ಕರ್ನಾಟಕ

karnataka

ಮೈಸೂರು ಚಲೋ ಪಾದಯಾತ್ರೆಗೆ ಹೆಚ್​ ಡಿ ಕುಮಾರಸ್ವಾಮಿ, ಯಡಿಯೂರಪ್ಪರಿಂದ ಚಾಲನೆ: ಬಿ ವೈ ವಿಜಯೇಂದ್ರ - B Y VIJAYENDRA

By ETV Bharat Karnataka Team

Published : Aug 1, 2024, 7:52 PM IST

ಕಾಂಗ್ರೆಸ್​ ಸರ್ಕಾರದ ವಿರುದ್ಧ ಮೈಸೂರು ಚಲೋ ಪಾದಯಾತ್ರೆ ಕುರಿತ ಜೆಡಿಎಸ್ ಮುನಿಸು ಶಮನಗೊಂಡಿದೆ. ನಿಗದಿತ ದಿನದಂದು ಯಾತ್ರೆಗೆ ಕೇಂದ್ರ ಮಂತ್ರಿ ಹೆಚ್​ ​ಡಿ ಕುಮಾರಸ್ವಾಮಿ, ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಕಟಿಸಿದರು.

ಕುಮಾರಸ್ವಾಮಿ ಜೊತೆ ಬಿಜೆಪಿ ನಾಯಕರ ಮಾತುಕತೆ
ಕುಮಾರಸ್ವಾಮಿ ಜೊತೆ ಬಿಜೆಪಿ ನಾಯಕರ ಮಾತುಕತೆ (ETV Bharat)

ಬೆಂಗಳೂರು/ನವದೆಹಲಿ :ಬಿಜೆಪಿ- ಜೆಡಿಎಸ್ ಜಂಟಿಯಾಗಿ ಆಗಸ್ಟ್ 3 ರಿಂದ ಮೈಸೂರು ಚಲೋ ಪಾದಯಾತ್ರೆ ನಡೆಸಲಿವೆ. ಭ್ರಷ್ಟಾಚಾರ, ಹಗರಣಗಳಿಂದ ಕೂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ದೊಡ್ಡ ಜನಾಂದೋಲನ ನಡೆಸಲಾಗುವುದು. ಇದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.

ದೆಹಲಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎರಡೂ ಪಕ್ಷಗಳ ಸಂಸದರು, ಶಾಸಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ನೈಸ್​ ರಸ್ತೆಯಿಂದ ಯಾತ್ರೆ ಆರಂಭ:ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣವನ್ನು ಮುಂದಿಟ್ಟು ಬಿಜೆಪಿ ಮತ್ತು ಜೆಡಿಎಸ್ ಸದನದಲ್ಲಿ ಒಟ್ಟಾಗಿ ಹೋರಾಟ ಮಾಡುತ್ತಿವೆ. ಸದನ ಮುಗಿದ ಬಳಿಕ ಈ ಹೋರಾಟ ಮುಂದುವರೆಸಲು ನಿರ್ಧರಿಸಲಾಗಿತ್ತು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‌ದಾಸ್ ಅಗರ್ವಾಲ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸೇರಿದಂತೆ ಹಲವು ನಾಯಕರು ಈ ಬಗ್ಗೆ ಚರ್ಚಿಸಿದ್ದು, ಆಗಸ್ಟ್ 3 ರಂದು (ಶನಿವಾರ) ಬೆಳಗ್ಗೆ 8.30ಕ್ಕೆ ನೈಸ್ ರಸ್ತೆ ಜಂಕ್ಷನ್‌ನಿಂದ ಪಾದಯಾತ್ರೆ ಹೊರಡಲಿದೆ ಎಂದು ಪ್ರಕಟಿಸಿದರು.

