ಬೆಂಗಳೂರು:ಗರಿಷ್ಠ 7 ಪಾಲಿಕೆಗಳಾಗಿ ವಿಂಗಡಿಸಿ, 30 ತಿಂಗಳ ಮೇಯರ್ ಅವಧಿಯ ಸಲಹೆಯೊಂದಿಗೆ ಗ್ರೇಟರ್ ಬೆಂಗಳೂರು ಮಸೂದೆ ಬಗ್ಗೆ ಜಂಟಿ ಸದನ ಸಮಿತಿಯು ಸ್ಪೀಕರ್ ಯು.ಟಿ. ಖಾದರ್ ಅವರಿಗೆ ವರದಿ ಸಲ್ಲಿಸಿದೆ. ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆಯ ಗ್ರೇಟರ್ ಬೆಂಗಳೂರು ಮಸೂದೆ ಮೇಲಿನ ಜಂಟಿ ಸದನ ಸಮಿತಿಯು ವಿಧಾನಸೌಧದಲ್ಲಿ ವರದಿ ಸಲ್ಲಿಕೆ ಮಾಡಿತು.
ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್, ಕಾಂಗ್ರೆಸ್ ಶಾಸಕ ನಾರಾಯಣಸ್ವಾಮಿ, ಪ್ರಿಯಕೃಷ್ಣ ಉಪಸ್ಥಿತರಿದ್ದರು. ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, ಗ್ರೇಟರ್ ಬೆಂಗಳೂರು ಬಿಲ್ ಕಳೆದ ಜುಲೈ ವೇಳೆ ಅಧಿವೇಶನದಲ್ಲಿ ಮಂಡನೆಯಾಗಿತ್ತು. ಅಲ್ಲಿ ಸಮಗ್ರವಾಗಿ ಚರ್ಚೆ ಆಗಿತ್ತು. ಮಸೂದೆಯ ಸಾಧಕ, ಬಾಧಕಗಳ ಬಗ್ಗೆ ಚರ್ಚಿಸುವ ಅಗತ್ಯವಿದೆ. ಹೀಗಾಗಿ, ಎಲ್ಲಾ ಸದಸ್ಯರು ಜಂಟಿ ಸದನ ಸಮಿತಿ ರಚನೆಗೆ ಮನವಿ ಮಾಡಿದ್ದರು. ಬಳಿಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಂಟಿ ಸಮಿತಿ ರಚನೆ ಮಾಡಲಾಗಿದೆ. ಜಂಟಿ ಸದನ ಸಮಿತಿ ಇದೀಗ ವರದಿ ಸಲ್ಲಿಕೆ ಮಾಡಿದೆ. ವರದಿಯನ್ನು ಮುಂದಿನ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
7 ಪಾಲಿಕೆಗಳಾಗಿ ವಿಂಗಡನೆಗೆ ಸಲಹೆ :ವರದಿ ಸಲ್ಲಿಸಿದ ಬಳಿಕ ಮಾತನಾಡಿದ ಶಾಸಕ ರಿಜ್ವಾನ್ ಅರ್ಷದ್, ಜಂಟಿ ಸದನ ಸಮಿತಿಯು 20 ಸಭೆಗಳನ್ನು ನಡೆಸಿದೆ. ಸಾವಿರಾರು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ. ಐದು ತಿಂಗಳಲ್ಲಿ ಈ ಮಸೂದೆ ಸಂಬಂಧ ಸಭೆ ನಡೆಸಿದ್ದೇವೆ. ಕಾನೂನು ತಜ್ಞರು, ಬೆಂಗಳೂರು ತಜ್ಞರು ಹಾಗೂ ಸಾರ್ವಜನಿಕರ ಜೊತೆ ಸಭೆ ಮಾಡಿದ್ದೇವೆ. ಇದೀಗ ಸಮಗ್ರ ವರದಿ ಸಿದ್ಧಪಡಿಸಿ ಸಲ್ಲಿಕೆ ಮಾಡಿದ್ದೇವೆ. ಮುಂದಿನ ಅಧಿವೇಶನದಲ್ಲಿ ವರದಿ ಮಂಡನೆ ಆಗಲಿದೆ ಎಂದರು.
