ಕರ್ನಾಟಕ

karnataka

ETV Bharat / state

ಸ್ವಗ್ರಾಮದಲ್ಲೇ ಕಳ್ಳತನಕ್ಕಿಳಿದ್ದ 6 ಖದೀಮರ ಸೆರೆ; 10 ಬೈಕ್​, 2 ಟ್ರ್ಯಾಕ್ಟರ್ ಸೇರಿ 14 ಲಕ್ಷ ಮೌಲ್ಯದ ಸ್ವತ್ತು ಜಪ್ತಿ - Vehicle Thieves Arrested - VEHICLE THIEVES ARRESTED

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿ ವಾಹನಗಳ ಕಳ್ಳತನ ಮಾಡುತ್ತಿದ್ದ ಆರು ಜನ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಳ್ಳತನ ಆರೋಪಿಗಳನ್ನು ಬಂಧಿಸಿ, ವಾಹನಗಳನ್ನು ಪೊಲೀಸರು ಜಪ್ತಿ ಮಾಡಿರುವುದು.
ಕಳ್ಳತನ ಆರೋಪಿಗಳನ್ನು ಬಂಧಿಸಿ, ವಾಹನಗಳನ್ನು ಪೊಲೀಸರು ಜಪ್ತಿ ಮಾಡಿರುವುದು. (ETV Bharat)

By ETV Bharat Karnataka Team

Published : Jul 13, 2024, 10:10 PM IST

ಕಳ್ಳತನವಾಗಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿರುವುದು. (ETV Bharat)

