ಕಲಬುರಗಿ: ಲೋಕಸಭೆ ಚುನಾವಣೆ ಮತ ಎಣಿಕೆ ನಡೆಯುತ್ತಿದೆ. ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಬಿಜೆಪಿ ಸಂಪೂರ್ಣವಾಗಿ ಮುದುಡಿದೆ. ಈ ಭಾಗದ ಕಲಬುರಗಿ, ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ಬೀದರ್ ಸೇರಿ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಈ ಬಾರಿ ಗೆದ್ದು ಬೀಗಿದೆ. ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
2019ರ ಚುನಾವಣೆಯಲ್ಲಿ ಈ ಐದು ಕ್ಷೇತ್ರಗಳಲ್ಲಿ ಕಲಮ ಅರಳಿತ್ತು. ತವರು ಕ್ಷೇತ್ರ ಕಲಬುರಗಿಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾಜುರ್ನ ಖರ್ಗೆ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಆದರೆ, ಈ ಬಾರಿ ಇದೇ ಕ್ಷೇತ್ರದಿಂದ ಅಳಿಯ ರಾಧಾಕೃಷ್ಣ ದೊಡ್ಡಮನಿ ಅವರನ್ನು ಖರ್ಗೆ ಕಣಕ್ಕಿಳಿಸಿದ್ದರು. ಈ ಬಾರಿ ಬಿಜೆಪಿಯ ಉಮೇಶ್ ಜಾಧವ್ಗೆ ಸೋತಿದ್ದು, ರಾಧಾಕೃಷ್ಣ ದೊಡ್ಡಮನಿ ಗೆದ್ದಿದ್ದಾರೆ. ಈ ಮೂಲಕ ಖರ್ಗೆ ಅವರು ಅಳಿಯನ ಜಯದ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.
ಇದನ್ನೂ ಓದಿ: LOK RESULT LIVE UPDATE: ಜಡ್ಜ್ಮೆಂಟ್ ಡೇ: ಅಮಿತ್ ಶಾಗೆ ದಾಖಲೆಯ 6 ಲಕ್ಷ ಲೀಡ್, ಸ್ಮೃತಿ ಇರಾನಿಗೆ ಸೋಲಿನ ಭೀತಿ - LOK SABHA ELECTION RESULTS 2024
ಬಳ್ಳಾರಿಯಲ್ಲಿ ಕಾಂಗ್ರೆಸ್: ಬಳ್ಳಾರಿಯಲ್ಲಿ ಏರ್ಪಟ್ಟ ತುರುಸಿನ ಸ್ಪರ್ಧೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಜಯಭೇರಿ ಬಾರಿಸಿದ್ದಾರೆ. ವಿಧಾನಸಭೆಯಲ್ಲಿ ಸೋತಿದ್ದ ಶ್ರೀರಾಮುಲುಗೆ ಲೋಕಸಭೆಯಲ್ಲಿ ಜಯದ ಮಾಲೆ ಸಿಕ್ಕಿಲ್ಲ. ಜನಾರ್ದನ ರೆಡ್ಡಿ ಅವರ ಬೆಂಬಲದ ಮಧ್ಯೆಯೂ ಬಿಜೆಪಿ ಈ ಬಾರಿ ಸೋತಿದೆ. ಕಳೆದ ಬಾರಿ ಇಲ್ಲಿ ಬಿಜೆಪಿಯ ದೇವೇಂದ್ರಪ್ಪ ಜಯಿಸಿದ್ದರು.
