ಬೆಂಗಳೂರು: ನಮ್ಮ ಶಾಸಕರು ಮಾರಾಟದ ವಸ್ತು ಅಲ್ಲ, ನಮ್ಮ ಶಾಸಕರು ಮಾರು ಹೋಗುವುದಿಲ್ಲ. ಜೆಡಿಎಸ್ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ನೂತನ ಶಾಸಕ ಸಿ. ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೂರು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಬಂದಿದೆ. ಚನ್ನಪಟ್ಟಣ ಪ್ರತಿಷ್ಠೆಯ ಕ್ಷೇತ್ರವಾಗಿತ್ತು. ಮತದಾರರನ್ನು ಮನವೊಲಿಸಿ ಮತ ಪಡೆಯುವ ಪ್ರಯತ್ನ ಮಾಡಿದ್ದೆವು. ಆದರೆ, ಕಾಂಗ್ರೆಸ್ ವಾಮಮಾರ್ಗದಿಂದ ಗೆದ್ದಿದೆ. ಗೆದ್ದ ನಂತರ ಸಿ.ಪಿ. ಯೋಗೇಶ್ವರ್ ಅವರ ಮಾತಿನ ದಾಟಿ ಬದಲಾಗಿದೆ. ಅವರ ಭಾವನೆಗಳು ಮಾತಿನ ಮೂಲಕ ಹೊರ ಬರುತ್ತಿದೆ ಎಂದರು.
ಚನ್ನಪಟ್ಟಣದ ಅಭ್ಯರ್ಥಿ ಯಾವತ್ತಾದರೂ ಮುಳ್ಳೆ. ಡಿ.ಕೆ.ಶಿವಕುಮಾರ್ ಇದನ್ನು ಅರಿತುಕೊಳ್ಳಬೇಕು. ನಮ್ಮ ಶಾಸಕರನ್ನು ಕರೆತರುವ ಬಗ್ಗೆ ಮಾತನಾಡಿದ್ದಾರೆ. ನಮ್ಮ ಶಾಸಕರು ಮಾರು ಹೋಗುವುದಿಲ್ಲ. ಇದುವರೆಗೆ ನಮ್ಮ ಯಾವುದೇ ಶಾಸಕರನ್ನು ಸಂಪರ್ಕ ಮಾಡಿಲ್ಲ. ನಮ್ಮ ಪಕ್ಷವನ್ನು ರಾಜ್ಯದಿಂದ ತೆಗೆದುಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಎಸ್. ಆರ್. ಬೊಮ್ಮಾಯಿ, ಹೆಚ್. ಡಿ. ದೇವೇಗೌಡರನ್ನು ಉಳಿಸಿಕೊಂಡು ಬಂದ ಪಕ್ಷ. ನಮ್ಮ ಕಾರ್ಯಕರ್ತರ ಪಡೆ ಹೆಚ್ಚಾಗಿದೆ ಎಂದು ಹೇಳಿದರು.
ಯೋಗೇಶ್ವರ್ಗೆ ಹೆಚ್ಡಿಡಿ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?
ಹೆಚ್.ಡಿ. ದೇವೇಗೌಡರು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕೆಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಚುನಾವಣೆಗಳ ಸೋಲಿನಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಯಾವತ್ತೂ ಧೃತಿಗೆಟ್ಟವರಲ್ಲ, ಚನ್ನಪಟ್ಟಣ ಚುನಾವಣೆಯಲ್ಲಿ ಮೊಮ್ಮಗನ ಸೋಲು ಅವರನ್ನು ಅಧೀರರಾಗಿಸಿಲ್ಲ. ದೆಹಲಿಗೆ ತೆರಳಿ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿದ್ದಾರೆ. ಯೋಗೇಶ್ವರ್ಗೆ ದೇವೇಗೌಡರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ. ಈ ಹಿಂದೆ ಬಿಜೆಪಿಯಲ್ಲಿದ್ದ ಸಿ. ಪಿ. ಯೋಗೇಶ್ವರ್ 30 ಜನ ಶಾಸಕರನ್ನು ಕಾಂಗ್ರೆಸ್ ನಿಂದ ಕರೆದುಕೊಂಡು ಬರುವುದಾಗಿ ಹೇಳಿದ್ದರು. ಯೋಗೇಶ್ವರ್ ಬಗ್ಗೆ ಕಾಂಗ್ರೆಸ್ ನವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಜಿ.ಟಿ.ದೇವೇಗೌಡರನ್ನು ಪ್ರಚಾರಕ್ಕೆ ಕರೆಯದಿದ್ದಕ್ಕೆ ಭಿನ್ನಾಭಿಪ್ರಾಯವಿದೆ. ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಯಾವ ಕಾರಣಕ್ಕೆ ಅಂತ ಎಲ್ಲರಿಗೂ ಗೊತ್ತು. ಸಿ. ಎಂ. ಇಬ್ರಾಹಿಂ ಅವರದು ಮಾತೇ ಬಂಡವಾಳ. ಅವರು ಏನು ಬೇಕಾದರೂ ಮಾತನಾಡುತ್ತಾರೆ. ಕಾಂಗ್ರೆಸ್ ನವರು ಯಾರು ಸಹ ಇಬ್ರಾಹಿಂ ಅವರನ್ನು ಕರೆಯುತ್ತಿಲ್ಲ. 18 ಜನ ನಮ್ಮ ಶಾಸಕರು ಇಬ್ರಾಹಿಂ ಜೊತೆಗೂ ಹೋಗುವುದಿಲ್ಲ ಎಂದು ಹೇಳಿದರು.
ಚಂದ್ರಶೇಖರ್ ಸ್ವಾಮೀಜಿ ಹೇಳಿಕೆ ಬಗ್ಗೆ ಮಾತನಾಡಿ, ಮುಸ್ಲಿಮರ ಮತ ರದ್ದು ಮಾಡುವುದಕ್ಕೆ ಆಗುವುದಿಲ್ಲ. ಈ ನೆಲದಲ್ಲಿ ಹುಟ್ಟಿದ ಎಲ್ಲರಿಗೂ ಹಕ್ಕು ಇದ್ದೇ ಇರುತ್ತದೆ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಶೇ.4 ರಷ್ಟು ಮೀಸಲಾತಿ ಕೊಟ್ಟರು. ರಾಜಕೀಯಕ್ಕೋಸ್ಕರ ಈ ರೀತಿಯ ಹೇಳಿಕೆ ನೀಡುತ್ತಾರೆ ಅಷ್ಟೆ. ಉಪಚುನಾವಣೆ ಫಲಿತಾಂಶ ಸ್ಥಳೀಯ ಚುನಾವಣೆಗೆ ದಿಕ್ಸೂಚಿ ಆಗುವುದಿಲ್ಲ ಎಂದರು.
ಈ ಸಂದರ್ಭದಲ್ಲಿ ಶಾಸಕ ಎ. ಮಂಜು, ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಉಪಸ್ಥಿತರಿದ್ದರು.
ಇದನ್ನೂ ಓದಿ:ಅವರೇನು ನಮ್ಮನ್ನೇನು ಕೊಂಡುಕೊಂಡಿದ್ದಾರಾ? : ಸಿಪಿವೈ ಹೇಳಿಕೆಗೆ ಶಾಸಕಿ ಶಾರದಾ ಪೂರ್ಯನಾಯ್ಕ್ ತಿರುಗೇಟು