ನಿವೃತ್ತ ಇತಿಹಾಸ ಉಪನ್ಯಾಸಕ ಬಾಲಕೃಷ್ಣ ಹೆಗಡೆ ಅವರ ಮಾತುಗಳು (ETV Bharat) ಶಿವಮೊಗ್ಗ:''ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ? ಸಾಯೋತನಕ ಸಂಸಾರ್ದೊಳಗೆ ಗಂಡಾಗುಂಡಿ; ಹೇರಿಕೊಂಡು ಹೋಗೋದಿಲ್ಲ ಸತ್ತಾಗ್ ಬಂಡಿ; ಇರೋದ್ರೊಳಗೆ ನೋಡು ಒಮ್ಮೆ ಜೋಗದ ಗುಂಡಿ'' ಎಂಬ ಡಾ. ರಾಜ್‌ಕುಮಾರ್ ಅವರ ಹಾಡಿನಿಂದಲೂ ಗಮನ ಸೆಳೆದಿರುವ ವಿಶ್ವವಿಖ್ಯಾತ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳುವುದೇ ಚೆಂದ. ಮಾನವರಾಗಿ ಹುಟ್ಟಿದ ಮೇಲೆ ನಾವುಗಳು ಒಮ್ಮೆಯಾದರೂ ಈ ಜೋಗ ಜಲಪಾತದ ಸೊಬಗು ಸವಿಯಬೇಕು ಎಂಬುದು ಈ ಸಾಲಿನ ಆಶಯ.
930 ಅಡಿ ಎತ್ತರದಿಂದ ಧುಮ್ಮುಕ್ಕುವ ಜೋಗ ಜಲಪಾತವು ಮುಂಗಾರು ಮಳೆ ಪ್ರಾರಂಭವಾಗುತ್ತಿದ್ದಂತೆಯೇ ಜನರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂಬುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿಯೇ ಈ ಪ್ರಕೃತಿ ಸೌಂದರ್ಯ ಸವಿಯಲು ಪ್ರಪಂಚದ್ಯಾಂತ ಕೋಟ್ಯಂತರ ಜನರು ಭೇಟಿ ನೀಡುತ್ತಾರೆ.
ಜೋಗ ಜಲಪಾತದ ರುದ್ರರಮಣೀಯ ದೃಶ್ಯ (ETV Bharat) ಅದರಲ್ಲೂ ಜಲಪಾತವನ್ನು ಕೆಪಿಸಿಯ ಪ್ರವಾಸಿ ಮಂದಿರದಿಂದ ವೀಕ್ಷಿಸುವುದೇ ರೋಮಾಂಚನಕಾರಿ ಅನುಭವ. ಜಲಪಾತದ ನಾಲ್ಕು ಕವಲುಗಳಲ್ಲಿ ಶರಾವತಿ ನದಿ ಧುಮ್ಮುಕ್ಕಿ ಹರಿಯುವ ವೈಭವ ಕಣ್ತುಂಬಿಕೊಳ್ಳುವುದೇ ಇನ್ನೂ ಚೆಂದ. 930 ಅಡಿ ಎತ್ತರದಿಂದ ರಾಜ, ರಾಣಿ, ರೋರರ್, ರಾಕೆಟ್ ಆಗಿ ಹಾಲ್ನೊರೆಯಂತೆ ಹರಿಯುವ ಜಲಪಾತ ನೋಡುಗರನ್ನು ಪುಳಕಿತರನ್ನಾಗಿಸುತ್ತದೆ. ಆ ಜಲಪಾತಗಳ ರುದ್ರರಮಣೀಯ ದೃಶ್ಯ ನೋಡುವುದೇ ಕಣ್ಣಿಗೆ ಹಬ್ಬವಿದ್ದಂತೆ!
