ಶಿವಮೊಗ್ಗ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿರುವ ಜನವರಿ 22ರಂದು ರಾಜ್ಯ ಸರ್ಕಾರಿ ರಜೆ ಘೋಷಿಸಬೇಕೆಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 500 ವರ್ಷಗಳ ಗುಲಾಮಗಿರಿ ಮುಕ್ತ ಮಾಡಿ ರಾಮಮಂದಿರ ನಿರ್ಮಾಣ ಮಾಡುತ್ತಿದ್ದಾರೆ. ನಾಡಿದ್ದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತಿರುವುದು ಪ್ರಪಂಚದ ಹಿಂದೂಗಳಿಗೆ ಆನಂದವನ್ನು ತಂದಿದೆ. ಗಾಂಧೀಜಿ ಸಹ ರಾಮರಾಜ್ಯದ ಕನಸನ್ನು ಕಾಣುತ್ತಿದ್ದರು. ರಾಮಮಂದಿರ ಉದ್ಘಾಟನೆಯಾಗುತ್ತಿರುವ 22 ರಂದು ರಾಜ್ಯದಲ್ಲಿ ಸರ್ಕಾರಿ ರಜೆಯನ್ನು ಘೋಷಿಸಬೇಕೆಂದು ಸಿಎಂಗೆ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರಪಂಚದ ಕ್ರಿಶ್ಚಿಯನ್ ಹಾಗೂ ಮುಸ್ಲಿಮರು ಸಹ ಅಯೋಧ್ಯೆಗೆ ಹೋಗುತ್ತಿದ್ದಾರೆ. ಎಐಸಿಸಿ ಅವರು ಮೊದಲು ಅಯೋಧ್ಯೆಗೆ ಹೋಗುವುದು ಬೇಡ ಎಂದರು. ನಂತರ ಇಷ್ಟ ಇದ್ದವರು ಹೋಗಬಹುದು ಎಂದರು. ಅನಂತರ 22 ರ ನಂತರ ಹೋಗುತ್ತೇವೆ ಎಂದವರು, ಈಗ ನಾವು ಹೋಗುತ್ತಿಲ್ಲ ಎಂದರು. ರಾಮ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ಒಂದುಗೂಡಿಸಿದ್ದಾರೆ. ಇದರಿಂದ ಮಹಾತ್ಮ ಗಾಂಧೀಜಿ ಅವರ ಸಮಾಧಿಯಲ್ಲಿ ಹೇ ರಾಮ್ ಎಂದು ಬರೆಯಿಸಲಾಗಿದೆ ಎಂದು ತಿಳಿಸಿದರು.
ಇನ್ನೆರಡು ದಿನ ಯಾರೂ ರಾಜಕೀಯ ಟೀಕೆ ಮಾಡಬೇಡಿ:ಇನ್ನೆರಡು ದಿನ ಯಾರೂ ಸಹ ರಾಜಕೀಯ ಟೀಕೆ ಮಾಡದೇ ಕೇವಲ ರಾಮನಾಮ ಜಪ ಮಾಡಿ ಎಂದು ಈಶ್ವರಪ್ಪ ಮನವಿ ಮಾಡಿದ್ದಾರೆ. ಹಿಂದೂಸ್ಥಾನವನ್ನು ಎರಡು ಮಾಡಿದ್ದು ರಾಹುಲ್ ಗಾಂಧಿ ಅವರ ಪೂರ್ವಜರು. ಈಗ ಭಾರತ ಜೋಡೊ ಎಂದು ಬಾಯಿಯಲ್ಲಿ ಹೇಳುತ್ತಿದ್ದಾರೆ. ಆದರೆ, ಅವರ ಮನಸ್ಸಿನಲ್ಲಿ ಭಾರತ ತೋಡೋ ಅಂತ ಇದೆ ಎಂದರು.