ಕರ್ನಾಟಕ

karnataka

ETV Bharat / state

ಕಾರವಾರದ ಈ ದೇಗುಲದಲ್ಲಿ ವರ್ಷಕ್ಕೆ 7 ದಿನ ಮಾತ್ರ ಭಕ್ತರಿಗೆ ದೇವಿಯ ದರ್ಶನ! - Sateri Devi Temple

ವಾರ್ಷಿಕ ಜಾತ್ರಾ ಮಹೋತ್ಸವದ ಏಳು ದಿನ ಮಾತ್ರ ಸಾತೇರಿ ದೇವಿ ದರ್ಶನ ನೀಡುತ್ತಾಳೆ. ಮೊದಲೆರಡು ದಿನ ಅರ್ಚಕ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ದರ್ಶನಾವಕಾಶಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಉಳಿದ ಐದು ದಿನ ಪರ ಊರಿನ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ.

ಸಾತೇರಿ ದೇವಿ ದೇವಸ್ಥಾನ
ಕಾರವಾರದ ಸಾತೇರಿ ದೇವಿ ದೇವಸ್ಥಾನ (ETV Bharat)

By ETV Bharat Karnataka Team

Published : Sep 16, 2024, 10:38 AM IST

ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಸ್ಥಾನ (ETV Bharat)

ಕಾರವಾರ: ಈ ದೇವಿಗೆ ನಿತ್ಯ ಪೂಜೆ ಇರುವುದಿಲ್ಲ. ನಿತ್ಯ ಭಕ್ತರಿಗೆ ದರ್ಶನವೂ ನೀಡಲ್ಲ. ವರ್ಷದಲ್ಲಿ ಏಳು ದಿನ ಮಾತ್ರ ದರ್ಶನ!. ಈ ದೇವಿಗೆ ಹರಕೆ ಹೊತ್ತುಕೊಂಡರೆ ಒಂದೇ ವರ್ಷದಲ್ಲಿ ಈಡೇರುತ್ತದೆ ಎಂಬುದು ಭಕ್ತರ ನಂಬಿಕೆ.

ಇದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಗ್ರಾಮದಲ್ಲಿರುವ ಸಾತೇರಿ ದೇವಸ್ಥಾನ. ಇಲ್ಲಿ ದೇವಿಯ ದರ್ಶನಕ್ಕೆ ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶವಿದೆ. ಸಾತೇರಿದೇವಿ ತನ್ನ ಜಾತ್ರಾ ಮಹೋತ್ಸವದಲ್ಲಿ ಮಾತ್ರ ದರ್ಶನ ನೀಡುವ ಪದ್ಧತಿ ಇದೆ. ಈ ಬಾರಿಯೂ ಸಹ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವಿಗೆ ವಿಶೇಷ ಸೇವೆಗಳನ್ನು ಅರ್ಪಿಸುತ್ತಿದ್ದಾರೆ.

ಜಾತ್ರೆಯ ಮೊದಲೆರಡು ದಿನ ದೇವಸ್ಥಾನದ ಅರ್ಚಕ ಕುಟುಂಬದವರಿಗೆ ಹಾಗೂ ಗ್ರಾಮಸ್ಥರಿಗೆ ದೇವಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಉಳಿದ ಐದು ದಿನ ದೇಗುಲ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ. ವರ್ಷದ ಉಳಿದ ದಿನಗಳ ಪೈಕಿ ಪ್ರತಿ ಸೋಮವಾರ ಗರ್ಭಗುಡಿಯ ಬಾಗಿಲಲ್ಲಿ ನಿಂತು ಪೂಜೆ ಸಲ್ಲಿಸಿ ತೆರಳಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಧೀರಜ್ ನಾಯ್ಕ ತಿಳಿಸಿದರು.

