ಕರ್ನಾಟಕ

karnataka

ETV Bharat / state

ಫಲಿಸದ ಜೆಡಿಎಸ್ ನಾಯಕರ ಮನವೊಲಿಕೆ?: 'ಜನರ ಭಾವನೆಗೆ ತಕ್ಕಂತೆ ಟಿಕೆಟ್​ ಕೇಳುತ್ತಿದ್ದೇನೆ' ಎಂದ ಯೋಗೇಶ್ವರ್‌

ರಾಜ್ಯದಲ್ಲಿ ಉಪಚುನಾವಣೆ ಘೋಷಣೆ ಬಳಿಕವೂ ಬಿಜೆಪಿ - ಜೆಡಿಎಸ್‌ನಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಆಯ್ಕೆಯಲ್ಲಿ ಸ್ಪಷ್ಟತೆ ಇಲ್ಲವಾಗಿದೆ. ಸಿ.ಪಿ.ಯೋಗೇಶ್ವರ್‌ ಜೊತೆಗಿನ ಜೆಡಿಎಸ್‌ ಮುಖಂಡರ ಸಭೆಯಲ್ಲೂ ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯವಾಗಿಲ್ಲ ಎನ್ನಲಾಗಿದೆ.

By ETV Bharat Karnataka Team

Published : 5 hours ago

yogeshwar
ಜೆಡಿಎಸ್ ನಾಯಕರ ಜೊತೆ ಸಿ.ಪಿ.ಯೋಗೇಶ್ವರ್ (ETV Bharat)

ಬೆಂಗಳೂರು:ಭಾರೀ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಬಿಜೆಪಿಯ ಪ್ರಬಲ ಟಿಕೆಟ್​​ ಆಕಾಂಕ್ಷಿ ಸಿ.ಪಿ.ಯೋಗೇಶ್ವರ್ ಅವರನ್ನು ಮನವೊಲಿಸುವ ಪ್ರಯತ್ನವನ್ನು ಜೆಡಿಎಸ್ ನಾಯಕರು ನಡೆಸಿದರಾದರೂ ಫಲ ನೀಡಿದಂತೆ ಕಾಣುತ್ತಿಲ್ಲ. ''ನಾನೇ ಸ್ಪರ್ಧಿಸುವೆ. ನನಗೇ ಬೆಂಬಲ ನೀಡಿ'' ಎಂದು ಸಿ.ಪಿ.ಯೋಗೇಶ್ವರ್ ತಮ್ಮನ್ನು ಮನವೊಲಿಸಲು ಯತ್ನಿಸಿದ ಜೆಡಿಎಸ್ ನಾಯಕರ ಬಳಿ ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ನಗರದ ಖಾಸಗಿ ಹೋಟೆಲ್​ನಲ್ಲಿ ಶುಕ್ರವಾರ ರಾತ್ರಿ ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಜೊತೆ ಜೆಡಿಎಸ್‌ ಮುಖಂಡರು ಸಭೆ ನಡೆಸಿದರು. ಜೆಡಿಎಸ್‌ ಶಾಸಕ ಎ.ಮಂಜು, ಮಾಜಿ ಶಾಸಕರಾದ ಡಾ.ಕೆ‌.ಅನ್ನದಾನಿ, ಸಿ.ಎಸ್. ಪುಟ್ಟರಾಜು, ಮಾಗಡಿ ಮಂಜು, ಸುರೇಶ್ ಗೌಡ ಇತರರು ಸಭೆಯಲ್ಲಿ ಭಾಗವಹಿಸಿದ್ದರು.

