ಬೆಂಗಳೂರು :ಹೆಂಡತಿಯೊಂದಿಗೆ ಜಗಳವಾಡಿಕೊಂಡು ಊರಿಗೆ ಹೋಗಿದ್ದ ವ್ಯಕ್ತಿಯ ಮನೆ ದೋಚಿದ್ದ ಕಳ್ಳನನ್ನ ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ತಮಿಳುನಾಡಿನ ವೆಲ್ಲೂರು ಮೂಲದ ಸತೀಶ್ ಬಂಧಿತ ಆರೋಪಿ.
ಆರೋಪಿ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಭೈರವೇಶ್ವರ ನಗರದ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಸುಮಾರು 16.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾದ ಆರೋಪಿ (ETV Bharat) ದಂಪತಿ ಮನೆ ತೊರೆದಾಗ ಕಳ್ಳನ ಕೈಚಳಕ:ಅಕ್ಕಸಾಲಿಗರಾಗಿದ್ದ ಮನೆ ಮಾಲೀಕ ಮನೆಯಲ್ಲಿ ಚಿನ್ನಾಭರಣಗಳ ತಯಾರಿ ಕೆಲಸ ಮಾಡಿಕೊಂಡಿದ್ದರು. ಜನವರಿ 1ರಂದು ಮನೆಯಲ್ಲಿದ್ದ ಮಾಲಿಕ ದಂಪತಿಯ ನಡುವೆ ಸಣ್ಣ ವಿಚಾರಕ್ಕೆ ಜಗಳವಾಗಿತ್ತು. ಈ ವೇಳೆ ಕೋಪಿಸಿಕೊಂಡಿದ್ದ ಪತ್ನಿ ತವರು ಮನೆಗೆ ಹೋಗಿದ್ದರು. ಇತ್ತ ಮನೆ ಮಾಲೀಕ ಸಹ ಪತ್ನಿಯ ಮೇಲಿನ ಸಿಟ್ಟಿನಿಂದ ಮಕ್ಕಳಿಬ್ಬರನ್ನೂ ಕರೆದುಕೊಂಡು ತಮ್ಮ ಸ್ವಂತ ಊರಾದ ಸಾಗರಕ್ಕೆ ತೆರಳಿದ್ದರು. ಮನೆಯಿಂದ ಬಸ್ ನಿಲ್ದಾಣದವರೆಗೆ ತೆರಳಲು ಮನೆ ಮಾಲೀಕ ಆಟೋ ಬುಕ್ ಮಾಡಿದಾಗ ಆರೋಪಿ ಚಾಲಕ ಸತೀಶ್ ಬಂದಿದ್ದ. ಈ ವೇಳೆ ಆತ್ಮೀಯವಾಗಿ ಮಾತನಾಡಿಕೊಂಡು ಮನೆ ಮಾಲೀಕ ಮತ್ತು ಆತನ ಮಕ್ಕಳನ್ನ ನಿಗದಿತ ಸ್ಥಳಕ್ಕೆ ಡ್ರಾಪ್ ಮಾಡಿದ್ದ ಚಾಲಕ ವಾಪಸ್ ಬಂದು ಅವರದ್ದೇ ಮನೆಯ ಬೀಗ ಮುರಿದು ಒಳನುಗ್ಗಿದ್ದ. ಬಳಿಕ ಮನೆಯಲ್ಲಿದ್ದ ನಗದು, ಚಿನ್ನಾಭರಣ ಸೇರಿದಂತೆ ಸುಮಾರು 20 ಲಕ್ಷ ಮೌಲ್ಯದ ವಸ್ತುಗಳನ್ನ ಕದ್ದು ಪರಾರಿಯಾಗಿದ್ದ. ಮಕ್ಕಳೊಂದಿಗೆ ತಮ್ಮ ಪತಿ ಊರಿಗೆ ತೆರಳಿರುವುದನ್ನ ತಿಳಿದ ಅವರ ಪತ್ನಿ ಜನವರಿ 3ರಂದು ಸಂಜೆ ಮನೆ ಬಳಿ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಆರೋಪಿ (ETV Bharat) ಬಳಿಕ ಮನೆ ಮಾಲೀಕನ ಪತ್ನಿ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮನೆಯ ಅಕ್ಕಪಕ್ಕದ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ತನಿಖೆ ಕೈಗೊಂಡು ಆರೋಪಿಯನ್ನ ಬಂಧಿಸಿದ್ದಾರೆ. ಬಳಿಕ ಆತ ಕಾಮಾಕ್ಷಿಪಾಳ್ಯದಲ್ಲಿ ತಾನು ವಾಸವಿದ್ದ ಮನೆಯಲ್ಲಿರಿಸಿದ್ದ 16.50 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ:ಕನ್ನಡ ಗೊತ್ತಿಲ್ಲ, ಇಂಗ್ಲಿಷ್ ಬರಲ್ಲ: ಕಳ್ಳರು ಮನೆಗೆ ನುಗ್ಗಿದರೂ ಪೊಲೀಸರಿಗೆ ವಿವರಿಸಲಾಗದೆ ಪರದಾಡಿದ ಸ್ಪೇನ್ ಪ್ರಜೆ - THEFT IN SPAIN CITIZEN HOUSE