ದೇವಸ್ಥಾನದ ಇತಿಹಾಸ: ಇಂಥ ಅಪರೂಪದ ಸಾತೇರಿ ದೇವಿಗೆ ಪೌರಾಣಿಕ ಇತಿಹಾಸವಿದೆ. ಹಣಕೋಣದಲ್ಲಿರುವ ದೇವಿ ತನ್ನ ಭಕ್ತರ ಕಷ್ಟಗಳನ್ನು ನಿವಾರಿಸಿ, ಸಹಾಯದ ಅಗತ್ಯವಿದ್ದರೆ ಭಕ್ತರ ಸಮ್ಮುಖದಲ್ಲೇ ಪ್ರತ್ಯಕ್ಷಳಾಗಿ ಕಷ್ಟಗಳನ್ನು ನಿವಾರಿಸುತ್ತಿದ್ದಳಂತೆ. ಒಮ್ಮೆ ದೇವಿ ಬಾವಿಯ ಪಕ್ಕದಲ್ಲಿ ಸ್ನಾನ ಮಾಡಿ ಕೂದಲು ಬಾಚಿಕೊಳ್ಳುವಾಗ ಒಬ್ಬ ದುಷ್ಟನ ಕಣ್ಣು ದೇವಿಯ ಮೇಲೆ ಬಿದ್ದು ದೇವಿಯ ಬಳಿ ಬಂದಾಗ ರಕ್ಷಣೆಗಾಗಿ ಬಾವಿಗೆ ಹಾರಿ ಅದೃಶ್ಯಳಾದಳಂತೆ. ಬಳಿಕ ಊರಿನ ಹಿರಿಯರೊಬ್ಬರ ಕನಸಿನಲ್ಲಿ ದೇವಿ ಬಂದು ತಾನು ಬಾವಿಯಲ್ಲಿ ಅದೃಶ್ಯಳಾಗಿದ್ದು, ತಾನು ನೆಲೆಸಿರುವ ಸ್ಥಳದಲ್ಲೇ ಸಣ್ಣ ಗುಡಿ ಕಟ್ಟಿಕೊಡುವಂತೆ ಮತ್ತು ವರ್ಷದಲ್ಲಿ 7 ದಿನಗಳ ಕಾಲ ಮಾತ್ರ ದರ್ಶನ ನೀಡುವುದಾಗಿ ತಿಳಿಸಿದ್ದಳಂತೆ. ಅದರಂತೆ, ನಂತರದ ದಿನಗಳಲ್ಲಿ ಈ ಜಾಗದಲ್ಲಿ ಚಿಕ್ಕ ಗುಡಿ ಕಟ್ಟಲಾಯಿತು. ಈ ದೇವಿಯ ಫೋಟೋವನ್ನು ಮಾರಾಟ ಮಾಡುವುದಾಗಲೀ, ಮೊಬೈಲ್, ಕ್ಯಾಮೆರಾಗಳಲ್ಲಿ ಚಿತ್ರಿಸಿಕೊಳ್ಳುವುದಕ್ಕಾಗಲೀ ದೇವಸ್ಥಾನದಲ್ಲಿ ಅವಕಾಶವಿಲ್ಲ. ಹಾಗೇನಾದರೂ ಮಾಡಿದಲ್ಲಿ ಅಂತಹವರಿಗೆ ಕೆಟ್ಟದ್ದಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ದೇವಿಯನ್ನು ನೋಡಲು ವರ್ಷದಲ್ಲಿ ಏಳು ದಿನ ಮಾತ್ರ ಅವಕಾಶ ಸಿಗುವುದರಿಂದ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಇದನ್ನೂ ಓದಿ: ಬೆಂಗಳೂರು: ಗಣೇಶ ಲಡ್ಡು 4.5 ಲಕ್ಷ ರೂ.ಗೆ ಹರಾಜು, ಬಿಜೆಪಿ ಮುಖಂಡನಿಂದ ಖರೀದಿ - Ganesh Laddu Auction

ABOUT THE AUTHOR

...view details