿಂಗಳಾದರೂ ಕೇಂದ್ರ ಬರ ಪರಿಹಾರ ನೀಡದ ಪರಿಣಾಮ ಕಾನೂನು ಹೋರಾಟದ ಮೊರೆ ಹೋಗಬೇಕಾಯಿತು. ಬಳಿಕ ಸುಪ್ರೀಂ ಕೋರ್ಟ್ ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಸೂಚನೆ ನೀಡಿತು. ಇದರಿಂದಾಗಿ ರಾಜ್ಯಕ್ಕೆ 3,454 ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿಸುವಲ್ಲಿ ರಾಜ್ಯ ಸರ್ಕಾರ ಯಶ ಕಂಡಿತು.
ಇದನ್ನೂಓದಿ:ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೃಹ ಸಚಿವರು ರಾಜೀನಾಮೆ ನೀಡಲಿ: ಅಶ್ವತ್ಥನಾರಾಯಣ ಒತ್ತಾಯ - Allegation against the State Govt