ಕರ್ನಾಟಕ

karnataka

ETV Bharat / state

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ

ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ ನೀಡಲಾಗಿದೆ. ನಾಟಿ, ಫಾರಂ, ಬಾದಾಮಿ ಸೇರಿದಂತೆ ವಿವಿಧ ಬಗೆಯ ಕಡಲೆಕಾಯಿಗಳನ್ನು ಮಾರಾಟ ಮಾಡಲಾಗುತ್ತಿದೆ.

kadalekai parishe
ಕಡಲೆಕಾಯಿ ಪರಿಷೆಗೆ ಚಾಲನೆ (ETV Bharat)

By ETV Bharat Karnataka Team

Published : 4 hours ago

ಬೆಂಗಳೂರು:ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ ಆರಂಭಗೊಂಡಿದೆ. ದೊಡ್ಡ ಗಣಪತಿ, ಬಸವಣ್ಣ ದೇಗುಲದಲ್ಲಿ ಸೋಮವಾರ ಪೂಜೆ ಸಲ್ಲಿಸುವ ಮೂಲಕ ಕಡಲೆಕಾಯಿ ಪರಿಷೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಎರಡು ದಿನಗಳ ಕಾಲ ಬಸವನಗುಡಿಯ ಕಡಲೆಕಾಯಿ ಪರಿಷೆ ನಡೆಯುತ್ತದೆ. ಅದೇ ಮಾದರಿಯಲ್ಲಿ, ಚಾಲನೆ ಸಿಕ್ಕ ಮೊದಲ ದಿನವಾದ ಇಂದು ಸಾವಿರಾರು ಭಕ್ತರು ಹರಿದು ಬರುತ್ತಿದ್ದಾರೆ. ಬೆಂಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ಹಾಗೂ ಅನ್ಯ ರಾಜ್ಯಗಳಿಂದ ಬಂದಿರುವ ವ್ಯಾಪಾರಿಗಳು ರಸ್ತೆಬದಿ ತಳ್ಳುವ ಗಾಡಿ, ಮಳಿಗೆಗಳಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಿದ್ದಾರೆ.

ಕಡಲೆಕಾಯಿ ಪರಿಷೆಗೆ ಚಾಲನೆ (ETV Bharat)

ಈ ಬಾರಿಯ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ ಸೇರಿ ನೆರೆಯ ರಾಜ್ಯಗಳಿಂದ ರೈತರು ಬಂದಿದ್ದಾರೆ. ನಾಟಿ, ಫಾರಂ, ಬಾದಾಮಿ ಸೇರಿದಂತೆ ವಿವಿಧ ಬಗೆಯ ಕಡಲೆಕಾಯಿಗಳನ್ನು ಮಾರಾಟ ಮಾಡುತ್ತಿದ್ದು, ಪರಿಷೆಯ ಪ್ರಮುಖ ಆಕರ್ಷಣೆಯಾಗಿದೆ.

ದೊಡ್ಡ ಗಣಪತಿ ದೇಗುಲದಲ್ಲಿ ಪೂಜೆ (ETV Bharat)

ಹಸಿ ಹಾಗೂ ಹುರಿದ ಕಡಲೆಕಾಯಿಗೆ ಸೇರಿಗೆ 60ರಿಂದ 80 ರೂ. ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಕಡಲೆಕಾಯಿ ಮಾತ್ರವಲ್ಲದೇ, ಹಲವು ಬಗೆಯ ಚಾಟ್ಸ್‌, ಮುಸುಕಿನ ಜೋಳ, ಕರಿದ ತಿಂಡಿ ತಿನಿಸು, ಮಕ್ಕಳ ಆಟಿಕೆಗಳು, ಮನೆಗಳಿಗೆ ಬಳಸುವ ಅಲಂಕಾರಿಕ ವಸ್ತುಗಳು, ಬಗೆ ಬಗೆಯ ಸರ, ಬಟ್ಟೆಬರೆ, ಗೃಹೋಪಯೋಗಿ ವಸ್ತುಗಳು, ಬೊಂಬೆಗಳು ಹೀಗೆ ವಿವಿಧ ರೀತಿಯ ಮಳಿಗೆಗಳು ಜನರನ್ನು ಕೈಬೀಸಿ ಕರೆಯುತ್ತಿವೆ.

