ರಾಯಚೂರು:ಲಂಚ ಸ್ವೀಕರಿಸುತ್ತಿದ್ದ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರನ್ನು (ಎಇಇ) ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಲಿಂಗಸೂಗೂರು ಪಟ್ಟಣದ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಂಚಪ್ಪ ಬಾವಿಮನಿ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ.
ರಾಯಚೂರು: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಜೆಸ್ಕಾಂ ಎಇಇ
ರಾಯಚೂರಿನ ಲಿಂಗಸೂಗೂರು ಪಟ್ಟಣ ಕಚೇರಿಯ ಎಇಇ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Published : Jan 23, 2024, 9:39 AM IST
|Updated : Jan 23, 2024, 12:19 PM IST
ಆಶಿಹಾಳ ತಾಂಡದ ನಿವಾಸಿಯಾದ ವಿದ್ಯುತ್ ಗುತ್ತಿಗೆದಾರರ ಪ್ರೇಮಕುಮಾರ್ ಎಂಬವರು ತಾವು ವಿದ್ಯುದ್ದೀಕರಣಗೊಳಿಸಿದ ಮನೆಯ ಆರ್‌ಆರ್ ನಂಬರ್ ನೀಡುವಂತೆ ಎಇಇ ಕೆಂಚಪ್ಪ ಬಾವಿಮನಿ ಅವರಿಗೆ ಮನವಿ ಮಾಡಿದ್ದರು. ಇದಕ್ಕಾಗಿ ಕೆಂಚಪ್ಪ ಕೆಲವು ದಿನಗಳಿಂದಲೂ ಪ್ರೇಮಕುಮಾರ್ ಅವರನ್ನು ಅಲೆದಾಡಿಸಿದ್ದರು. ಬಳಿಕ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇಂಜಿನಿಯರ್ ನಡೆಗೆ ಬೇಸತ್ತ ಪ್ರೇಮಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಎಸ್ಪಿ ಎಂ.ಎನ್.ಶಶಿಧರ್ ಮಾರ್ಗದರ್ಶನದಲ್ಲಿ ಡಿಎಸ್ಪಿ ಸಿದ್ದೇಶ್ವರ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಎಇಇ ಕೆಂಚಪ್ಪ ಬಾವಿಮನಿ ಅನಾರೋಗ್ಯವೆಂದು ತಿಳಿಸಿದ್ದು, ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.