ಮಂಡ್ಯ:"ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂಬ ಗುಚ್ಛವ್ಯವಸ್ಥೆಯನ್ನು ತೆರೆಯಬೇಕು. ಇವುಗಳಲ್ಲಿ ಕನ್ನಡವೇ ಶಿಕ್ಷಣದ ಭಾಷೆಯಾಗಿ, ಇಂಗ್ಲಿಷ್ ಭಾಷೆ ಪಠ್ಯಕ್ರಮದಲ್ಲಿ ಒಂದು ಭಾಷೆ ಅಥವಾ ವಿಷಯವಾಗಿ ಮಾತ್ರ ಇರುವಂತೆ ಮಾಡಬೇಕು" ಎಂದು ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ.
ಮಂಡ್ಯದಲ್ಲಿ ಇಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
"ಸ್ವಾತಂತ್ರ್ಯ ಬಂದ ನಂತರ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯಗಳ ಸರ್ಕಾರಗಳೇ ನಿರ್ವಹಿಸಲು ಆರಂಭಿಸಿದರೂ, ಬ್ರಿಟಿಷರು ಬಿಟ್ಟುಹೋದ ಕ್ರೈಸ್ತ ಸಮುದಾಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಮುಂದುವರೆದವು. ಬಹಳ ಮುಖ್ಯವಾಗಿ ದಶಕಗಳು ಕಳೆದಂತೆ ಹಲವಾರು ಜಾತಿಧರ್ಮಗಳ ನೆಲೆಯ ಮಠಮಾನ್ಯಗಳು, ನಿರ್ದಿಷ್ಟ ಜಾತಿಯ ಏಳಿಗೆಗೆ ಬದ್ಧವಾದ ಸಂಸ್ಥೆಗಳು, ಪ್ರತೀ ರಾಜ್ಯದಲ್ಲೂ ನೂರಾರು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಮತ್ತು ಅವುಗಳಿಗೆ ವಿದ್ಯಾರ್ಥಿನಿಲಯಗಳನ್ನು ಪ್ರಾರಂಭಿಸಿದವು. ಕನ್ನಡನಾಡಿನಲ್ಲಿ ಶಿಕ್ಷಣಕ್ಕೆ ಮೂಲವ್ಯವಸ್ಥೆಯೇನೋ ವಿಸ್ತಾರಗೊಂಡಿತು. ಆದರೆ, ಕನ್ನಡನಾಡಿನಲ್ಲಿ ಹುಟ್ಟುವ ಮಕ್ಕಳು ಪಡೆಯುವ ಶಿಕ್ಷಣದ ಭಾಷೆ ಮತ್ತು ಮಾಧ್ಯಮ ಯಾವುದಾಗಿರಬೇಕು ಎನ್ನುವ ಚರ್ಚೆ, ಅಲ್ಲಿಂದಾಚೆಗೆ ಪಡೆದಿರುವ ಆಯಾಮಗಳನ್ನು ಲೆಕ್ಕವಿಡುವುದೇ ಕಷ್ಟ" ಎಂದರು.
"ತಾಯ್ನುಡಿಯ ಮೇಲಿನ ಪ್ರೀತಿ, ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮ ಆಗಬೇಕು ಎಂಬ ಚಳುವಳಿಗಳು ಬೆಳೆದುಬಂದ ರೀತಿ, ಬಹುತೇಕ ವಿಷಯಗಳಲ್ಲಿ ಸರ್ಕಾರದ ದ್ವಂದ್ವ ನೀತಿ ಮತ್ತು ಸಂವಿಧಾನದ ಚೌಕಟ್ಟಿನಲ್ಲಿ ನ್ಯಾಯಾಲಯಗಳು ಶಿಕ್ಷಣದ ಭಾಷೆ ಕುರಿತು ನೀಡಿರುವ ತೀರ್ಪುಗಳಿಗೆ ಸರ್ಕಾರಗಳು ನೀಡಲೇಬೇಕಾದ ಸಮ್ಮತಿ - ಇನ್ನೂ ಮುಂತಾದ ಸಂಗತಿಗಳ ಹಿನ್ನೆಲೆಯಲ್ಲಿ ಪ್ರಾಥಮಿಕ ಪೂರ್ವ (ಪ್ರೀಪ್ರೈಮರಿ) ಶಿಕ್ಷಣದಿಂದ ಉನ್ನತ ಮಟ್ಟದ ಶಿಕ್ಷಣದವರೆಗೆ, ಗ್ರಾಮಾಂತರ ಪ್ರದೇಶದಿಂದ ಪ್ರಗತಿ ಹೊಂದಿದ ನಗರ ಪ್ರದೇಶದವರೆಗೆ ಶಿಕ್ಷಣದ ಭಾಷೆ ಯಾವುದು ಎನ್ನುವುದು ಇನ್ನೂ ನಿರ್ಧಾರವಾಗದ ಸಂಕೀರ್ಣ ಸ್ವರೂಪದಲ್ಲೇ ಇದೆ. ಕರ್ನಾಟಕ ರಾಜ್ಯದಲ್ಲಿ ಸರ್ಕಾರಗಳು ಬದಲಾದಂತೆ ಸರ್ಕಾರಿ-ಸಾರ್ವಜನಿಕ ಶಾಲಾಶಿಕ್ಷಣದಲ್ಲಿ ಪ್ರಥಮ, ದ್ವಿತೀಯ, ತೃತೀಯ ಭಾಷೆ ಎಂದು ಕನ್ನಡದ ಸ್ಥಾನಮಾನ ಬದಲಾಗುವುದು, ಖಾಸಗಿ ಶಾಲೆಗಳು ಅದರಲ್ಲೂ ಕೇಂದ್ರೀಯ ಪಠ್ಯಕ್ರಮ ಮತ್ತು ಪರೀಕ್ಷಾಕ್ರಮವನ್ನು ಅನುಸರಿಸುವ ಶಾಲೆಗಳು ವಿಭಿನ್ನ ನೀತಿಗೆ ಪಟ್ಟುಹಿಡಿಯುವುದು, ಸರ್ಕಾರವೇ ಪಬ್ಲಿಕ್ ಶಾಲೆಗಳನ್ನು ತೆರೆದಿರುವುದು ಹೀಗೆ ನಮ್ಮಲ್ಲಿ ಹಲವು ಸಂಗತಿಗಳು ಅನೇಕರಿಗೆ ಗೊಂದಲ ಹುಟ್ಟಿಸಿವೆ" ಎಂದು ಹೇಳಿದರು.
