ಕೆ.ಎಸ್.ಈಶ್ವರಪ್ಪ (ETV Bharat) ಬೆಂಗಳೂರು: ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರು ಸಂಸದ ಬಿ.ವೈ ರಾಘವೇಂದ್ರ ವಿರುದ್ಧ ದೂರು ನೀಡಿದರು. ಜೊತೆಗೆ ಅವರು, ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಿರುದ್ಧ ಕೆಲವು ದಾಖಲಾತಿಗಳನ್ನು ಪೆನ್‌ಡ್ರೈವ್ ಮೂಲಕ ಚುನಾವಣಾ ಆಯೋಗಕ್ಕೆ ಸಲ್ಲಿಸಿದರು.
ಬಳಿಕ ಮುಖ್ಯ ಚುನಾವಣಾಧಿಕಾರಿ ಕಚೇರಿ ಬಳಿ ಮಾತನಾಡಿದ ಅವರು, ಚುನಾವಣೆ ಸೋಲುವ ಭೀತಿಯಿಂದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ಕೆಲವು ನಕಲಿ ಫೋಟೋ ಬಿಡುಗಡೆ ಮಾಡಿದ್ದಾರೆ. ನನ್ನದು, ಮೋದಿಯವರದ್ದು ಫೋಟೋ ಹಾಕಿ ಸುಳ್ಳು ಪ್ರಚಾರ ಮಾಡಿದ್ದಾರೆ. ನಾನು ಸುದ್ದಿಗೋಷ್ಠಿ ಮಾಡುವ ರೀತಿ ನಕಲಿ ಫೋಟೋ ಹಂಚಿ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ಚುನಾವಣೆಯಲ್ಲಿ ಸಂಪೂರ್ಣ ಮೋಸ, ಅಪಪ್ರಚಾರ ಮಾಡಿದ್ದಾರೆ. ಸೋಲಿನ ಭೀತಿಯಲ್ಲಿ ರಾಘವೇಂದ್ರ ಇದೆಲ್ಲ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗಾಗಲೇ ಶಿವಮೊಗ್ಗ ಚುನಾವಣಾ ಅಧಿಕಾರಿಗಳಿಗೂ ದೂರು ಕೊಟ್ಟಿದ್ದೇನೆ. ರಾಘವೇಂದ್ರ ವಿರುದ್ಧ ಕ್ರಮ ಕೈಗೊಳ್ಳಿ ಅಂತ ದೂರು ನೀಡಿದ್ದೇನೆ. ಅಪ್ಪ ಮಕ್ಕಳ ಹಿಡಿತದಿಂದ ಪಕ್ಷ ಹೊರಗೆ ತರಬೇಕು ಅನ್ನೋದು ನನ್ನ ಉದ್ದೇಶ. ಇವರ ರೀತಿ ನಾನು ಷಡ್ಯಂತ್ರ ಮಾಡಲಿಲ್ಲ. ಜಿಲ್ಲಾ ಪೊಲೀಸರಿಗೂ ದೂರುಕೊಟ್ಟಿದ್ದೆ, ಅವರು ರಾಘವೇಂದ್ರ ಹೆಸರು ಉಲ್ಲೇಖಿಸದೇ ಅನಾಮಿಕ ಅಂತ ದೂರು ದಾಖಲಿಸಿದ್ದಾರೆ. ಇದು ನನಗೆ ಸಮಾಧಾನ ಆಗಿಲ್ಲ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇನೆ. ರಾಘವೇಂದ್ರ ಷಡ್ಯಂತ್ರದ, ಮೋಸದ ಮೂಲಕ ನನ್ನ ವಿರುದ್ಧ ಅಪಪ್ರಚಾರ ಮಾಡಿದ್ದಾರೆ. ಕೂಡಲೇ ರಾಘವೇಂದ್ರ ಅವರನ್ನು ಬಂಧಿಸಬೇಕು. ನನ್ನ ಹಳೆಯ ಫೋಟೋ ತಗೊಂಡು ಹೊಸದಾಗಿ ಸುಳ್ಳು ಸುದ್ದಿ ಸೃಷ್ಟಿಸಿ ಹಬ್ಬಿಸಿದ್ದಾರೆ ಎಂದು ದೂರಿದರು.
