ಗಂಗಾವತಿ(ಕೊಪ್ಪಳ): ಮಕ್ಕಳಿಗೆ ಮೊಟ್ಟೆ ಕೊಟ್ಟು ವಿಡಿಯೋ ಮಾಡಿ ವಾಪಸ್ ಕಸಿದುಕೊಂಡು ರಾಜ್ಯಾದ್ಯಂತ ಸುದ್ದಿಯಾಗಿದ್ದ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಮಂಗಳವಾರ ನ್ಯಾಯಾಧೀಶರು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಕೊಪ್ಪಳ ಜಿಲ್ಲಾ ಸಿವಿಲ್ ನ್ಯಾಯಾಧೀಶ ಮಹಾಂತೇಶ್ ಎಸ್.ದರಾಗದ, ಗಂಗಾವತಿಯ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ್ ಎಸ್.ಗಾಣಿಗೇರ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.
ಮೊಟ್ಟೆ ಪ್ರಕರಣದ ಪೂರ್ಣ ಮಾಹಿತಿ ಪಡೆದುಕೊಂಡ ನ್ಯಾಯಾಧೀಶರು, ಕೇಂದ್ರದಲ್ಲಿ ಮಕ್ಕಳಿಗೆ ಇರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಶೌಚಾಲಯ, ಕುಡಿಯುವ ನೀರು, ದಾಸ್ತಾನು ಮಾಡಲಾಗಿರುವ ಆಹಾರ, ಮಕ್ಕಳಿಗೆ ನೀಡುವ ಔಷಧಿಗಳ ಮಾಹಿತಿ ಪಡೆದರು.
ಅಂಗನವಾಡಿ ಕೇಂದ್ರದ ಸುತ್ತಲೂ ಇರುವ ಕಸಕಡ್ಡಿ, ತಿಪ್ಪೇಗುಂಡಿ ತೆರವಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೇಂದ್ರದಲ್ಲಿ ನೀರಿನ ನಳ ಇಲ್ಲದಿರುವುದು, ಮಕ್ಕಳಿಗೆ ನಿತ್ಯ ನೀಡುವ ಆಹಾರದ ಮೆನು ಹಾಕದಿರುವುದು, ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯದ ಕಟ್ಟಡ ಬಿರುಕು ಉಂಟಾಗಿರುವುದನ್ನು ನ್ಯಾಯಾಧೀಶರು ಗಮನಿಸಿದರು. ಬಳಿಕ ಸಂಬಂಧಿತ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಇದನ್ನೂ ಓದಿ:ಗಂಗಾವತಿ: ವಿಚ್ಛೇದನದ ಹಾದಿ ಹಿಡಿದಿದ್ದ ದಂಪತಿಗೆ ಜಡ್ಜ್ಗಳಿಂದ ಮರು ಬೆಸುಗೆ