ಅಹಿಂದ ಹೆಸರೇಳಿಕೊಂಡು ಅಧಿಕಾರ ಪಡೆದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿ ಹಣವನ್ನು ಕಾಂಗ್ರೆಸ್ ಸರ್ಕಾರ ದೋಚಿದೆ ಎಂದು ಆರೋಪಿಸಿದರು.

ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಮತ್ತೊಂದೆಡೆ ಮುಡಾದಲ್ಲಿ ಮುಖ್ಯಮಂತ್ರಿಗಳ ಕುಟುಂಬಕ್ಕೆ ಅಕ್ರಮವಾಗಿ ಬಂದ 14 ನಿವೇಶನಗಳ ಜೊತೆಗೆ 4 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ಸಾವಿರಾರು ನಿವೇಶನಗಳನ್ನು ಕಾಂಗ್ರೆಸ್ ಸರ್ಕಾರ ಬಂದ ಬಳಿಕ ತಮಗೆ ಬೇಕಾದವರಿಗೆ ಕೊಟ್ಟಿದೆ. ಇದರಿಂದ ಮುಡಾಗೆ ₹4 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗಿದೆ. ಬಡವರು, ಪರಿಶಿಷ್ಟ ಸಮುದಾಯಕ್ಕೆ ಸಿಗಬೇಕಾದ ನಿವೇಶನಗಳನ್ನು ಕಾಂಗ್ರೆಸ್​ ನಾಯಕರ ಬೆಂಬಲಿಗರ ರಿಯಲ್ ಎಸ್ಟೇಟ್ ದಂಧೆಗೆ ಕೊಡಲಾಗಿದೆ ಎಂದು ದೂರಿದರು.

ರಾಜ್ಯ ಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ :ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ರಾಜ್ಯ ಸರ್ಕಾರ ನಿರಂತರ ಭ್ರಷ್ಟಾಚಾರದಲ್ಲಿ ತೊಡಗಿದೆ. ವಾಲ್ಮೀಕಿ ನಿಗಮ ಹಗರಣ, ಮುಡಾ ಹಗರಣ ನಡೆದಿದೆ. ಮುಡಾದಲ್ಲಿ ಹಗರಣ ಆಗಿಲ್ಲವೆಂದು ಕಾಂಗ್ರೆಸ್ಸಿನವರು ನಿರ್ಲಜ್ಜೆಯಿಂದ ಸಮರ್ಥಿಸುತ್ತಿದ್ದಾರೆ. ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ ಅವರ ಜೊತೆ ಮಾತುಕತೆ ನಡೆಸಲಾಗಿದ್ದು, ಗೊಂದಲ ಬಗೆಹರಿದಿದೆ. ನಿಗದಿಯಂತೆ ಎರಡೂ ಪಕ್ಷಗಳ ನೇತೃತ್ವದಲ್ಲಿ ಅರ್ಥಾತ್ ಎನ್‌ಡಿಎ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದೆ. ಎರಡೂ ಪಕ್ಷಗಳ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ ಎಂದು ಮಾಹಿತಿ ನೀಡಿದರು.

ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್ ಮಾತನಾಡಿ, ಬಿಜೆಪಿ- ಜೆಡಿಎಸ್ ಜಂಟಿಯಾಗಿ ಈ ಪಾದಯಾತ್ರೆ ನಡೆಸಲಿವೆ. ಎರಡೂ ಪಕ್ಷಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಉತ್ಸಾಹದಿಂದ ಭಾಗವಹಿಸುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ:ಬಿಜೆಪಿ ಪಾದಯಾತ್ರೆಗೆ ಕೌಂಟರ್ ಆಗಿ ನಾವೂ ಪಾದಯಾತ್ರೆಗೆ ರೆಡಿ ಮಾಡಿಕೊಳ್ಳುತ್ತಿದ್ದೇವೆ : ಡಿಸಿಎಂ ಡಿ ಕೆ ಶಿವಕುಮಾರ್​ - D K SHIVAKUMAR

ABOUT THE AUTHOR

...view details