ನಾಲ್ಕು ಕವಲುಗಳ ಹೆಸರು:ಅಂದಹಾಗೆ ಈ ರಾಜ, ರಾಣಿ, ರೋರರ್, ರಾಕೆಟ್ ಎಂಬ ನಾಲ್ಕೂ ಕವಲುಗಳಿಗೆ ಈ ಹೆಸರುಗಳು ಹೇಗೆ ಬಂದವು? ಇವುಗಳಿಗೆ ಈ ಹೆಸರುಗಳಿಂದಲೇ ಏಕೆ ಕರೆಯುತ್ತಾರೆ ಎಂಬುವುದಕ್ಕೂ ಕೂಡ ತನ್ನದೇಯಾದ ಇತಿಹಾಸ ಹೊಂದಿದೆ. ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಶರಾವತಿ ನದಿಯಿಂದ ಉಂಟಾಗುವ ಜಲಪಾತವು 930 ಅಡಿಯಿಂದ ನಾಲ್ಕೂ ಕವಲುಗಳಾಗಿ ಧುಮ್ಮಿಕ್ಕುವುದು ವಿಶೇಷ. ಈ ನಾಲ್ಕು ಕವಲುಗಳಿಗೆ ಏಕೆ ಇದೇ ಹೆಸರುಗಳಿಂದ ಗುರುತಿಸುತ್ತಾರೆ ಎಂಬುದರ ಬಗ್ಗೆ ನಿವೃತ್ತ ಇತಿಹಾಸ ಉಪನ್ಯಾಸಕ ಬಾಲಕೃಷ್ಣ ಹೆಗಡೆ ಎಂಬುವರು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಹೀಗೆ ಹೇಳುತ್ತಾರೆ.
''ಜೋಗದ ಮೊದಲ ಝರಿ 'ರಾಜ' ಎಂಬ ಹೆಸರಿನ ಕವಲು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನಿಂದ ಧುಮ್ಮಿಕ್ಕುತ್ತದೆ. ಇದು ರಾಜನಷ್ಠೇ ಗಂಭೀರವಾಗಿ ಮೇಲಿಂದ ನೀರು ಬೀಳುವಂತೆ ಗೋಚರವಾಗುತ್ತದೆ. ಹಾಗಾಗಿ ಇದನ್ನು 'ರಾಜ' ಎಂದು ಕರೆದರೆ, ಅದರ ಪಕ್ಕದಲ್ಲಿ 'ರೋರರ್' ಎಂಬ ಕವಲು ಕಾಣಿಸುತ್ತದೆ. ಈ 'ರೋರರ್' ಕವಲು ಜೋರಾಗಿ ರೌ ರೌ ಎಂಬ ಶಬ್ದ ಮಾಡುತ್ತಾ ಜೋರಾಗಿ ಧುಮ್ಮುಕ್ಕುತ್ತದೆ. ಇದರ ಪಕ್ಕದಲ್ಲಿ 'ರಾಕೆಟ್' ಕವಲನ್ನು ಕಾಣುತ್ತೇವೆ. ಇದು ನೆಲದಿಂದ ಆಕಾಶಕ್ಕೆ ರಾಕೆಟ್ ಬಿಟ್ಟಾಗ ಯಾವ ರೀತಿ ಮೇಲಕ್ಕೆ ಹಾರುತ್ತದೆಯೋ ಹಾಗೆ ಇದು ಮೇಲಿನಿಂದ ಕೆಳಕ್ಕೆ ಧುಮ್ಮುಕ್ಕುತ್ತದೆ. ಇದರ ಪಕ್ಕದಲ್ಲಿ 'ರಾಣಿ' ಫಾಲ್ಸ್ ಅನ್ನು ನೋಡಬಹುದಾಗಿದೆ. ಇದು ಅತ್ಯಂತ ಶಾಂತ ಚಿತ್ತದಿಂದ ಶಾಂತವಾಗಿ ಮೇಲಿಂದ ಕೆಳಕ್ಕೆ ಧುಮ್ಮುಕ್ಕುತ್ತದೆ'' ಎಂದು ಹೆಗಡೆ ನಾಲ್ಕೂ ಕವಲುಗಳ ಇತಿಹಾಸ ವರ್ಣಿಸಿದರು.