ಕಲಬುರಗಿ:ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಭೂಸನೂರ ಗ್ರಾಮದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್​ಗಳನ್ನು ಕದ್ದು ತಲೆಮರೆಸಿಕೊಳ್ಳುತ್ತಿದ್ದ ಸ್ವಗ್ರಾಮದವರೆಯಾದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭೂಸನೂರ ಗ್ರಾಮದ ಪೃಥ್ವಿ ಅಲಿಯಾಸ್ ಪೃಥ್ವಿರಾಜ ಬೀಳಗಿ, ಮಹಿಬೂಬ ಬಾಗವಾನ, ರಾಹುಲ್ ಕ್ಷೇತ್ರಿ, ಮುನ್ನಾ ಅಲಿಯಾಸ್ ಮಹ್ಮದ ರಫಿ ಬಾಗವಾನ, ಕರೀಮ ಬಾಗವಾನ ಹಾಗೂ ಅಮೀನ್​ ಬಾಗವಾನ ಎಂಬುವರೇ ಬಂಧಿತ ಆರೋಪಿಗಳು. ಇವರೆಲ್ಲರೂ 19 ರಿಂದ 27 ವರ್ಷದೊಳಗಿನ ಖದೀಮರಾಗಿದ್ದು, 10 ಬೈಕ್​, 2 ಟ್ರ್ಯಾಕ್ಟರ್, 3 ಟ್ರ್ಯಾಕ್ಟರ್ ಟ್ರೈಲಿ ಸೇರಿದಂತೆ ಒಟ್ಟು ಅಂದಾಜು 14 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದೆರಡು ತಿಂಗಳಲ್ಲಿ ಆರೋಪಿಗಳು ತಮ್ಮ ಸ್ವಗ್ರಾಮವಾದ ಭೂಸನೂರನಲ್ಲಿಯೇ ಬೈಕ್ ಹಾಗೂ ಟ್ರ್ಯಾಕ್ಟರ್ ಕದ್ದು ಸ್ಥಳೀಯರಿಗೆ ತೆಲೆ ನೋವಾಗಿ ಕಾಡಲಾರಂಭಿಸಿದ್ದರು. ಜಪ್ತಿ ಮಾಡಿದ ಟ್ರ್ಯಾಕ್ಟರ್ ಹಾಗೂ ಟ್ರ್ಯಾಲಿಗಳು ಮತ್ತು 10 ಬೈಕ್​ಗಳಲ್ಲಿ 1 ಬೈಕ್ ಭೂಸನೂರ ಗ್ರಾಮದವರದ್ದಾಗಿದೆ. ಇನ್ನೂಳಿದ 9 ಬೈಕ್​ಗಳ ವಾರಸುದಾರರನ್ನು ಪತ್ತೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಭೂಸನೂರ ಗ್ರಾಮದಲ್ಲಿ ಹಲವು ವಾಹನಗಳ ಕಳವು ಪ್ರಕರಣಗಳು ದಾಖಲಾಗಿದ್ದವು. ಆದ್ದರಿಂದ ಎಸ್ಪಿ ಆಡ್ಡೂರು ಶ್ರೀನಿವಾಸಲು, ಎಎಸ್ಪಿ ಶ್ರೀನಿಧಿ, ಆಳಂದ ಉಪವಿಭಾಗದ ಡಿಎಸ್ಪಿ ಗೋಪಿ ಆರ್, ಸಿಪಿಐ ಪ್ರಕಾಶ ಯಾತನೂರ ಮಾರ್ಗದರ್ಶನದಲ್ಲಿ ನಿಂಬರ್ಗಾ ಠಾಣೆ ಪಿಎಸ್ಐ ವಾತ್ಸಲ್ಯ, ತನಿಖಾ ವಿಭಾಗದ ಪಿಎಸ್ಐ ಬಸವರಾಜ ಸಣಮನಿ, ಎಎಸ್ಐ ಸಂಜೀವರೆಡ್ಡಿ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಖತರ್ನಾಕ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಬಾವಿಯಲ್ಲಿ ಬೈಕ್​ ಪತ್ತೆ:ಆರೋಪಿಗಳು ಜಾತ್ರೆಗೆ ಹೋಗಲೆಂದು ಬೈಕ್ ಕಳವು ಮಾಡಿದ್ದರು ಅನ್ನೋ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪಕ್ಕದ ಗ್ರಾಮದಲ್ಲಿ ದರ್ಗಾ ಜಾತ್ರೆಗೆ ಹೋಗಲು ಭೂಸನೂರ ಗ್ರಾಮದಲ್ಲಿ ಬೈಕ್ ಕಳವು ಮಾಡಿದ್ದ ಆರೋಪಿಗಳು, ಅದೇ ಬೈಕ್​ನಲ್ಲಿ ವಾಪಸ್ ಭೂಸನೂರ ಗ್ರಾಮಕ್ಕೆ ಬರುವಾಗ ಹೊರವಲಯದಲ್ಲಿರುವ ಜಮೀನಿನಲ್ಲಿನ ಬಾವಿಗೆ ಎಸೆದಿದ್ದರು. ವಿಚಾರಣೆ ವೇಳೆ ಆರೋಪಿಗಳು, ಈ ಬೈಕ್ ಬಿಸಾಡಿರುವುದಾಗಿ ಬಾಯ್ಬಿಟ್ಟಿದ್ದರು. ಅಂತೆಯೇ, ಕ್ರೇನ್ ಸಹಾಯದಿಂದ ಪೊಲೀಸರು ಬೈಕ್ ಹೊರಗೆ ತೆಗೆದಿದ್ದಾರೆ. ಗ್ರಾಮದಲ್ಲಿ ಯಾರಾದರೂ ಎದುರು ಹಾಕಿಕೊಂಡರೆ ಅಥವಾ ಹೊಸ ವಾಹನಗಳು ಕಂಡರೆ ಆರೋಪಿಗಳು ಅವುಗಳನ್ನು ಕಳವು ಮಾಡುತ್ತಿದ್ದರು. ಕದ್ದ ವಾಹನ ಕಡಿಮೆ ಬೆಲೆಗೆ ಮಾರಾಟ ಮಾಡುವುದು, ಇಲ್ಲವೆ ಎಲ್ಲಾದ್ರೂ ದೂರ ಬಿಟ್ಟು ಬರುವುದು ಮಾಡುತ್ತಿದ್ದರು ಎಂದೂ ತಿಳಿದು ಬಂದಿದೆ.

ಇದನ್ನೂ ಓದಿ:ಬೈಕ್​ ಕೊಡಿಸದ ಕಾರಣಕ್ಕೆ ಮಗ ಆತ್ಮಹತ್ಯೆ: ನೊಂದು ತಾಯಿಯೂ ಸಾವಿಗೆ ಶರಣು

ABOUT THE AUTHOR

...view details