ಜೆಡಿಎಸ್‌ ಮುಖಂಡರ ಸಭೆ (ETV Bharat)

ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರೂ, ಮುಖಂಡರ ಮನವೊಲಿಕೆಗೆ ಸಿ.ಪಿ.ಯೋಗೇಶ್ವರ್‌ ಸಹಮತ ವ್ಯಕ್ತಪಡಿಸಿಲ್ಲ. ಶನಿವಾರ (ಇಂದು) ನಡೆಯುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ರಾಜ್ಯ ಬಿಜೆಪಿ ನಾಯಕರ ಸಭೆಯಲ್ಲಿ ಚರ್ಚೆಯ ಬಳಿಕ ಅಂತಿಮ ತೀರ್ಮಾನ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಜೆಡಿಎಸ್‌ ಅಭ್ಯರ್ಥಿಯನ್ನು ಚನ್ನಪಟ್ಟಣದಲ್ಲಿ ಕಣಕ್ಕಿಳಿಸಿದರೆ ಆಗುವ ನಷ್ಟದ ಬಗ್ಗೆ ಜೆಡಿಎಸ್‌ ಮುಖಂಡರಿಗೆ ಸಿ.ಪಿ‌.ಯೋಗೇಶ್ವರ್‌ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಆಡಳಿತರೂಢ ಕಾಂಗ್ರೆಸ್‌ಗೆ ಲಾಭ ಮಾಡಿಕೊಡದಂತೆ ನೋಡಿಕೊಳ್ಳಬೇಕಾದರೆ ತಾವು ಸ್ಪರ್ಧಿಸುವ ಅಗತ್ಯ ಇದೆ ಎಂಬುದನ್ನು ಅವರು ತಿಳಿಸಿದ್ದಾರೆ. ಅಲ್ಲದೇ, ಚುನಾವಣಾ ಫಲಿತಾಂಶದಲ್ಲಿ ಹೆಚ್ಚು- ಕಡಿಮೆಯಾದರೆ ಕೇಂದ್ರ ಸಚಿವ ಕುಮಾರಸ್ವಾಮಿಗೆ ಮುಜುಗರವಾಗಲಿದೆ. ಅದಕ್ಕೆ ಯಾಕೆ ಆಸ್ಪದ ಮಾಡಿಕೊಡಬೇಕು. ಎನ್‌ಡಿಎ ಅಭ್ಯರ್ಥಿಯಾಗಲು ಸಹಕಾರ ಮಾಡಿಕೊಡಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ದೆಹಲಿ ನಾಯಕರು ಚನ್ನಪಟ್ಟಣ ಅಭ್ಯರ್ಥಿ ತೀರ್ಮಾನ ನನಗೆ ಬಿಟ್ಟಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ

ಜೆಡಿಎಸ್‌ ಮುಖಂಡರು ಸಭೆ ಬಳಿಕ ಹೆಚ್.ಡಿ.ಕುಮಾರಸ್ವಾಮಿಗೆ ಅವರಿಗೆ ಮಾಹಿತಿ ನೀಡಿದ್ದಾರೆ. ಸಭೆಯಲ್ಲಿ ನಡೆದಿರುವ ವಿಚಾರಗಳು ಸೇರಿದಂತೆ ಎಲ್ಲಾ ವಿಷಯಗಳ ಬಗ್ಗೆಯೂ ಶನಿವಾರ ನಡೆಯುವ ಸಭೆಯಲ್ಲಿ ಪ್ರಸ್ತಾಪವಾಗಲಿದೆ ಎನ್ನಲಾಗಿದೆ.

ಯೋಗೇಶ್ವರ್‌ ಪ್ರತಿಕ್ರಿಯೆ ಏನು?:ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಿ.ಪಿ.ಯೋಗೇಶ್ವರ್‌, ''ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇನೆ. ಅಲ್ಲಿ ಬೇರೆ ಯಾರೇ ಕಣಕ್ಕಿಳಿದರೂ ಎನ್‌ಡಿಎಗೆ ಕಷ್ಟವಾಗಲಿದೆ. ಬಿಜೆಪಿ - ಜೆಡಿಎಸ್‌ ಮೈತ್ರಿ ಮಾಡಿಕೊಂಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಎಲ್ಲರಿಗೂ ಜವಾಬ್ದಾರಿ ಇದೆ. ಅವಕಾಶ ಮಾಡಿಕೊಡಿ ಎಂದು ಕೇಳಿದ್ದು, ಶನಿವಾರ ಸಭೆಯಲ್ಲಿ ಚರ್ಚೆ ನಡೆಸಲಾಗುವುದು'' ಎಂದು ಹೇಳಿದರು.

