ಬೆಂಗಳೂರು: ಹದಿನಾರನೇ ವಿಧಾನಸಭೆಯ ಮೂರನೇ ಅಧಿವೇಶನ ಫೆ.12ರಿಂದ ಆರಂಭವಾಗಿದ್ದು, ಒಟ್ಟು 13 ದಿನಗಳ ಕಾಲ ಸುಮಾರು 60 ಗಂಟೆ 10 ನಿಮಿಷಗಳ ಕಾಲ ಕಾರ್ಯಕಲಾಪ ನಡೆಸಲಾಗಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ. ಇಂದು ಸಂಜೆ ಇಂದಿನ ಕಾರ್ಯಕಲಾಪಗಳನ್ನು ಮುಗಿಸಿದ ಬಳಿಕ ಸಂಕ್ಷಿಪ್ತ ವರದಿಯನ್ನು ಸ್ಪೀಕರ್ ಸದನದಲ್ಲಿ ಓದಿದರು.
"ಫೆ.12ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಮಾಡಿದರು. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಿ 12 ಮಂದಿ ಸದಸ್ಯರು ಭಾಗವಹಿಸಿದ್ದು, ವಂದನಾ ನಿರ್ಣಯದ ಪ್ರಸ್ತಾವವನ್ನು 20ರಂದು ಅಂಗೀಕರಿಸಲಾಯಿತು. 2024-25ನೇ ಸಾಲಿನ ಆಯವ್ಯಯ ಅಂದಾಜುಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 16ರಂದು ಮಂಡಿಸಿದರು. ಆಯವ್ಯಯದ ಸಾಮಾನ್ಯ ಚರ್ಚೆಯಲ್ಲಿ 25 ಸದಸ್ಯರು ಭಾಗವಹಿಸಿದ್ದು, ಫೆ.29 ರಂದು ಮುಖ್ಯಮಂತ್ರಿ ಉತ್ತರ ನೀಡಿದ ನಂತರ ಮತಕ್ಕೆ ಹಾಕಿ ಅಂಗೀಕರಿಸಲಾಯಿತು."
"2012-13, 2013-14, 2014-15, 2015-16, 2016-17 ಮತ್ತು 2017-18ನೇ ಅವಧಿಯಲ್ಲಿನ ಅನುದಾನಕ್ಕಿಂತ ಹೆಚ್ಚುವರಿ ವೆಚ್ಚಗಳನ್ನು ಸಕ್ರಮಗೊಳಿಸುವ ಬೇಡಿಕೆಗಳನ್ನು 20ರಂದು ಮಂಡಿಸಿದ್ದು, 29ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. 2023-24ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಹಾಗೂ ಅಂತಿಮ ಕಂತನ್ನು 21 ರಂದು ಮಂಡಿಸಿದ್ದು, 29ರಂದು ಮತಕ್ಕೆ ಹಾಕಿ ಅಂಗೀಕರಿಸಲಾಗಿದೆ. ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ಸಂತಾಪ ಸೂಚನಾ ನಿರ್ಣಯವನ್ನು ಮಂಡಿಸಿ, ಅಂಗೀಕರಿಸಲಾಗಿದೆ. ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಬಗ್ಗೆ ಕಾರ್ಯದರ್ಶಿ ವರದಿಯನ್ನು ಮಂಡಿಸಲಾಗಿದೆ. ಭಾರತ ಸಂವಿಧಾನದ 151(2)ನೇ ಅನುಚ್ಛೇದದ ಮೇರೆಗೆ, ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ 2022-23ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು (ಸಂಪುಟ 1 ಮತ್ತು II) ಸದನದಲ್ಲಿ ಮಂಡಿಸಲಾಗಿದೆ."
"ವಿಧಾನಸಭೆಯ ಸದಸ್ಯರ ಖಾಸಗಿ ವಿಧೇಯಕಗಳ ಮತ್ತು ನಿರ್ಣಯಗಳ ಸಮಿತಿಯ 2023-24ನೇ ಸಾಲಿನ ಎರಡನೇ ವರದಿ, ಹಾಗೂ 2023-24ನೇ ಸಾಲಿನ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಎರಡನೇ ವರದಿ, ಹಾಗೂ ಸರ್ಕಾರಿ ಭರವಸೆಗಳ ಸಮಿತಿಯ ಮೊದಲನೇ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ. ಒಟ್ಟು 43 ಅಧಿಸೂಚನೆಗಳು ಮತ್ತು 162 ವಾರ್ಷಿಕ ವರದಿಗಳು, 163 ಲೆಕ್ಕ ಪರಿಶೋಧನಾ ವರದಿಗಳು, 4 ಅನುಪಾಲನ ವರದಿಗಳು, 6 ಅನುಸರಣಾ ವರದಿ ಹಾಗೂ 3 ಲೆಕ್ಕ ತಪಾಸಣಾ ವರದಿಯನ್ನು ಸದನದಲ್ಲಿ ಮಂಡಿಸಲಾಗಿದೆ."
"ಈ ಅಧಿವೇಶನದಲ್ಲಿ ಧನವಿನಿಯೋಗ ವಿಧೇಯಕಗಳೂ ಸೇರಿದಂತೆ ಒಟ್ಟು 26 ವಿಧೇಯಕಗಳನ್ನು ಮಂಡಿಸಿ, ಅಂಗೀಕರಿಸಲಾಗಿದೆ. 2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯದತ್ತಿಗಳ (ತಿದ್ದುಪಡಿ) ವಿಧೇಯಕವನ್ನು ಪುನರ್ ಪರ್ಯಾಲೋಚಿಸಿ ಅಂಗೀಕರಿಸಲಾಗಿದೆ. ನಿಯಮ 60 ರಡಿಯಲ್ಲಿ ನೀಡಿದ್ದ 5 ಸೂಚನೆಗಳ ಪೈಕಿ 2ನ್ನು ನಿಯಮ 69 ಪರಿವರ್ತಿಸಲಾಗಿದ್ದು, 1 ಸೂಚನೆಯನ್ನು ತಿರಸ್ಕರಿಸಲಾಗಿದೆ ಹಾಗೂ 1 ಸೂಚನೆಯನ್ನು ಭಾಷಣದ ಮೇಲೆ ಚರ್ಚಿಸಲು ಅವಕಾಶ ಕಲ್ಪಿಸಲಾಗಿದೆ. ನಿಯಮ 69 ರಡಿಯಲ್ಲಿ ಒಟ್ಟು 6 ಸೂಚನೆಗಳನ್ನು ಸ್ವೀಕರಿಸಲಾಗಿದ್ದು, ಆ ಪೈಕಿ 2 ಸೂಚನೆಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗಿದೆ."