ಬೆಂಗಳೂರು: ಉಪಸಮರದಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಮೂಲಕ ಸಿಎಂ ಮತ್ತು ಸಂಪುಟ ಸದಸ್ಯರ ವಿಶ್ವಾಸ ಇಮ್ಮಡಿಯಾಗಿದೆ. ಈ ಫಲಿತಾಂಶ ಕಾಂಗ್ರೆಸ್ ಆಡಳಿತಕ್ಕೆ ನೀಡಿದ ಜನ ಬೆಂಬಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಜೊತೆಗೆ, ಸಿಎಂ ನಾಯಕತ್ವಕ್ಕೂ ಮತ್ತಷ್ಟು ಬಲ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈಗಾಗಲೇ ಮುಡಾ, ವಾಲ್ಮೀಕಿ ಹಗರಣಗಳಲ್ಲಿ ಸಿಲುಕಿರುವ ಆರೋಪ ಹೊತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯಗೆ ತಮ್ಮ ಶಕ್ತಿ ಪ್ರದರ್ಶನ ಮಾಡಲು ಈ ಉಪಕದನ ದೊಡ್ಡ ವೇದಿಕೆಯಾಗಿತ್ತು. ಅದರಂತೆ, ಉಪಚುನಾವಣೆಯ ಫಲಿತಾಂಶ ಕಾಂಗ್ರೆಸ್ಗೆ ದೊಡ್ಡ ಶಕ್ತಿ ನೀಡಿದೆ. ಶಿಗ್ಗಾಂವಿ ಹಾಗೂ ಚನ್ನಪಟ್ಟಣ ಕ್ಷೇತ್ರವನ್ನು ವಿಪಕ್ಷದ ತೆಕ್ಕೆಯಿಂದ ಕಸಿದುಕೊಳ್ಳುವ ಮೂಲಕ ಕಾಂಗ್ರೆಸ್ ಸ್ಪಷ್ಟ ಸಂದೇಶ ರವಾನಿಸಿದೆ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನೈತಿಕ ಬಲ:ಉಪಚುನಾವಣೆಯ ಫಲಿತಾಂಶ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ದೊಡ್ಡ ನೈತಿಕ ಬೆಂಬಲ ನೀಡಿದೆ. ಮೂರು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಆಡಳಿತಕ್ಕೆ ಜನರು ಮೊಹರು ಹಾಕಿದ್ದಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ನ ಕರ್ನಾಟಕ ಮಾದರಿ ಆಡಳಿತಕ್ಕೆ ಇನ್ನಷ್ಟು ಬಲ ಬಂದಿದೆ. ವಿಪಕ್ಷಗಳನ್ನು ಗಟ್ಟಿಯಾಗಿ ಎದುರಿಸುವ ನೈತಿಕ ಹಾಗೂ ಆತ್ಮಬಲ ಗಿಟ್ಟಿಸಿಕೊಂಡಿದೆ. ಇದೇ ಆಡಳಿತ ಕಾರ್ಯವೈಖರಿಯನ್ನೇ ಮುಂದುವರಿಸಲು, ಸಿಎಂ ಸಿದ್ದರಾಮಯ್ಯ ಇನ್ನಷ್ಟು ಆತ್ಮವಿಶ್ವಾಸದಲ್ಲಿ ಕೆಲಸ ಮಾಡಲು ಸಹಕಾರಿಯಾಗಲಿದೆ. ಉಪಸಮರ ಗೆಲುವು ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂಬ ಸಂದೇಶ ರವಾನೆಯಾಗಿದೆ ಎಂದು ಪಕ್ಷದ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಂಚ ಗ್ಯಾರಂಟಿಕೇಂದ್ರಿತ ಆಡಳಿತವನ್ನು ಮುಂದುವರಿಸಿಕೊಂಡು ಹೋಗಲು ಈ ಉಪಸಮರ ಫಲಿತಾಂಶ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯಗೆ ಇದೇ ಆಡಳಿತ ವೈಖರಿಯನ್ನು ಮುಂದುವರಿಸಿಕೊಂಡು ಹೋಗಲು ಸಹಕಾರಿಯಾಗಲಿದೆ. ಹೊಸ ಕಾರ್ಯಕ್ರಮದೊಂದಿಗೆ ಆಡಳಿತ ನಡೆಸುವ ವಿಶ್ವಾಸವನ್ನು ಕಾಂಗ್ರೆಸ್ ಸರ್ಕಾರಕ್ಕೆ ನೀಡಿದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.