ಬಿಜೆಪಿ ನನ್ನ ತಾಯಿ ಇದ್ದಂತೆ, ಸಾಯೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ: ಮತ್ತೆ ಬಿಜೆಪಿ ಸೇರಿಸುವ ಬಗ್ಗೆ ಪ್ರತಿಕ್ರಿಯಿಸಿ, ನಾನು ಸಾಯುವ ತನಕವೂ ಬಿಜೆಪಿಗನೇ. ನಾನು ಸಾಯೋವರೆಗೂ ಬಿಜೆಪಿಯಲ್ಲೇ ಇರೋದು. ಇವರು ನನ್ನ ತಾತ್ಕಾಲಿಕವಾಗಿ ಹೊರಗೆ ಹಾಕಿರಬಹುದು. ಅವರ ಉಚ್ಛಾಟನೆಯನ್ನು ನಾನು ತಲೆಯಲ್ಲೇ ಇಟ್ಕೊಂಡಿಲ್ಲ. ಬಿಜೆಪಿ ನನ್ನ ತಾಯಿ ಇದ್ದಂತೆ, ಸಾಯೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ ಎಂದರು.
ಜಗದೀಶ್ ಶೆಟ್ಟರ್ಗೆ ಆರು ವರ್ಷ ಉಚ್ಛಾಟನೆ ಮಾಡಿದ್ದರು. ಆ ಉಚ್ಛಾಟನೆ ಪದಕ್ಕೆ ಬೆಲೆ ಇದೆಯಾ?. ಮತ್ತೆ ಅವರ ಮನೆಗೆ ಯಡಿಯೂರಪ್ಪ ಹೋಗಿ ಶೆಟ್ಟರ್ ಕಾಲು ಹಿಡಿದು ಕರೆತಂದ್ರು. ಅವರ ಉಚ್ಛಾಟನೆಗೆ ಬೆಲೆ ಎಲ್ಲಿ ಬಂತು?. ನಾನು ಅವರ ಉಚ್ಛಾಟನೆ ತಲೆಯಲ್ಲಿ ಇಟ್ಕೊಂಡಿಲ್ಲ. ನಾನು ಚುನಾವಣೆಯಲ್ಲಿ ಗೆಲ್ತೇನೆ, ಮೋದಿಯವರನ್ನು ಹೋಗಿ ಭೇಟಿ ಮಾಡ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ನವರಿಂದಲೇ ಅಸ್ಥಿರ ಆಗಲಿದೆ:ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಏಕನಾಥ ಶಿಂಧೆ ಹಾಗೆ ಹೇಳಿದ್ದಾರೆ ಎಂದರೆ ಅದಕ್ಕೆ ಸಿಎಂ, ಡಿಸಿಎಂ ಉತ್ತರ ಕೊಡಬೇಕು. ನಾವು ಗಟ್ಟಿ ಇದ್ದೇವೋ ಇಲ್ಲವೋ, ಟೊಳ್ಳು ಇದ್ದೇವಾ?. ಯಾರ ವಿರುದ್ಧ ಯಾರು ಇದ್ದಾರೆ? ಎಂಬುದನ್ನು ಹೇಳಬೇಕು. ಸಿದ್ದರಾಮಯ್ಯ ಮತ್ತು ಡಿಕೆಶಿ ಜಾತಿ ರಾಜಕಾರಣ ಮಾಡ್ತಿದ್ದಾರೆ. ಹಲವು ಶಾಸಕರಿಗೆ ಇದರ ಬಗ್ಗೆ ಅಸಮಾಧಾನ ಇದೆ. ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಅವರಿಂದಲೇ ಅಸ್ಥಿರ ಆಗಲಿದೆ ಎಂದು ಆರೋಪಿಸಿದರು.
