ಕರ್ನಾಟಕ

karnataka

ETV Bharat / state

ಕೋವಿಡ್ ಹಗರಣ: ತನಿಖೆ, ಕ್ರಮ ವಹಿಸಲು ಎಸ್​​ಐಟಿ ರಚನೆಗೆ ಸಂಪುಟದ ತೀರ್ಮಾನ - SIT TO INVESTIGATE COVID SCAM

ಕೋವಿಡ್-19 ಅಕ್ರಮದ ಕುರಿತಂತೆ ಮೈಕಲ್ ಡಿ.ಕುನ್ಹಾ ಆಯೋಗದ ವರದಿ ಆಧರಿಸಿ ಮುಂದಿನ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚನೆಗೆ ಸಂಪುಟ ಸಭೆ ಒಪ್ಪಿಗೆ ನೀಡಿದೆ.

cabinet meeting
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Nov 14, 2024, 4:35 PM IST

ಬೆಂಗಳೂರು:ಕೋವಿಡ್-19 ಅಕ್ರಮದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಮೈಕಲ್ ಡಿ.ಕುನ್ಹಾ ಆಯೋಗದ ಮಧ್ಯಂತರ ವರದಿ ಮಾಹಿತಿ ಆಧಾರವಾಗಿಸಿಕೊಂಡು ಮುಂದಿನ ತನಿಖೆ ಹಾಗೂ ಕ್ರಮ ವಹಿಸಲು ವಿಶೇಷ ತನಿಖಾ ತಂಡ (ಎಸ್​​ಐಟಿ) ರಚನೆಗೆ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಹೆಚ್.ಕೆ.ಪಾಟೀಲ್, ''ಮಧ್ಯಂತರ ವರದಿ ಪರಿಶೀಲಿಸಿ ರಾಜ್ಯ ಸರ್ಕಾರ ಎಸ್​​ಐಟಿ ರಚಿಸಲು ತೀರ್ಮಾನಿಸಿದೆ. ವರದಿಯಲ್ಲಿನ ಆಧಾರಗಳು, ವಿಷಯ, ಮಾಹಿತಿಯನ್ನು ಆಧಾರವಾಗಿಸಿ ಮುಂದಿನ ತನಿಖೆ ಹಾಗೂ ಕ್ರಮಕ್ಕಾಗಿ ಎಸ್​ಐಟಿ ರಚಿನೆ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ'' ಎಂದು ತಿಳಿಸಿದರು.

ಸಂಪುಟದ ತೀರ್ಮಾನಗಳ ಬಗ್ಗೆ ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ (ETV Bharat)

ಅಗತ್ಯಬಿದ್ದರೆ ಎಫ್​ಐಆರ್ ದಾಖಲಿಸಿ ಕ್ರಮ: ''ಮೈಕಲ್ ಡಿ.ಕುನ್ಹಾ ಆಯೋಗದ ವರದಿ ಮೇಲೆ ಕಂಡು ಬಂದ ಅಕ್ರಮಗಳ ಬಗ್ಗೆ ತನಿಖೆ ಮಾಡಲಾಗುವುದು. ಐಜಿ ನೇತೃತ್ವದಲ್ಲಿ ಎಸ್​​ಐಟಿ ರಚನೆ ಮಾಡಲಾಗುತ್ತದೆ. ಆಯೋಗದ ಮಾಹಿತಿ ಆಧಾರದಲ್ಲಿ ತನಿಖೆ ಮಾಡಲಾಗುವುದು. ಎಸ್​​ಐಟಿ ಆರ್ಥಿಕ ಅಂಶಗಳು ಸೇರಿದಂತೆ ಅಪರಾಧ ಪ್ರಕರಣಗಳನ್ನು ದಾಖಲಿಸಿ ಕ್ರಮ ತೆಗದುಕೊಳ್ಳಲಿದೆ. ಅಗತ್ಯಬಿದ್ದರೆ ವರದಿಯ ಮಾಹಿತಿ ಹೊರತಾಗಿ ಮತ್ತೆ ತನಿಖೆ ಮಾಡಿ, ಎಫ್​ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು'' ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

''ಕೋವಿಡ್ ವೇಳೆ ರಾಜ್ಯದಲ್ಲಿ ಯಾರು ಅಕ್ರಮ ಮಾಡಿದ್ದಾರೆಯೋ ಅವರ ಮೇಲೆ ಎಫ್ಐಆರ್ ದಾಖಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಸತ್ಯಾನ್ವೇಷಣೆ, ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದುವರೆದ ಕ್ರಮವಾಗಿ ಎಸ್ಐಟಿ ರಚನೆ ಮಾಡಲು ತೀರ್ಮಾನಿಸಲಾಗಿದೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ದೀರ್ಘ ವರ್ಷಗಳ ಬಳಿಕ ವಿಧಾನಸೌಧದ ಸಿಎಂ ಕೊಠಡಿಗೆ ಹೊಸ ರೂಪ