ಜಲಪಾತಗಳ ರುದ್ರರಮಣೀಯ ದೃಶ್ಯ ವೀಕ್ಷಣೆಯಲ್ಲಿ ಪ್ರವಾಸಿಗರು (ETV Bharat) ಲಕ್ಷಾಂತರ ಪ್ರವಾಸಿಗರು ಭೇಟಿ:ಜೋಗ ಜಲಪಾತ ಜಗತ್ತಿನ 490 ಅದ್ಭುತ ಜಲಪಾತಗಳಲ್ಲಿ 36ನೇ ಸ್ಥಾನ ಪಡೆದಿದೆ. ಜೂನ್ ತಿಂಗಳಿನಿಂದ ಚೆನ್ನಾಗಿ ಮಳೆಯಾದರೆ ಡಿಸಂಬರ್ ತಿಂಗಳ ವರೆಗೂ ಜಲಪಾತದ ಜಲವೈಭವ ಕಾಣಬಹುದು. ಮಳೆಗಾಲದಲ್ಲಿ ಜಲಪಾತದ ಜಲವೈಭವ, ಮಂಜು ಮುಸಿಕಿದ ವಾತಾವರಣ, ಜೋರಾದ ಮಳೆ, ಎಲ್ಲವನ್ನೂ ಅನುಭವಿಸಬೇಕಾದರೆ ಒಮ್ಮೆ ಜಲಪಾತಕ್ಕೆ ಭೇಟಿ ನೀಡಲೇಬೇಕು. ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯವನ್ನು ನಿರ್ಮಿಸಲಾಗಿದೆ. ಜಲಾಶಯದಿಂದ ನದಿಗೆ ನೀರು ಬಿಟ್ಟಾಗ ಜೋಗ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬದಂತೆ ಕಾಣುತ್ತದೆ. ಜೋಗ ಜಲಪಾತಕ್ಕೆ ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರರು ಭೇಟಿ ನೀಡುತ್ತಾರೆ.
ಜಲಪಾತಕ್ಕೆ ತಲುಪುವ ಮಾರ್ಗ:ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 110 ಕಿಮಿ ದೂರದಲ್ಲಿದೆ. ಬೆಂಗಳೂರಿನಿಂದ ಇಲ್ಲಿಗೆ ಎಲ್ಲಾ ರೀತಿಯ ಬಸ್ ಸಂಪರ್ಕವಿದೆ. ರೈಲಿನಿಂದ ಬರುವವರು ಬೆಂಗಳೂರು - ಮೈಸೂರಿನಿಂದ ತಾಳಗುಪ್ಪದವರೆಗೂ ಬರಬಹುದು. ರಾತ್ರಿ ತಂಗಲು ಜೋಗದಲ್ಲಿ ಲೋಕೋಪಯೋಗಿ ಪ್ರವಾಸಿ ಮಂದಿರ, ಕೆಪಿಸಿ ಪ್ರವಾಸಿ ಮಂದಿರ ಹಾಗೂ ಪ್ರವಾಸೋದ್ಯಮದ ಪ್ರವಾಸಿ ಮಂದಿರವಿದೆ. ಇನ್ನೂ ಖಾಸಗಿಯಾಗಿ ಹೋಂ ಸ್ಟೇಗಳಿವೆ. ಜೊತೆಗೆ ಕಾರ್ಗಲ್, ಸಾಗರ, ಶಿವಮೊಗ್ಗದಲ್ಲೂ ಲಾಡ್ಜ್ ಲಭ್ಯವಾಗಿರುತ್ತವೆ.
ಇದನ್ನೂ ಓದಿ:ರಾಜ್ಯದ ವಿದ್ಯುತ್ ಬರ ನೀಗಿಸುವ ಲಿಂಗನಮಕ್ಕಿ ಜಲಾಶಯ ಭರ್ತಿ; ನೀರು ಬಿಡುಗಡೆಗೆ ಕ್ಷಣಗಣನೆ - Linganamakki Reservoir filled