ಬೆಂಗಳೂರು: ಮಾಜಿ ಶಾಸಕ ನಾಗನಗೌಡ ಕಂದಕೂರ ಮತ್ತು ಹಿರಿಯ ಸಾಹಿತಿ ಪ್ರೊ.ಅಮೃತ ಸೋಮೇಶ್ವರ ಅವರ ನಿಧನಕ್ಕೆ ಇಂದು ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರನ್ನು ಬೀಳ್ಕೊಟ್ಟ ನಂತರ ವಿಧಾನಸಭೆ ಕಲಾಪ ಸಮಾವೇಶಗೊಂಡಾಗ ಸ್ಪೀಕರ್ ಯು.ಟಿ.ಖಾದರ್ ಅವರು ಸಂವಿಧಾನದ ಪೀಠಿಕೆ ಪ್ರಸ್ತಾವನೆಯನ್ನು ಬೋಧಿಸಿದರು. ನಂತರ ಸಂತಾಪ ಸೂಚಕ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು.
ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ನಾಗನಗೌಡ ಕಂದಕೂರ 1945ರ ಜೂನ್ 1ರಂದು ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿ ಜನಿಸಿದ್ದು, ವೃತ್ತಿಯಲ್ಲಿ ಕೃಷಿಕರಾಗಿದ್ದರು. 15ನೇ ವಿಧಾನಸಭೆಗೆ ಆಯ್ಕೆಯಾಗಿದ್ದ ಕಂದಕೂರ ಅವರು, 2019ರಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರು ಜ.28ರಂದು ಅವರು ನಿಧನರಾಗಿದ್ದಾರೆ ಎಂದು ವಿಷಾದಿಸಿದರು.
ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸಾಧಕರಾಗಿದ್ದ ಪ್ರೊ ಅಮೃತ ಸೋಮೇಶ್ವರ ಅವರು ಕನ್ನಡ ಮತ್ತು ತುಳು ಭಾಷೆಯ ಉನ್ನತಿಗಾಗಿ ಸಮರ್ಪಿಸಿಕೊಂಡಿದ್ದರು. ಯಕ್ಷಗಾನ-ಜಾನಪದ, ಭೂತಾರಾಧನೆ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ನೂರಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.
ತಂಬಿಲಾ, ರಂಗಿತಾ ಸೇರಿದಂತೆ ಏಳು ತುಳು ನಾಟಕಗಳನ್ನು ರಚಿಸಿದ್ದಾರೆ. 2016ನೇ ಸಾಲಿನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸನ್ಮಾನ್ ಪ್ರಶಸ್ತಿ, ಸಾಹಿತ್ಯ ಅಕಾಡೆಮಿಯ ಗೌರವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.
ಅವರಿಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. ಜ.6ರಂದು ನಿಧನರಾಗಿದ್ದಾರೆಂದು ಸ್ಪೀಕರ್ ಖಾದರ್ ವಿಷಾದಿಸಿದರು. ಸ್ಪೀಕರ್ ಮಂಡಿಸಿದ ಸಂಭಾವ್ಯ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಆಡಳಿತ ಪಕ್ಷದ ಸದಸ್ಯ ಬಿ.ಆರ್.ಪಾಟೀಲ್, ಜೆಡಿಎಸ್ ಹಿರಿಯ ಸದಸ್ಯ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಸದಸ್ಯರು ಮೃತರ ಬಗ್ಗೆ ಮಾತನಾಡಿ ಸಂತಾಪ ಸೂಚಿಸಿದರು. ನಂತರ ಮೃತರ ಗೌರವಾರ್ಥ ಸದನದಲ್ಲಿ ಮೌನಾಚರಣೆ ಸಲ್ಲಿಸಲಾಯಿತು. ಬಳಿಕ ಸದನವನ್ನು ನಾಳೆಗೆ ಮುಂದೂಡಲಾಯಿತು.
ರಾಜ್ಯ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸಿದೆ-ಸಿ.ಟಿ.ರವಿ: ಮತ್ತೊಂದೆಡೆ, ಇಂದು ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದಲ್ಲಿ ರಾಜ್ಯ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಹೇಳಿಸುವ ಕೆಲಸವನ್ನು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಮುನ್ಸೂಚಿಯಾಗಬೇಕಾಗಿದ್ದ ಭಾಷಣವನ್ನು ದೇಶವನ್ನು ಮತ್ತೊಮ್ಮೆ ವಿಭಜಿಸುವ ಕಾಂಗ್ರೆಸ್ಸಿನ ಒಳ ಹುನ್ನಾರದ ಭಾಗವನ್ನಾಗಿ ಮಾಡಿರುವುದು ದುರಂತ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಟೀಕಿಸಿದ್ದಾರೆ.
ಹಿಂದಿಗಿಂತ ಹೆಚ್ಚು ತೆರಿಗೆ ಹಣ ರಾಜ್ಯದ ಬೊಕ್ಕಸಕ್ಕೆ ಕೇಂದ್ರ ಸರ್ಕಾರದಿಂದ ಸಂದಾಯ ಮಾಡಿದರು ಅದನ್ನು ಮುಚ್ಚಿಟ್ಟು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂಬ ಮಿಥ್ಯಾರೋಪ ಮಾಡಿರುವುದು ವಿಷಾದನೀಯ. ಐದು ಗ್ಯಾರಂಟಿಯಲ್ಲಿ ನಾಲ್ಕನ್ನು ಅರೆಬರೆ ಜಾರಿಗೆ ತಂದು, ಇನ್ನೊಂದನ್ನು ಕಡತದಲ್ಲಿಯೇ ಇಟ್ಟು, ಐದು ಗ್ಯಾರಂಟಿಗಳನ್ನು ನೀಡಿದ್ದೇವೆ ಎಂದು ರಾಜ್ಯಪಾಲರ ಭಾಷಣದಲ್ಲಿ ಹೇಳಿಸಿದ್ದು ಸರ್ಕಾರಕ್ಕೆ ನಾಚಿಕೆಯ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿ:ವಿಧಾನ ಮಂಡಲ ಜಂಟಿ ಅಧಿವೇಶನ: ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೊಗಳಿದ ರಾಜ್ಯಪಾಲರು