ಬೆಂಗಳೂರು:ರಾಜ್ಯದ ಮೂರು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳನ್ನು ಕಾಂಗ್ರೆಸ್ ವಶಕ್ಕೆ ಪಡೆದಿದೆ. ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಸಾಧಿಸಿದೆ.
ಚನ್ನಪಟ್ಟಣ ಜಿದ್ದಾಜಿದ್ದಿ: ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೇಶ್ವರ್ ಮಧ್ಯೆ ನೇರ ಪೈಪೋಟಿ ಉಂಟಾಗಿತ್ತು. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಿ. ಪಿ. ಯೋಗೇಶ್ವರ್ 358 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. ಬಳಿಕ ಎರಡು, ಮೂರು, ನಾಲ್ಕು ಮತ್ತು ಐದನೇ ಸುತ್ತಿನಲ್ಲಿ ನಿಖಿಲ್ ಮುನ್ನಡೆ ಸಾಧಿಸಿದರು. ಐದನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ನಿಖಿಲ್ 25649 ಮತ ಪಡೆದಿದ್ದರೆ ಮತ್ತು ಸಿಪಿ ಯೋಗೇಶ್ವರ್ 24343 ಮತ ಪಡೆದು ಹಿನ್ನಡೆ ಅನುಭವಿಸಿದ್ದರು. ಬಳಿಕ ಸಿಪಿವೈ ಮುನ್ನಡೆ ಸಾಧಿಸಿದ್ದು, 10ನೇ ಸುತ್ತಿನ ವೇಳೆ 15,000 ಲೀಡ್ ಪಡೆದಿದ್ದರು. 11ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಬಳಿಕ ಯೋಗೇಶ್ವರ್ ಅವರು 23210 ಮತಗಳಿಂದ ಭರ್ಜರಿ ಅಂತರ ಕಾಯ್ದುಕೊಂಡಿದ್ದರು. 14ನೇ ಸುತ್ತಿನ ಬಳಿಕ ನಿಖಿಲ್ 59914 ಮತ, ಸಿಪಿವೈ 84166 ಮತ ಪಡೆದಿದ್ದಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ 24252 ಮತಗಳಿಂದ ಮುನ್ನಡೆಯಲ್ಲಿದ್ದರು.
ಅಂತಿಮ ಸುತ್ತಿನ ಬಳಿಕ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು 82229 ಮತ ಪಡೆದು ಸೋತರು. ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು 112642 ಮತಗಳನ್ನು ಗಳಿಸಿ, 25413 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಶಿಗ್ಗಾಂವಿ ಕಣ:ಈ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಭರತ್ ಬೊಮ್ಮಾಯಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಮಧ್ಯೆ ಸ್ಪರ್ಧೆ ಇತ್ತು. ಮೊದಲ ಸುತ್ತಿನಲ್ಲಿ ಭರತ್ ಬೊಮ್ಮಾಯಿಗೆ 4223 ಮತ, ಯಾಸೀರ್ ಖಾನ್ ಪಠಾಣ್ಗೆ 3423 ಮತಗಳು ಬಂದಿವೆ. ಈ ಮೂಲಕ ಭರತ್ 800 ಮತಗಳ ಆರಂಭಿಕ ಮುನ್ನಡೆ ಸಾಧಿಸಿದ್ದರು. ನಂತರ ಅಲ್ಪ ಮತಗಳ ಅಂತರದಿಂದ ಭರತ್ ಮುನ್ನಡೆಯಲಿದ್ದರು. 6ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ಬಳಿಕ ಭರತ್ ಬೊಮ್ಮಾಯಿ 32,787 ಮತ ಪಡೆದರೆ, ಕಾಂಗ್ರೆಸ್ನ ಯಾಸೀರ್ ಖಾನ್ ಪಠಾಣ್ 32,125 ಮತ ಪಡೆದು, 662 ಮತಗಳಿಂದ ಹಿನ್ನಡೆಯಲ್ಲಿದ್ದರು. ಬಳಿಕ ಮುನ್ನಡೆ ಪಡೆದು, 9ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾದಾಗ ಯಾಸೀರ್ ಖಾನ್ ಪಠಾಣ್ 355 ಮತಗಳ ಮುನ್ನಡೆಯಲ್ಲಿದ್ದರು. 10ನೇ ಸುತ್ತಿನಲ್ಲಿ 6479 ಮತಗಳ ಮುನ್ನಡೆ ಕಾಯ್ದುಕೊಂಡಿದ್ದರು. 12ನೇ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ 12,251 ಮತಗಳಿಂದ ಮುಂದಿದ್ದರು. ಬಳಿಕ 14ನೇ ಸುತ್ತಿನ ಮತ ಎಣಿಕೆ ಮುಕ್ತಾಯದ ವೇಳೆಗೆ ಕಾಂಗ್ರೆಸ್ 83,400 ಮತ, ಬಿಜೆಪಿಯು 69972 ಪಡೆದಿದೆ. ಈ ಮೂಲಕ ಯಾಸೀರ್ ಖಾನ್ ಪಠಾಣ್ 13,428 ಮುನ್ನಡೆ ಸಾಧಿಸಿದ್ದರು.
ಬೊಮ್ಮಾಯಿ ಸೋಲು:ಶಿಗ್ಗಾಂವಿಯಲ್ಲಿ 16ನೇ ಸುತ್ತಿನಲ್ಲಿ ಕಾಂಗ್ರೆಸ್ 13448 ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ 93,234 ಮತ ಪಡೆದರೆ, ಬಿಜೆಪಿಯ ಭರತ್ ಬೊಮ್ಮಾಯಿಗೆ 79,756 ಮತಗಳು ಬಂದಿವೆ. ಯಾಸೀರ್ ಪಠಾಣ್ ಗೆದ್ದಿದ್ದು, ಭರತ್ ಬೊಮ್ಮಾಯಿ ಸೋಲನುಭವಿಸಿದ್ದಾರೆ.