ಕೊಪ್ಪಳದಲ್ಲಿ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಂಡ ಹಿಟ್ನಾಳ್:ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಎದುರು ಬಿಜೆಪಿಯ ಹೊಸ ಮುಖ ವೈದ್ಯ ಬಸವರಾಜ ಕೆ ಶರಣಪ್ಪ ಹಿನ್ನಡೆ ಸೋತಿದ್ದಾರೆ. ಟಿಕೆಟ್ ನೀಡದಿರುವುದಕ್ಕೆ ಅಸಮಾಧಾನಗೊಂಡು ಹಾಲಿ ಸಂಸದ ಸಂಗಣ್ಣ ಕರಡಿ ಕಾಂಗ್ರೆಸ್ ಸೇರಿದ್ದರು. ಇದು ಬಿಜೆಪಿಗೆ ಹಿನ್ನಡೆಯಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇನ್ನು 2014, 2019ರಲ್ಲಿ ರಾಜಶೇಖರ್ ಹಿಟ್ನಾಳ್ ಸ್ಪರ್ಧಿಸಿ ಸೋತಿದ್ದರು. ಈ ಬಾರಿ ಗೆದ್ದು ಬೀಗಿದ್ದಾರೆ.
ರಾಯಚೂರಲ್ಲಿ ಮಾಜಿ ಐಎಎಸ್ ಅಧಿಕಾರಿಗೆ ಜೈ:ರಾಯಚೂರಲ್ಲಿ ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ್ ನಾಯಕ್ ವಿರುದ್ಧ ಕಾಂಗ್ರೆಸ್ನ ಅಭ್ಯರ್ಥಿ ಮಾಜಿ ಐಎಎಸ್ ಅಧಿಕಾರಿ ಜಿ ಕುಮಾರ್ ನಾಯಕ್ ಗೆಲುವು ಸಾಧಿಸಿದ್ದಾರೆ. ರಾಯಚೂರು ಮೂಲದವರು ಅಲ್ಲದಿದ್ದರೂ ಇದೇ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಪರಿಚಿತರಾಗಿದ್ದರು. ಈ ಬಾರಿ ಮೊದಲ ಬಾರಿ ಲೋಕ ಕಣಕ್ಕೆ ಇಳಿದು ಮೊದಲ ಪ್ರಯತ್ನದಲ್ಲೇ ಶುಭಾರಂಭ ಮಾಡಿದ್ದಾರೆ.
ಇದನ್ನೂ ಓದಿ: ELECTION RESULT LIVE UPDATE: ಎನ್ಡಿಎ ಅಭ್ಯರ್ಥಿಗಳಿಗೆ ಭರ್ಜರಿ ಮುನ್ನಡೆ, ಗೆಲುವಿನತ್ತ ಡಾ.ಮಂಜುನಾಥ್, ಕುಮಾರಸ್ವಾಮಿ - Lok Sabha Election Results live
ಬೀದರ್ನಲ್ಲಿ ಸಾಗರ್ ಖಂಡ್ರೆಗೆ ಭರ್ಜರಿ ಜಯ: ಅತೀ ಕಿರಿಯ ಅಭ್ಯರ್ಥಿಯಾಗಿರುವ ಕಾಂಗ್ರೆಸ್ನ ಸಾಗರ್ ಖಂಡ್ರೆ ಅವರು ಹಾಲಿ ಸಂಸದ ಮತ್ತು ಸಚಿವ ಭಗವಂತ್ ಖೂಬಾ ವಿರುದ್ಧ ಗೆದ್ದಿದ್ದಾರೆ. ಸಚಿವ ಈಶ್ವರ್ ಖಂಡ್ರೆ ಅವರು ಪುತ್ರನಿಗೆ ಟಿಕೆಟ್ ಕೊಡಿಸಿ ಬೀದರ್ನಲ್ಲಿ ಕಾಂಗ್ರೆಸ್ ಗೆಲ್ಲಿಸುವ ಪ್ರಯತ್ನ ಸಫಲವಾಗಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದ ಭಗವಂತ ಖೂಬಾಗೆ 26 ವರ್ಷದ ಸಾಗರ್ ಖಂಡ್ರೆ ಸೋಲಿಸಿದ್ದಾರೆ.
ಇದನ್ನೂ ಓದಿ: ಕೋಲಾರ ಲೋಕಸಭಾ ಕ್ಷೇತ್ರ: ಮಲ್ಲೇಶ್ ಬಾಬು ಗೆಲುವು - Kolar Lok Sabha Constituency