ಇದನ್ನೂ ಓದಿ:ಕುಮಾರಸ್ವಾಮಿ ನಮ್ಮ ವಿರುದ್ಧ ದಾಖಲೆ ಹುಡುಕಿಸುತ್ತಿದ್ದಾರೆ, ಕೇಳಿದ್ದರೆ ನಾನೇ ಕೊಡುತ್ತಿದ್ದೆ: ಡಿಕೆಶಿ

''ಚುನಾವಣೆಗೆ ಟಿಕೆಟ್‌ ಕೇಳುತ್ತಿದ್ದು, ಕೇಳುತ್ತಲೇ ಇರುತ್ತೇನೆ. ಪಕ್ಷದ ಕಾರ್ಯಕರ್ತರ ಭಾವನೆಗೆ ತಕ್ಕಂತೆ ಮಾತನಾಡುತ್ತಿದ್ದು, ಅದಕ್ಕೆ ನಾನು ಬದ್ಧವಾಗಿದ್ದೇನೆ. ಸಭೆಯಲ್ಲಿ ಬೇರೆ ವಿಚಾರ ಚರ್ಚೆ ಮಾಡಿಲ್ಲ. ಚನ್ನಪಟ್ಟಣ ಅಭ್ಯರ್ಥಿ 2-3 ದಿನದಲ್ಲಿ ಅಂತಿಮವಾಗಲಿದೆ. ಮೈತ್ರಿಕೂಟದಲ್ಲಿ ಅವಿಶ್ವಾಸ, ಅಪನಂಬಿಕೆಗೆ ಅವಕಾಶ ಇಲ್ಲ'' ಎಂದರು.

ಎನ್‌ಡಿಎ ಅಭ್ಯರ್ಥಿ ಗೆಲ್ಲಿಸಲು ಚರ್ಚೆ:ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ''ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಭೆಯಲ್ಲಿ ಚರ್ಚಿಸಿದ್ದೇವೆ. ಎಲ್ಲರೂ ಒಗ್ಗಟ್ಟಿನಿಂದ ಎನ್‌ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವ ಕುರಿತು ಚರ್ಚೆ ನಡೆಸಲಾಗಿದೆ. ಯಾರೇ ಅಭ್ಯರ್ಥಿಯಾದರೂ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಲು ಮಾತುಕತೆ ನಡೆಸಲಾಗಿದೆ'' ಎಂದು ಹೇಳಿದರು.

ಶಾಸಕ ಎ.ಮಂಜು ಮಾತನಾಡಿ, ''ಸಭೆಯಲ್ಲಿ ಟಿಕೆಟ್ ಬಗ್ಗೆ ಚರ್ಚೆ ಮಾಡಿಲ್ಲ. ಯಾರಿಗೆ ಟಿಕೆಟ್ ಆದರೂ ಚುನಾವಣೆ ನಡೆಸುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ಮಾಡಲಾಗಿದೆ. ಯಾವುದೇ ಗೊಂದಲ ಇಲ್ಲ. ಎರಡು- ಮೂರು ದಿನಗಳಲ್ಲಿ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಉಪಚುನಾವಣೆ: ಎರಡ್ಮೂರು ದಿನಗಳಲ್ಲಿ ಎಲ್ಲ ಕ್ಷೇತ್ರಗಳಿಗೂ ಅಭ್ಯರ್ಥಿಗಳು ಅಂತಿಮ- ವಿಜಯೇಂದ್ರ

ABOUT THE AUTHOR

...view details