ಬೆಂಗಳೂರು:ದಿವಂಗತ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಂ ಅವರ ಪತ್ನಿ ವಾಣಿ ಶಿವರಾಂ ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ಬರಮಾಡಿಕೊಂಡರು.
ಇವರ ಜತೆಗೆ ರಾಜರಾಜೇಶ್ವರಿ ನಗರ ಕ್ಷೇತ್ರದ ಮಾಜಿ ಕಾರ್ಪೊರೇಟರ್ ರೂಪಾ ಲಿಂಗೇಶ್, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ.ರವಿಚಂದ್ರ, ಮಡಿವಾಳ ಸಮಾಜದ ಪ್ರಮುಖ ಮುಖಂಡರಾದ ಗೋಪಿಕೃಷ್ಣ, ಸರ್ವಜ್ಞನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮೊಹಮದ್ ಮುಸ್ತಾಫ ಹಾಗೂ ನೂರಾರು ಕಾರ್ಯಕರ್ತರು, ಆನೇಕಲ್‌ನಿಂದ ಬಿಜೆಪಿ ನಾಯಕರಾದ ಮಂಜು, ವಿಜಯ್ ಕುಮಾರ್, ಚಾಮರಾಜನಗರದ ಛಲವಾದಿ ಮಹಾಸಭಾದ ಉಪಾಧ್ಯಕ್ಷರಾದ ಬಸವರಾಜ್, ಬಿಡದಿಯಲ್ಲಿ ಜೆಡಿಎಸ್ ಪಕ್ಷದಿಂದ ಕೃಷ್ಣಪ್ಪ, ಹೆಚ್.ಡಿ.ಕೋಟೆಯಿಂದ ಪರಮಶಿವಮೂರ್ತಿ, ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಶಿವಕುಮಾರ್, ರೈತಸಂಘದಿಂದ ವೀರಭದ್ರಸ್ವಾಮಿ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎಸ್.ಪ್ರಕಾಶ್ ಕೈ ಪಕ್ಷ ಸೇರಿದರು.
ಡಿಕೆಶಿ ಭೇಟಿಯಾದ ಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ:ಮತ್ತೊಂದೆಡೆ, ಮಾಜಿ ಸಚಿವಸಿ.ಪಿ.ಯೋಗೇಶ್ವರ್ ಪುತ್ರಿ ನಿಶಾ ಯೋಗೇಶ್ವರ್ ಇಂದು ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿತು. ನಿಶಾ ಯೋಗೇಶ್ವರ್ ಈಗಾಗಲೇ ಕಾಂಗ್ರೆಸ್ ಸೇರಲು ಒಲವು ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಡಿಕೆಶಿ ಜತೆ ಮಾತುಕತೆ ನಡೆಸಿದ್ದರು. ಆದರೆ ತಂದೆ, ಮಗಳನ್ನು ಬೇರೆ ಮಾಡಿದ ಎಂಬ ಮಾತು ಬರಬಾರದು ಎಂಬ ಕಾರಣಕ್ಕೆ ಡಿಕೆಶಿ ಪಕ್ಷ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂದು ದಿಢೀರ್ ಕೆಪಿಸಿಸಿ ಕಚೇರಿಗೆ ಆಗಮಿಸಿದ ನಿಶಾ, ಡಿಕೆಶಿ ಜತೆ ಚರ್ಚೆ ನಡೆಸಿದರು.