ಕರ್ನಾಟಕ

karnataka

ETV Bharat / state

₹9,823 ಕೋಟಿ ಹೂಡಿಕೆಯ ಯೋಜನೆಗಳಿಗೆ ಸಿಎಂ ಅಸ್ತು: ರಾಜ್ಯದಲ್ಲಿ 5,605 ಉದ್ಯೋಗ ಸೃಷ್ಟಿ - KARNATAKA INVESTMENT PROJECTS

ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು 9,823 ಕೋಟಿ ರೂ ಬಂಡವಾಳ ಹೂಡಿಕೆಯ ಒಂಬತ್ತು ಪ್ರಸ್ತಾವನೆಗಳಿಗೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ಹೂಡಿಕೆ ಯೋಜನೆಗಳಿಗೆ ಸಿಎಂ ಅಸ್ತು, Karnataka Investment Projects
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಸಭೆ (ETV Bharat)

By ETV Bharat Karnataka Team

Published : 8 hours ago

ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 64ನೇ ಸಭೆ ಒಟ್ಟು ₹9,823.31 ಕೋಟಿ ಬಂಡವಾಳ ಹೂಡಿಕೆಯ ಒಂಬತ್ತು ಯೋಜನೆಗಳಿಗೆ ಹಸಿರು ನಿಶಾನೆ ತೋರಿದೆ. ಇದರಿಂದ 5,605 ಉದ್ಯೋಗಗಳು ಸೃಷ್ಟಿಯಾಗಲಿವೆ.

ಸೆಮಿಕಂಡಕ್ಟರ್‌ ವಲಯದಲ್ಲಿ ಹೆಚ್ಚು ಹೂಡಿಕೆ: ಅನುಮೋದನೆ ಪಡೆದ ಯೋಜನೆಗಳಲ್ಲಿ ಡಿ.ಎನ್.ಸೊಲ್ಯೂಷನ್ಸ್​ನ ₹998 ಕೋಟಿ (ಐಟಿಐಆರ್, ದೇವನಹಳ್ಳಿ), ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ಸ್ ಮ್ಯಾನುಫ್ಯಾಕ್ಚರಿಂಗ್ ₹3,425.60 ಕೋಟಿ (ಕೋಚನಹಳ್ಳಿ ಕೈಗಾರಿಕಾ ಪ್ರದೇಶ, ಮೈಸೂರು) ಮತ್ತು ಸನ್ಸೆರಾ ಇಂಜಿನಿಯರಿಂಗ್ ಸಂಸ್ಥೆಯ ₹2150 ಕೋಟಿ (ಹಾರೋಹಳ್ಳಿ) ಹೂಡಿಕೆ ಯೋಜನೆಗಳು ಹೊಸದಾಗಿವೆ. ಇವುಗಳಿಂದ ಕ್ರಮವಾಗಿ 467, 460 ಮತ್ತು 3,500 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಮಿಕ್ಕಂತೆ, 6 ಯೋಜನೆಗಳು ಹೆಚ್ಚುವರಿ ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳಾಗಿವೆ. ಇವುಗಳಲ್ಲಿ ಮುಸಾಶಿ ಆಟೋ ಪಾರ್ಟ್ಸ್ (ದೊಡ್ಡಬಳ್ಳಾಪುರ) ₹122.66 ಕೋಟಿ, ಜೆಎಸ್ ಡಬ್ಲ್ಯು ಸಿಮೆಂಟ್ (ತೋರಣಗಲ್, ಬಳ್ಳಾರಿ) ₹486.82 ಕೋಟಿ, ನೈಡೆಕ್ ಇಂಡಸ್ಟ್ರಿಯಲ್ ಆಟೋಮೇಷನ್ (ಬೇಲೂರು, ಧಾರವಾಡ) ₹200 ಕೋಟಿ, ಎಪ್ಸಿಲಾನ್ ಕಾರ್ಬನ್ (ಸಂಡೂರು) ₹740 ಕೋಟಿ, ಕೆ.ಬಿ.ಸ್ಟೀಲ್ಸ್ (ಹೊಸಪೇಟೆ, ವಿಜಯನಗರ) ₹852.49 ಕೋಟಿ ಮತ್ತು ಸಿಫಿ ಡೇಟಾ ಮ್ಯಾನೇಜ್ಡ್ ಸರ್ವೀಸಸ್ (ಹೈಟೆಕ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್) ₹847.74 ಕೋಟಿ ಹಣವನ್ನು ರಾಜ್ಯದಲ್ಲಿ ಹೆಚ್ಚುವರಿಯಾಗಿ ಹೂಡಿಕೆ ಮಾಡಲಿವೆ. ಇವುಗಳಿಂದ ಕ್ರಮವಾಗಿ ಮೊದಲ ನಾಲ್ಕು ಕಂಪನಿಗಳಲ್ಲಿ ಮಾತ್ರ 478, 225, 150 ಮತ್ತು 325 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ವಿವರಿಸಿದ್ದಾರೆ.

ಕೈಗಾರಿಕೆ ಆರಂಭಿಸದಿದ್ದರೆ ಕ್ರಮ: ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಸೆಮಿಕಂಡಕ್ಟರ್ ವಲಯದ ಪ್ರಥಮ ಯೋಜನೆಯು ಮೈಸೂರಿನ ಬಳಿಕ ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಲಸ್ಟರ್​​ನಲ್ಲಿ ಅಸ್ತಿತ್ವಕ್ಕೆ ಬರಲಿದೆ. ಕೆಐಎಡಿಬಿಯಿಂದ ಜಮೀನು ಪಡೆದುಕೊಳ್ಳುವ ಉದ್ಯಮಿಗಳು/ಕಂಪನಿಗಳು ನಿಗದಿತ ಸಮಯದಲ್ಲಿ ಕೈಗಾರಿಕೆಯನ್ನು ಆರಂಭಿಸಬೇಕು. ಇಲ್ಲದಿದ್ದರೆ ದಂಡ ವಿಧಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದಿದ್ದಾರೆ.

ಸಕ್ಕರೆ ಕಾರ್ಖಾನೆಗಳ ಉತ್ಪನ್ನಗಳಲ್ಲಿ ರೈತರಿಗೆ ಲಾಭಾಂಶ: "ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆಯಲ್ಲೂ ರೈತರಿಗೆ ಲಾಭಾಂಶದ ಪಾಲು ನೀಡುವ ಕುರಿತು ಪರಿಶೀಲಿಸಲಾಗುವುದು. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ಸಂಬಂಧ ಅನುಸರಿಸುತ್ತಿರುವ ನಿಯಮಗಳನ್ನು ಅಧಿಕಾರಿಗಳು ನೋಡಬೇಕು. ಒಟ್ಟಿನಲ್ಲಿ ಕೈಗಾರಿಕೆಗಳು ಸರ್ಕಾರದ ನಿಯಮಗಳಿಗೆ ತಕ್ಕಂತೆಯೇ ಕಾರ್ಯ ನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳಲಾಗುವುದು" ಎಂದು ಸಿಎಂ ವಿವರಿಸಿದ್ದಾರೆ.

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿಗೆ ನೂತನ ಜವಳಿ ನೀತಿ ಜಾರಿ

ABOUT THE AUTHOR

...view details