"ನಮ್ಮ ನೆಲದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಶಿಕ್ಷಣ ನೀಡಬೇಕು ಎಂಬುದನ್ನು ಕರ್ತವ್ಯವಾಗಿ ಪರಿಗಣಿಸಬೇಕಿರುವ ಸರ್ಕಾರ ತುರ್ತಾಗಿ ಕೆಲವು ಬಾಹ್ಯ ಮತ್ತು ಆಂತರಿಕ ಸಂಗತಿಗಳನ್ನು ಗಮನಿಸಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನೂರಾರು, ಸಾವಿರಾರು ಸರ್ಕಾರಿ ಶಾಲೆಗಳು ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಮೊದಲು ಅವುಗಳನ್ನು ಸರಿಪಡಿಸಿ, ಮಕ್ಕಳಿಗೆ ಮತ್ತು ಪೋಷಕರಿಗೆ ಅವು ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಮಕ್ಕಳು ಮತ್ತು ಶಿಕ್ಷಕರ ಕೊರತೆಯಿಂದ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಎದ್ದುಕಾಣುವಂತೆ ನಡೆಯುತ್ತಿದೆ. ಇದು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸದಂತೆ ಹಿರಿಯರನ್ನು ಪ್ರೇರೇಪಿಸುತ್ತಿದೆ" ಎಂದು ತಿಳಿಸಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (ETV Bharat) "ಆದ್ದರಿಂದ ಸರ್ಕಾರ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂಬ ಗುಚ್ಛವ್ಯವಸ್ಥೆಯನ್ನು ಪ್ರತೀ ಗ್ರಾಮದಲ್ಲಿ ಅಲ್ಲದಿದ್ದರೂ ಪ್ರತೀ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ತೆರೆಯಬೇಕು ಎನ್ನುವ ಸಲಹೆಯನ್ನು ಅನೇಕ ಚಿಂತಕರು ನೀಡಿದ್ದಾರೆ. ಇದನ್ನು ಸರ್ಕಾರ ಪರಿಶೀಲಿಸುವುದು ಅಗತ್ಯ. ಇವುಗಳಲ್ಲಿ ಕನ್ನಡವೇ ಶಿಕ್ಷಣದ ಭಾಷೆಯಾಗಿ, ಇಂಗ್ಲಿಷ್ ಭಾಷೆ ಪಠ್ಯಕ್ರಮದಲ್ಲಿ ಒಂದು ಭಾಷೆ ಅಥವಾ ವಿಷಯವಾಗಿ ಮಾತ್ರ ಇರುವಂತೆ ಮಾಡಬಹುದು. ಆದರೆ, ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮದ ಶಾಲೆಯಲ್ಲಿ, ಅದರಲ್ಲೂ ಖಾಸಗಿ ಶಾಲೆಯಲ್ಲಿ ಓದಿಸಿದರೆ ಮಾತ್ರ ಅವರಿಗೆ ಸರಿಯಾದ ಶಿಕ್ಷಣ ಸಿಗುತ್ತದೆ ಮತ್ತು ಮುಂದೆ ಉದ್ಯೋಗಾವಕಾಶಕ್ಕೆ ಅನುಕೂಲವಾಗುತ್ತದೆ ಎಂಬ ಭ್ರಮೆಯಲ್ಲಿರುವ ತಂದೆತಾಯಿಗಳ ಬುದ್ಧಿ, ಆಲೋಚನೆಗಳಿಗೆ ಕನ್ನಡದ ಬಗೆಗೆ ಮನವರಿಕೆ ಮಾಡಿಕೊಡುವುದು ಬಹಳ ದೊಡ್ಡ ಸವಾಲಾಗಿದೆ" ಎಂದು ಕಳವಳ ವ್ಯಕ್ತಪಡಿಸಿದರು.
