ಮಂಗಳೂರು: ಜೆರೋಸಾ ಶಾಲೆಯಲ್ಲಿ ಶಿಕ್ಷಕಿಯಿಂದ ಧಾರ್ಮಿಕ ನಿಂದನೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ತನಿಖಾಧಿಕಾರಿಯಾಗಿ ಸರಕಾರ ಐಎಎಸ್ ಅಧಿಕಾರಿ ಆಕಾಶ್ ಶಂಕರ್ ಅವರನ್ನು ನೇಮಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಅವರು ಕೊಟ್ಟಾರದಲ್ಲಿರುವ ದ.ಕ. ಜಿಲ್ಲಾ ಪಂಚಾಯತ್ನ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಆಕಾಶ್ ಶಂಕರ್, ಪ್ರಕರಣದ ಸತ್ಯಾಸತ್ಯತೆ ಅರಿಯಲು ಸಭೆ ನಡೆಸಿದ್ದೇನೆ. ಹಂತಹಂತವಾಗಿ ಅಧಿಕಾರಿಗಳೊಂದಿಗೆ ಈ ಬಗ್ಗೆ ಮಾಹಿತಿ ಪಡೆದು, ತನಿಖೆ ನಡೆಸಲಿದ್ದೇನೆ. ಸದ್ಯ ವಿಚಾರಣೆ ನಡೆಯುತ್ತಿದೆ. ಪ್ರಾಥಮಿಕ ಹಂತದಲ್ಲಿ ವಿಚಾರಣೆ ಕುರಿತಂತೆ ಏನನ್ನು ಹೇಳಲಾಗುವುದಿಲ್ಲ. ಆದಷ್ಟು ಶೀಘ್ರದಲ್ಲಿ ಸರಕಾರಕ್ಕೆ ವರದಿಯನ್ನು ಸಲ್ಲಿಸಲಿದ್ದೇನೆ. ಪ್ರಾಮಾಣಿಕವಾಗಿ ಈ ತನಿಖೆ ನಡೆಸಲಿದ್ದೇನೆ ಎಂದು ಹೇಳಿದರು.
ಪ್ರಕರಣದ ಹಿನ್ನೆಲೆ ಏನು:ಮಂಗಳೂರಿನ ಜೆಪ್ಪುವಿನಲ್ಲಿರುವ ಜೆರೋಸಾ ಶಿಕ್ಷಣ ಸಂಸ್ಥೆಯ ಶಿಕ್ಷಕಿ ಸಿಸ್ಟರ್ ಪ್ರಭಾ ಎಂಬುವರು ತರಗತಿಯಲ್ಲಿ ಧಾರ್ಮಿಕ ನಿಂದನೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಫೆ.10ರ ಶನಿವಾರ ಪೋಷಕರು ಶಾಲಾ ಗೇಟ್ ಬಳಿ ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಫೆ.12 ರಂದು ಕೆಲ ಸಂಘಟನೆಗಳ ಕಾರ್ಯಕರ್ತರು ಶಿಕ್ಷಣ ಸಂಸ್ಥೆ ಮುಂದೆ ಜಮಾಯಿಸಿ ಶಿಕ್ಷಕಿಯ ಅಮಾನತಿಗೆ ಆಗ್ರಹಿಸಿದ್ದರು.