ಶಿವಮೊಗ್ಗ:ತಮ್ಮನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಅಭಿನಂದನೆಗಳು ಎಂದು ಕೆ.ಎಸ್.ಈಶ್ವರಪ್ಪ ಟಾಂಗ್ ಕೊಟ್ಟಿದ್ದಾರೆ. ಇಂದು ತಮ್ಮ ಚುನಾವಣಾ ಕಾರ್ಯಾಲಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಶ್ವರಪ್ಪ ಚುನಾವಣೆಗೆ ನಿಲ್ಲುತ್ತಾರೋ, ಇಲ್ಲವೋ ಎಂದು ಬಹಳಷ್ಟು ಜನರಲ್ಲಿ ಗೊಂದಲವಿತ್ತು. ಎಲ್ಲಾ ಗೊಂದಲಕ್ಕೂ ಈಗ ಉತ್ತರ ಸಿಕ್ಕಿದೆ. ಈ ಬಗ್ಗೆ ಯಡಿಯೂರಪ್ಪ, ವಿಜಯೇಂದ್ರ ಹಾಗೂ ರಾಘವೇಂದ್ರ ಗೊಂದಲ ಮೂಡಿಸುತ್ತಿದ್ದರು. ಅದಕ್ಕೂ ಉತ್ತರ ಸಿಕ್ಕಿದೆ. ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದರು. ಇವರು ಅವರ ಕಾಲು ಹಿಡಿದು ಮತ್ತೆ ಬಿಜೆಪಿಗೆ ಕರೆ ತಂದಿದ್ದಾರೆ. ಸದ್ಯ ತಾತ್ಕಾಲಿಕವಾಗಿ ನಾನು ಪಕ್ಷದಿಂದ ಹೊರಗಿದ್ದೇನೆ ಎಂದರು.
ನಾನು ಮತ್ತೆ ಬಿಜೆಪಿಗೆ ಸೇರುವವನೇ: ಒಬ್ಬ ಎಳಸು ರಾಜ್ಯಾಧ್ಯಕ್ಷ ನನ್ನನ್ನು ಸಸ್ಪೆಂಡ್ ಮಾಡಿದ್ದಾರೆ. ಬಿಜೆಪಿ ಬಗ್ಗೆ ಏನೂ ಗೊತ್ತಿಲ್ಲದೇ ಇರುವ ಒಬ್ಬ ವ್ಯಕ್ತಿ ನನ್ನನ್ನು ಬಿಜೆಪಿಯಿಂದ ಹೊರ ಹಾಕಿದ್ದಾರೆ. ಈ ರೀತಿ ಹಲವಾರು ಜನರು ನನಗೆ ಫೋನ್ ಮಾಡಿ ಹೇಳುತ್ತಿದ್ದಾರೆ. ಇದು ತಾತ್ಕಾಲಿಕ ಬೆಳವಣಿಗೆಯಷ್ಟೇ. ನಾನು ಮತ್ತೆ ಬಿಜೆಪಿಗೆ ಸೇರುವವನೇ, ಇದನ್ನು ತಡೆಯಲು ಯಾರಿದಲೂ ಸಾಧ್ಯವಿಲ್ಲ ಎಂದು ಹೇಳಿದರು.