"ಹೋಬಳಿ, ತಾಲೂಕುಗಳ ಮಟ್ಟದಲ್ಲಿ ಕೂಡ ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳನ್ನು ನಡೆಸುವ ಸಂಸ್ಥೆಗಳು ತಮ್ಮ ಶಾಲೆಗೆ ಮಕ್ಕಳನ್ನು ಕರೆತರಲು ಹಳ್ಳಿ-ಹಳ್ಳಿಗಳಿಗೂ ತಮ್ಮ ವಾಹನಗಳನ್ನು ಕಳಿಸುತ್ತಾರೆ. ಇಂಥ ಸಮಸ್ಯೆ-ಸವಾಲುಗಳ ನಡುವೆ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಖಾಸಗಿ ಉದ್ಯಮಿಗಳು, ಶ್ರೀಮಂತ ವ್ಯಾಪಾರಿಗಳು, ವಿದೇಶಗಳಲ್ಲಿರುವ ಕನ್ನಡಿಗರು ಮತ್ತು ಸ್ವಯಂ ಸೇವಾ ಸಂಸ್ಥೆಗಳು ಹೆಚ್ಚು ಹೆಚ್ಚಾಗಿ ನೆರವು ನೀಡಿ ಕೈಜೋಡಿಸಬೇಕು" ಎಂದು ಮನವಿ ಮಾಡಿದರು.
"ಗ್ರಾಮಾಂತರ ಪ್ರದೇಶದ ಶಾಲೆಗಳನ್ನು ಉನ್ನತೀಕರಿಸಲು ಅವರ ಸಹಕಾರ ಅತ್ಯಗತ್ಯ. ಸರ್ಕಾರ ಇಂಥ ಸಹಕಾರದ ಹುಡುಕಾಟಕ್ಕೆ ಹಿರಿಯರ ಸಮಿತಿಯನ್ನು ರಚಿಸುವುದು ಸೂಕ್ತ ಎಂದು ಅನ್ನಿಸುತ್ತದೆ. ಕನ್ನಡ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಬೆಳೆಸುವುದಿರಲಿ, ಸದ್ಯ ಸಂವಹನ ಭಾಷೆಯಾಗಿ ಉಳಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವಂತೆ ಹೆತ್ತವರನ್ನು ಪ್ರೇರೇಪಿಸಲು ಶಾಲೆಗಿರುವ ಬಲ-ಬೆಂಬಲಗಳೂ ಮುಖ್ಯವಾಗುತ್ತವೆ. ಶಿಕ್ಷಣ ವ್ಯವಸ್ಥೆಗೆ ಅಂತರಂಗದಷ್ಟೇ ಬಹಿರಂಗವೂ ಮುಖ್ಯವೆನ್ನಿಸುವ ಕಾಲ ಇದಲ್ಲವೇ? ಕಂಪೆನಿಗಳು, ಉದ್ಯಮಗಳು ತಮ್ಮ ಸಾಮಾಜಿಕ ಬದ್ಧತೆಯನ್ನು ಪ್ರದರ್ಶಿಸಲು, ಮಕ್ಕಳ ಶಾಲೆಗಿಂತ ಉತ್ತಮ ಅಂಗಳ ಬೇರೊಂದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ:ಕನ್ನಡ ಬೆಳೆಯುತ್ತಿದೆ, ಆದರೆ ಅದಕ್ಕೆ ತಕ್ಕಂತೆ ಬಳಕೆಯಾಗುತ್ತಿಲ್ಲ: ಗೊ.ರು.ಚನ್ನಬಸಪ್ಪ