''ಕೋವಿಡ್ ವೇಳೆ ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ, ಬೇಜವಾಬ್ದಾರಿತನ, ವಂಚನೆ ನಡೆದಿತ್ತು. ಮಾಹಿತಿಗಳನ್ನು ಅದಿಮಿಟ್ಟುಕೊಂಡು, ಕಡತ ಸಿಗದಂತೆ ಮಾಡಲಾಗಿತ್ತು. ಪಿಎಸಿ ಕೆಲಸ ಮಾಡದಂತೆ ನಿಯಂತ್ರಣ ಮಾಡಿದ್ದರು. ಎಲ್ಲಾ ವಿಧಾನಮಂಡಲ ಸಮಿತಿಗಳು ಸಭೆ ಸೇರುವುದಕ್ಕೆ ನಿರ್ಬಂಧ ಹೇರಲಾಗಿತ್ತು.‌ ಪಿಪಿಇ ಕಿಟ್ 330-440 ರೂ. ಲಭ್ಯವಿದ್ದರೆ ಅದನ್ನು ಬಿಟ್ಟು 2,017 ರೂ.ಗೆ ಲಕ್ಷಾಂತರ ಕಿಟ್ ಖರೀದಿ ಮಾಡಲಾಗಿದೆ. ದುಪ್ಪಟ್ಟು ದರದಲ್ಲಿ ಹಾಗೂ ಬ್ಲ್ಯಾಕ್ ಲಿಸ್ಟ್​​ನಲ್ಲಿರುವ ಕಂಪನಿಗಳಿಂದ ಖರೀದಿ ಔಷಧಿ ಮಾಡಲಾಗಿದೆ'' ಎಂದು ಆರೋಪಿಸಿದರು.

ಬ್ರಹ್ಮಾಂಡ ಭ್ರಷ್ಟಾಚಾರ:''ಕೋವಿಡ್ 19 ಅಕ್ರಮದ ಸಂಬಂಧ ತನಿಖಾ ಆಯೋಗ ನೇಮಕ ಮಾಡಿತ್ತು. 50,000 ಕಡತವನ್ನು ಆಯೋಗ ಪರಿಶೀಲನೆ ನಡೆಸಿ, ಮಧ್ಯಂತರ ವರದಿ ನೀಡಿದೆ. ಆ ವರದಿಯನ್ನು ಅಧ್ಯಯನ ಮಾಡಲು ಸಂಪುಟ ಉಪಸಮಿತಿ ರಚಿಸಲಾಗಿತ್ತು. ಸಂಪುಟ ಉಪಸಮಿತಿ ಸಭೆಯಲ್ಲಿನ ಚರ್ಚೆಗಳನ್ನು ಸಂಪುಟ ಸಭೆಯಲ್ಲಿ ಮಂಡಿಸಲಾಯಿತು. ಕಂಡುಬಂದ ಬ್ರಹ್ಮಾಂಡ ಭ್ರಷ್ಟಾಚಾರ, ಹಲವಾರು ಅಮಾನವೀಯ ಸಂಗತಿ, ಅಧಿಕಾರಿಗಳು ರಾಜಕೀಯ ನಾಯಕರ ನಿರ್ದೇಶನದ ಮೇರೆಗೆ ತೆಗೆದುಕೊಂಡ ಕ್ರಮಗಳು ಎಂಥವರಿಗೂ ನಡುಕ ಹುಟ್ಟಿಸುವಂತಿದೆ. ಅಂದು ಸರ್ಕಾರ ನಡೆದುಕೊಂಡ ರೀತಿ, ಅಂದಿನ ಮಂತ್ರಿಗಳು, ಸಿಎಂ ತೆಗೆದುಕೊಂಡ ಕ್ರಮಗಳು ಸತ್ಯಾನ್ವೇಷಣೆಗೆ ಅಡ್ಡಿಯಾಗುವ ಕ್ರಮವಾಗಿದೆ'' ಎಂದು ಹೆಚ್.ಕೆ.ಪಾಟೀಲ್​ ದೂರಿದರು.

ಇದನ್ನೂ ಓದಿ:ಹಸಿರು ಸೆಸ್ ಜನರಿಗೆ ಹೊರೆಯಾಗಲ್ಲ, ಜನ ಬೇಡವೆಂದರೆ ಪ್ರಸ್ತಾವನೆ ಕೈ ಬಿಡುತ್ತೇವೆ: ಈಶ್ವರ ಖಂಡ್ರೆ

ABOUT THE AUTHOR

...view details