ದಾವಣಗೆರೆ :ಪಾಲಿಕೆ ಮೇಯರ್ ಆಗಿ ಕೆ. ಚಮನ್ ಸಾಬ್ ಹಾಗೂ ಉಪಮೇಯರ್ ಆಗಿ ಸೋಗಿ ಶಾಂತಕುಮಾರ್ ಆಯ್ಕೆಯಾಗಿದ್ದಾರೆ. ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಪ್ರಸನ್ನಕುಮಾರ್ ಕೆ 17 ಮತ ಪಡೆದಿದ್ದರೆ, ಇತ್ತ ನೂತನ ಮೇಯರ್ ಆಗಿ ಆಯ್ಕೆಯಾಗಿರುವ ಕೆ. ಚಮನ್ ಸಾಬ್ ಅವರು 30 ಮತಗಳನ್ನು ಪಡೆದು ಆಯ್ಕೆಯಾದರು.
ಇನ್ನು ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಸ್. ಟಿ ವೀರೇಶ್ 17 ಮತಗಳನ್ನ ಪಡೆದರೆ, ಕಾಂಗ್ರೆಸ್ ಪಕ್ಷದ ಸ್ಪರ್ಧಿ ಸೋಗಿ ಶಾಂತಕುಮಾರ್ 30 ಮತಗಳನ್ನು ಪಡೆದು ಉಪಮೇಯರ್ ಆಗಿ ಆಯ್ಕೆಯಾದರು. ಇನ್ನು ಈ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿಯಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಭಾಗವಹಿಸಿದ್ದರು.
ಚುನಾವಣೆ ಪ್ರಕ್ರಿಯೆ ನಡೆದಿದ್ದು ಹೇಗೆ? :ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ನಡೆದ ಮೇಯರ್ ಚುನಾವಣೆ ಪ್ರಕ್ರಿಯೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಹಾನ್ ಆದಿತ್ಯ ಬಿಸ್ವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೇಯರ್ ಸ್ಥಾನವು ಹಿಂದುಳಿದ ವರ್ಗ 'ಅ' ಮತ್ತು ಉಪಮೇಯರ್ ಸ್ಥಾನವು ಹಿಂದುಳಿದ ವರ್ಗ 'ಬ' ಗೆ ಮೀಸಲಿತ್ತು. ಪಾಲಿಕೆ ಆಡಳಿತ ಅವಧಿಗೆ ಕೇವಲ ನಾಲ್ಕು ತಿಂಗಳು, 20 ದಿನಗಳಿಗೆ ಮಾತ್ರ ಉಳಿದಿದೆ.
ಪ್ರಸ್ತುತ ದಾವಣಗೆರೆ ಮಹಾನಗರ ಪಾಲಿಕೆಯ ಒಟ್ಟು 45 ಸದಸ್ಯರ ಪೈಕಿ ಓರ್ವ ಸದಸ್ಯರು ಅಕಾಲಿಕ ನಿಧನ ಹೊಂದಿದ್ದಾರೆ. ಇದರಿಂದ ಸದಸ್ಯರ ಬಲ 44ಕ್ಕಿದೆ. ಇನ್ನು ಸಂಸದರು, ಇಬ್ಬರು ಶಾಸಕರು, ಓರ್ವ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 48 ಜನ ಮತದಾನ ಮಾಡುವ ಅರ್ಹತೆ ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್ ತನ್ನ ಸದಸ್ಯರೊಟ್ಟಿಗೆ ಮೂವರು ಪಕ್ಷೇತರ ಅಭ್ಯರ್ಥಿಗಳು, ಬಿಜೆಪಿಯಿಂದ ಬಂದಿರುವ ನಾಲ್ಕು ಸದಸ್ಯರ ಬಲದಿಂದಾಗಿ ಅಧಿಕಾರ ಹಿಡಿಯಲು ಯಶಸ್ವಿಯಾಯಿತು. ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಸೋಗಿ ಶಾಂತಕುಮಾರ್ ಆಯ್ಕೆಯಾಗಿದ್ದು, ವಿಶೇಷವಾಗಿತ್ತು.