ರಾಯಣ್ಣ ಬ್ರಿಗೇಡ್ ಬಗ್ಗೆ ಸದ್ಯ ಚಿಂತನೆ ಇಲ್ಲ:ರಾಯಣ್ಣ ಬ್ರಿಗೇಡ್ ವಿಚಾರವಾಗಿ ಪ್ರತಿಕ್ರಿಯಿಸಿ, ಸಂಬಂಧಪಟ್ಟ ಹಿಂದುಳಿದವರು, ದಲಿತರ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಮಾಡುತ್ತೇನೆ. ಈ ನಿಮಿಷದ ವರೆಗೆ ಆ ಚಿಂತನೆ ಬಂದಿಲ್ಲ. ರಾಯಣ್ಣ ಬ್ರಿಗೇಡ್ ಪುನಶ್ಚೇತನ ಮಾಡಬೇಕು ಅಂತ ನಾನು ಎಲ್ಲೂ ಹೇಳಿಲ್ಲ. ಮತ್ತೆ ರಾಯಣ್ಣ ಬ್ರಿಗೇಡ್ ಕಟ್ಟಬೇಕು ಅಂತ ನಾನು ಎಲ್ಲೂ ಹೇಳಿಲ್ಲ. ಅಗತ್ಯ ಬಂದರೆ ಮತ್ತೆ ರಾಯಣ್ಣ ಬ್ರಿಗೇಡ್ ಸಂಘಟನೆ ಮಾಡ್ತೇವೆ. ಆ ತರದ ಅಗತ್ಯ ಇದುವರೆಗೆ ನನಗೆ ಬಂದಿಲ್ಲ ಎಂದರು.
ರಾಜಕೀಯ ಕುತಂತ್ರದಿಂದ ರಾಜ್ಯ ತಲೆತಗ್ಗಿಸುವಂತಾಗಿದೆ: ಪ್ರಜ್ವಲ್ ಪ್ರಕರಣದ ಬಗ್ಗೆ ಮಾತಾಡೋಕ್ಕೆ ಅಸಹ್ಯ ಆಗುತ್ತೆ. ಇವರ ರಾಜಕೀಯ ಕುತಂತ್ರದಲ್ಲಿ ರಾಜ್ಯದ ಜನ ತಲೆ ತಗ್ಗಿಸುವಂತಾಗಿದೆ. ಹೆಣ್ಣನ್ನು ಮುಂದಿಟ್ಕೊಂಡು ರಾಜಕೀಯ ಮಾಡೋರು ದ್ರೋಹಿಗಳು. ಕರ್ನಾಟಕದಲ್ಲಿ ಹೆಣ್ಣಿನ ಅಪಮಾನದ ಬಗ್ಗೆ ಇಷ್ಟು ಚರ್ಚೆ ಆಗ್ತಿದೆ, ಇದು ನಾಚಿಕೆಗೇಡು. ಪ್ರಕರಣ ಸಿಬಿಐಗೆ ಕೊಡಲಿ, ಯಾಕೆ ಸಿಎಂ, ಡಿಸಿಎಂ ಹಿಂಜರಿಯುತ್ತಿದ್ದಾರೆ. ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು, ಎಲ್ಲವೂ ಹೊರಗೆ ಬರಲು ಸಿಬಿಐಗೆ ತನಿಖೆ ವಹಿಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ನಮ್ಮಲ್ಲಿ ಒಳಜಗಳ ಇಲ್ಲ, ಇದ್ದಿದ್ದರೆ ಲೋಕಸಭಾ ಚುನಾವಣೆಗೆ ಒಗ್ಗಟ್ಟಿನಿಂದ ಕೆಲಸ ಮಾಡಲು ಆಗುತ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ - CM Siddaramaiah