ಚಿಕ್ಕಮಗಳೂರು:ರಾಜ್ಯ ಸರ್ಕಾರದ ಅಕ್ರಮ ಒತ್ತುವರಿ ತೆರವು ಖಂಡಿಸಿ ರೈತ ಸಂಘಟನೆಗಳು ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಬಂದ್ಗೆ ಕರೆ ನೀಡಿದ್ದು, ಕಳಸ ತಾಲೂಕಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂಗಡಿ - ಮುಂಗಟ್ಟುಗಳನ್ನು ಮುಚ್ಚಿ ವರ್ತಕರು ಬಂದ್ಗೆ ಬೆಂಬಲ ಸೂಚಿಸಿದ್ದು, ರೈತರ ಹೋರಾಟಕ್ಕೆ ಸರ್ವ ಪಕ್ಷಗಳು ಸಾಥ್ ನೀಡಿವೆ. ಕನ್ನಡ, ದಲಿತ ಸಂಘಟನೆ ಸೇರಿ ಬಹುತೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.
ಅಕ್ರಮ ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆ (ETV Bharat) ಕಳಸ ತಾಲೂಕು ಒತ್ತುವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಾಫಿ ಬೆಳಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬದುಕಿಗಾಗಿ ಮಾಡಿರುವ 2-3 ಎಕರೆ ಒತ್ತುವರಿಯೇ ಹೆಚ್ಚಾಗಿದೆ. ಒತ್ತುವರಿ ತೆರವು ಮಾಡಿದರೆ ಸಾವಿರಾರು ಕುಟುಂಬಗಳು ಬೀದಿಗೆ ಬರಲಿವೆ. ಕೂಡಲೇ ಅಕ್ರಮ ಒತ್ತುವರಿ ತೆರವು ಕೈಬಿಡಬೇಕು" ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕಳಸ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಮಾಡಲಾಗುತ್ತಿದ್ದು, ತಾಲೂಕಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೈಕೋರ್ಟ್ ಚೀಫ್ ಜಸ್ಟೀಸ್ ಭೇಟಿ ನೀಡಿದ್ದು, ಪ್ರತಿಭಟನಾ ಮಾರ್ಗದಲ್ಲಿ ನ್ಯಾಯಮೂರ್ತಿಗಳು ಸಾಗುವ ವೇಳೆ, "ನಮ್ಮ ನೋವು ನ್ಯಾಯಮೂರ್ತಿಗಳಿಗೂ ಗೊತ್ತಾಗಲಿ" ಎಂದು ಹೋರಾಟಗಾರರು ಘೋಷಣೆ ಕೂಗಿದರು.
ಹೋಂ ಸ್ಟೇ, ರೆಸಾರ್ಟ್ಗಳಿಗೆ ನೋಟಿಸ್:ಕೇರಳದ ವಯನಾಡು ಗುಡ್ಡ ಕುಸಿತ ಪ್ರಕರಣದ ಸಂಬಂಧ ಮಲೆನಾಡು ಭಾಗದಲ್ಲಿ ಅಕ್ರಮ ರೆಸಾರ್ಟ್ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಆದೇಶಿಸಿದ್ದರು. ಅರಣ್ಯ ಸಚಿವರ ಆದೇಶದ ಬೆನ್ನಲ್ಲೇ ಚಿಕ್ಕಮಗಳೂರು ಅರಣ್ಯ ಇಲಾಖೆ, ಜಿಲ್ಲೆಯ ಮಲೆನಾಡು ಭಾಗದ 40ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ದಾಖಲೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿದೆ. ಚಿಕ್ಕಮಗಳೂರು, ಮೂಡಿಗೆರೆ, ಮುತ್ತೋಡಿ, ಮುಳ್ಳಯ್ಯನಗಿರಿ ಭಾಗದ ಹೋಂ ಸ್ಟೇಗಳಿಗೆ ನೋಟಿಸ್ ನೀಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧಿಕೃತವಾಗಿ 650ಕ್ಕೂ ಹೆಚ್ಚು ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿವೆ. ಆದರೆ, ಸರ್ಕಾರದ ಅನುಮತಿ ಪಡೆಯದಂತಹ 800ಕ್ಕೂ ಅಧಿಕ ಅನಧಿಕೃತ ಹೋಂ ಸ್ಟೇಗಳಿವೆ. ಅವುಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಗುಡ್ಡಗಾಡು ಪ್ರದೇಶದಂತಹ ಎತ್ತರದ ಪ್ರದೇಶ ಹಾಗೂ ಗುಡ್ಡದ ತಪ್ಪಲಿನಲ್ಲೇ ಹೆಚ್ಚಾಗಿ ಹೋಂ ಸ್ಟೇ ಹಾಗೂ ರೆಸಾರ್ಟ್ಗಳನ್ನು ನಿರ್ಮಿಸಲಾಗಿದೆ. ವಯನಾಡು ದುರಂತದ ಬಳಿಕ ಮುಂಜಾಗ್ರತಾ ಕ್ರಮವಾಗಿ ಸಚಿವರ ಆದೇಶದನ್ವಯ ಆರಂಭಿಕವಾಗಿ ಜಿಲ್ಲೆಯಲ್ಲಿರುವ 40 ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ದಾಖಲೆ ಸಲ್ಲಿಸುವಂತೆ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಇರುವಂತಹ ಎಲ್ಲ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ್ಗಳಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಎಫ್.ಆರ್.ಎ. ಅರ್ಜಿ ಬಾಕಿ ಇದ್ದರೆ, ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ತೆರವಿಲ್ಲ; ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ - Clearance of encroachment