ಕುಡಿಯುವ ನೀರಿನ ವ್ಯವಸ್ಥೆ:ಬಸವನಗುಡಿ ದೊಡ್ಡಗಣಪತಿ ಮತ್ತು ಬಸವಣ್ಣ ದೇಗುಲಗಳಲ್ಲಿ ಒಳ ಮತ್ತು ಹೊರಭಾಗದಲ್ಲಿ ಐದು ದಿನಗಳ ಕಾಲ ದೀಪಾಲಂಕಾರ ಮಾಡಲಾಗಿದೆ. ಈ ಬಾರಿ ರಾಮಕೃಷ್ಣ ಆಶ್ರಮ ವೃತ್ತ ಹಾಗೂ ಸುತ್ತುಮುತ್ತಲಿನ ರಸ್ತೆಗಳೆಲ್ಲ ದೀಪಾಲಂಕಾರವಿದೆ. ಪರಿಷೆಗೆ ಆಗಮಿಸುತ್ತಿರುವ ಭಕ್ತರಿಗೆ ಕುಡಿಯುವ ನೀರಿನ ಅನುಕೂಲಕ್ಕಾಗಿ ಹೆಚ್ಚುವರಿ 2 ಟ್ಯಾಂಕರ್​​ಗಳ ವ್ಯವಸ್ಥೆ ಮಾಡಲಾಗಿದೆ. ಇವುಗಳನ್ನು ಪಕ್ಕದ ಧರ್ಮಸ್ಥಳ ಮಂಜುನಾಥ ಕಲ್ಯಾಣ ಮಂಟಪದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿದೆ.

ಕಡಲೆಕಾಯಿ ಪರಿಷೆಗೆ ಚಾಲನೆ (ETV Bharat)

ಪ್ಲಾಸ್ಟಿಕ್ ನಿಷೇಧ:ಕಡಲೆಕಾಯಿ ಪರಿಷೆಯಲ್ಲಿ ಈ ಬಾರಿಯೂ ಬಿಬಿಎಂಪಿ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಪ್ಲಾಸ್ಟಿಕ್ ವಿರುದ್ಧ ಜನ ಜಾಗೃತಿ ಕಾರ್ಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಡಲೆಕಾಯಿ ವ್ಯಾಪಾರಿಗಳಿಗೂ ಸಹ ಮುಜರಾಯಿ ಇಲಾಖೆ ವತಿಯಿಂದ ಪೇಪರ್ ಕವರ್‌ಗಳನ್ನು ವಿತರಿಸಲಾಗಿದೆ. ಪರಿಷೆಗೆ ಬರುವವರು ಬಟ್ಟೆಯ ಬ್ಯಾಗ್ ಹಾಗೂ ಕೈ ಜೀಲ ತರುವಂತೆ ಕೂಡ ಮನವಿ ಮಾಡಲಾಗುತ್ತಿದೆ.

''ಪ್ರಖ್ಯಾತ ಬಸವಗುಡಿಯ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ ನೀಡಲಾಗಿದೆ. ಬಸವನಗುಡಿಯ ಕಡಲೆಕಾಯಿ ಪರಿಷೆಯ ಇತಿಹಾಸವು ಆಸಕ್ತಿಕರ ಕಥೆಗಳೊಂದಿಗೆ ಬೆಸೆದುಕೊಂಡಿದೆ'' ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.

ಇದನ್ನೂ ಓದಿ:ಚಾಮರಾಜನಗರ: ಏಲಕ್ಕಿ ಬಾಳೆ ದರ ದಿಢೀರ್​ ಕುಸಿತ, ಬೆಳೆಗಾರರು ಕಂಗಾಲು

ABOUT THE AUTHOR

...view details