ಮೈಸೂರು: "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬ ಮೈಸೂರಿನಲ್ಲಿ ಭೂ ಕಬಳಿಕೆ ಪಕ್ಷಿನೋಟ" ಎಂಬ ಫ್ಲೆಕ್ಸ್ ಹಾಕಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಮಾಜಿ ಸಚಿವ ಸಾ.ರಾ. ಮಹೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತೆಯಾಗಿ ಪೊಲೀಸರು ಸಾ.ರಾ. ಮಹೇಶ್ ಹಾಗೂ ಇತರ ಬೆಂಬಲಿಗರನ್ನು ವಶಕ್ಕೆ ಪಡೆದರು.
ಇಂದು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಬೃಹತ್ ಜನಾಂದೋಲನ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದ ಸುತ್ತ ಪ್ರಮುಖ ರಸ್ತೆಗಳಲ್ಲಿ ಹಾಗೂ ವೃತ್ತಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ಫ್ಲೆಕ್ಸ್ಗಳನ್ನು ಹಾಕಲಾಗಿದೆ.
ಇದರ ಜತೆಗೆ ಪ್ರಮುಖ ಸರ್ಕಲ್ಗಳಲ್ಲಿ 2023 ರ ಫೆಬ್ರವರಿ ತಿಂಗಳಿನಲ್ಲಿ ಬಿಜೆಪಿ ನೀಡಿರುವ ಜಾಹೀರಾತು ಎಂಬ ಅಡಿ ಬರಹದ ಕೆಳಗೆ "ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬದ ಭೂ ಕಬಳಿಕೆಯ ಪಕ್ಷಿ ನೋಟ" ಎಂಬ ಫ್ಲೆಕ್ಸ್ ಹಾಕಲಾಗಿದೆ. ಅದರಲ್ಲಿ ದೇವೇಗೌಡರ ಕುಟುಂಬದ ಬಗ್ಗೆ ಹಾಗೂ ಆ ಕುಟುಂಬದ ಸದಸ್ಯರ ಭೂ ಕಬಳಿಕೆ ವಿವರಗಳನ್ನು ಹಾಕಲಾಗಿದೆ.