ಬೆಂಗಳೂರು ನಗರ ದೇಶದ ಆರ್ಥಿಕತೆಗೆ ಕೇಂದ್ರ ಬಿಂದುವಾಗಿದೆ. 400 ಫಾರ್ಚೂನ್ ಕಂಪನಿಗಳು ಬೆಂಗಳೂರಲ್ಲಿವೆ. ಬೆಂಗಳೂರು ಎಲ್ಲರ ಕನಸಿನ ನಗರವಾಗಿದೆ. ಅದಕ್ಕೆ ಪೂರಕವಾಗಿ ಆಡಳಿತ ಶಕ್ತಿ, ಅಭಿವೃದ್ಧಿ, ಜನರಿಗೆ ಬೇಕಾದ ಸೌಲತ್ತು ಒದಗಿಸುವ ಆಡಳಿತಾತ್ಮಕ ರಚನೆ ಸಿದ್ಧಮಾಡಬೇಕಿತ್ತು. ಹಾಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಜನರಿಗೆ ಸಹಾಯ ಆಗುತ್ತಿದೆಯಾ ಎಂದು ಕೇಳಿದಾಗ, ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಆಗಬೇಕು ಎಂದು ಸಲಹೆ ನೀಡಿದ್ದಾರೆ. ಒಂದೇ ಪಾಲಿಕೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಸದ್ಯ ಬಿಬಿಎಂಪಿ 870 ಚದರ್ ಕಿ.ಮೀ. ವ್ಯಾಪ್ತಿ ಇದೆ. ಹೀಗಾಗಿ, ಸಣ್ಣ ಪಾಲಿಕೆಗಳ ರಚನೆ ಅಗತ್ಯ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1.51 ಕೋಟಿ ಜನಸಂಖ್ಯೆ ಇದೆ. ಹೀಗಾಗಿ, ಸಣ್ಣ ಪಾಲಿಕೆಗಳಾಗಿ ವಿಂಗಡನೆ ಮಾಡಬೇಕು ಎಂಬ ಸಲಹೆ ನೀಡಿದ್ದೇವೆ. ಗರಿಷ್ಠ ಏಳು ಪಾಲಿಕೆ ರಚನೆ ಮಾಡುವ ಅವಕಾಶ ನೀಡಿದ್ದೇವೆ. ಒಂದೇ ಬಾರಿಗೆ ಏಳು ಪಾಲಿಕೆ ರಚನೆ ಮಾಡಬೇಕು ಎಂದಿಲ್ಲ. ಮುಂದಿನ ದಿನಗಳಲ್ಲಿ ಪಾಲಿಕೆಗಳ ವಿಂಗಡನೆ ಮಾಡಲು ಸಲಹೆ ನೀಡಿದ್ದೇವೆ. ಸಂದರ್ಭಕ್ಕನುಸಾರ ಪಾಲಿಕೆಗಳ ರಚನೆ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳುವ ಶಿಫಾರಸು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಪ್ರತಿ ಪಾಲಿಕೆಯಲ್ಲಿ 100-125 ವಾರ್ಡ್ ರಚನೆ :ಪಾಲಿಕೆ ವಿಂಗಡನೆ ಮಾಡುವಾಗ ಆದಾಯ ಸಂಗ್ರಹವನ್ನು ಗಮದಲ್ಲಿಟ್ಟುಕೊಂಡು ಪಾಲಿಕೆ ರಚನೆ ಮಾಡುವಂತೆ ಸಲಹೆ ನೀಡಿದ್ದೇವೆ. ಹೀಗಾಗಿ, ಆದಾಯ ಕೊರತೆ ಆಗದಂತೆ ಪಾಲಿಕೆ ರಚನೆ ಮಾಡಲು ಸಲಹೆ ನೀಡಿದ್ದೇವೆ ಎಂದು ತಿಳಿಸಿದರು.
ಸದ್ಯದ ಸ್ಥಿತಿಯಲ್ಲಿ ಪಾರದರ್ಶಕತೆ ಇಲ್ಲ. ಹೀಗಾಗಿ, ಹೆಚ್ಚಿನ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಪಾಲಿಕೆ ವಿಂಗಡನೆ ಆಗಬೇಕು. ಪ್ರತಿ ಪಾಲಿಕೆಗೆ 100-125 ವಾರ್ಡ್ಗಳು ಇರಬೇಕು ಎಂದು ಸಲಹೆ ನೀಡಿದ್ದೇವೆ. ಪ್ರತಿ ಪಾಲಿಕೆಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಲಿದೆ ಎಂದು ರಿಜ್ವಾನ್ ಅರ್ಷದ್ ವಿವರಿಸಿದರು.