ಕರ್ನಾಟಕ

karnataka

ETV Bharat / state

ಜೆಡಿಎಸ್​ಗೆ ಮೂರು ಕ್ಷೇತ್ರ ಗೆಲ್ಲುವ ಆತ್ಮವಿಶ್ವಾಸವಿದ್ದರೂ ಬಿಜೆಪಿ ಆಸರೆ ಅನಿವಾರ್ಯ: ಸುಮಲತಾ ಮುಂದಿನ ನಡೆ ನಿಗೂಢ! - JDS is confident of win three seats - JDS IS CONFIDENT OF WIN THREE SEATS

ಜೆಡಿಎಸ್​ ಹಾಗೂ ಬಿಜೆಪಿ ಮೈತ್ರಿ ಪಕ್ಷಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟಿಕೊಂಡಿವೆ. ಇದಕ್ಕೆ ಎರಡೂ ಪಕ್ಷಗಳ ನಡುವೆ ಪರಸ್ಪರ ಸಹಕಾರ ಅನಿರ್ವಾಯವಾಗಿದೆ.

jds-is-confident-of-winning-three-constituencies-but-bjps-support-is-indispensable
ಜೆಡಿಎಸ್​ಗೆ ಮೂರು ಕ್ಷೇತ್ರ ಗೆಲ್ಲುವ ಆತ್ಮವಿಶ್ವಾಸವಿದ್ದರೂ ಬಿಜೆಪಿ ಆಸರೆ ಅನಿವಾರ್ಯ: ಸುಮಲತಾ ಮುಂದಿನ ನಡೆ ನಿಗೂಢ!

By ETV Bharat Karnataka Team

Published : Mar 23, 2024, 10:22 PM IST

ಬೆಂಗಳೂರು:ಮೂರು ಕ್ಷೇತ್ರಗಳನ್ನು ಜೆಡಿಎಸ್ ಗೆಲ್ಲುವ ಆತ್ಮವಿಶ್ವಾಸವಿದ್ದರೂ ಅಂತರಂಗದಲ್ಲಿ ಬಿಜೆಪಿ ಆಸರೆ ಬೇಕೇ ಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಕೇವಲ ಎರಡು ಕ್ಷೇತ್ರ ತೆಗೆದುಕೊಳ್ಳಲು ಹೊಂದಾಣಿಕೆಗೆ ಇಷ್ಟು ಪ್ರಯತ್ನ ಪಡೆಬೇಕಿತ್ತಾ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗೆ ಬಹಿರಂಗವಾಗಿ ಹೇಳಿದ್ದರಾದರೂ ಅವರ ಅಂತರಂಗದಲ್ಲಿ ಬಿಜೆಪಿಗೆ ನೆರವಿನ ಅಗತ್ಯವಿದೆ. ಅದೇ ರೀತಿ ಜೆಡಿಎಸ್​ನ ಆಸರೆಯೂ ಬಿಜೆಪಿಗೆ ಅನಿವಾರ್ಯವಾಗಿದೆ.

ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರಿಗೆ ತೀವ್ರ ವಿರೋಧವಿದೆ. ಮೈತ್ರಿ ಇಲ್ಲಿ ವರ್ಕೌಟ್ ಆಗುವುದೇ ಅನುಮಾನ ಎಂಬ ಪರಿಸ್ಥಿತಿ ತಲೆದೋರಿರುವ ಕಾರಣ ಮೊನ್ನೆ ಡ್ಯಾಮೇಜ್ ಕಂಟ್ರೋಲ್​ಗೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಹಾಸನ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಬಿಜೆಪಿ ನಾಯಕ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊರೆ ಹೋಗಿದ್ದರು. ಪ್ರಜ್ವಲ್ ರೇವಣ್ಣ ಕ್ಷೇತ್ರದಿಂದ ಅಂತರ ಕಾಯ್ದುಕೊಂಡಿದ್ದರಿಂದ ಸ್ವಪಕ್ಷದ ಕಾರ್ಯಕರ್ತರಲ್ಲೂ ಬೇಸರ ವಿದೆ.

ಇನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಾಗಿದ್ದರೂ ಮಾಜಿ ಶಾಸಕ ಪ್ರೀತಂ ಗೌಡ, ಎ.ಟಿ. ರಾಮಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷರು ಮೈತ್ರಿ ಧರ್ಮ ಪಾಲನೆ ಮಾಡುವುದು ಅನುಮಾನ. ಹಾಗಾಗಿ ಯಡಿಯೂರಪ್ಪ ಮೂಲಕ ಸಂಧಾನದ ಪ್ರಯತ್ನ ನಡೆದಿದೆ. ಜೊತೆಗೆ ಕಳೆದ ವಾರ ಕುಮಾರಸ್ವಾಮಿ ಅವರು, ಹಾಸನ ಕ್ಷೇತ್ರಕ್ಕೆ ಭೇಟಿ ನೀಡಿದಾಗ ಪ್ರಜ್ವಲ್ ತಪ್ಪು ಮಾಡಿದ್ದಾನೆ . ಚಿಕ್ಕ ಹುಡುಗ. ಮನಸ್ಸಿಗೆ ಹಾಕಿಕೊಳ್ಳಬೇಡಿ ಎಂದು ಕ್ಷಮೆಯಾಚನೆಯ ದಾಟಿಯಲ್ಲಿ ಮಾತನಾಡಿದ್ದರು. ಇದೀಗ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಇಡೀ ಕುಟುಂಬವೇ ಚುನಾವಣಾ ಅಖಾಡಕ್ಕೆ ಇಳಿದಿದೆ.

ಮತ್ತೊಂದೆಡೆ, ಮಂಡ್ಯದಲ್ಲಿ ಕೂಡ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುವ ಧೈರ್ಯ ಜೆಡಿಎಸ್​ಗೆ ಇಲ್ಲ. ಇಲ್ಲಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರು ಜೆಡಿಎಸ್ ಗೆಲುವಿಗೆ ದೊಡ್ಡ ಅಡ್ಡಿಯಾಗಿದ್ದಾರೆ. ಕಾಂಗ್ರೆಸ್ ಕೂಡ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿರುವುದರಿಂದ ಸಣ್ಣ ಹೆಜ್ಜೆ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ಖಚಿತ ಎಂಬ ಅರಿವು ಜೆಡಿಎಸ್ ನಾಯಕರಿಗೆ ಇದೆ. ಹಾಗಾಗಿ ಇಲ್ಲೂ ಬಿಜೆಪಿಯ ಆಶ್ರಯ ಅನಿವಾರ್ಯವಾಗಿದೆ.

ಒಳ ಹೊಡೆತದ ಭಯ: ಒಳ ಹೊಡೆತವು ಭಯವೂ ಜೆಡಿಎಸ್​ಗೆ ಇದೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು ಜೆಡಿಎಸ್​ಗೆ ಒಳ ಪೆಟ್ಟಿನ ಭಯವೂ ಇದೆ. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲು ಅನುಭವಿಸಿದ್ದನ್ನು ಜೀರ್ಣಿಸಿಕೊಳ್ಳಲು ಇದುವರೆಗೂ ಆಗುತ್ತಿಲ್ಲ. ಹಾಗಾಗಿ ಒಳ ಪೆಟ್ಟಿನ ಬಗ್ಗೆಯೂ ಜೆಡಿಎಸ್ ಎಚ್ಚರದಿಂದ ಇರಬೇಕಿದೆ.

ಅದೇ ರೀತಿ ಕೋಲಾರದಲ್ಲಿ ಜೆಡಿಎಸ್ ಮತ ಬ್ಯಾಂಕ್ ಇದೆ. ಪಕ್ಷದ ಮೂವರು ಶಾಸಕರಿದ್ದರೂ ಗೆಲವು ಅಷ್ಟೇನೂ ಸಲೀಸಾಗುವುದಿಲ್ಲ. ಇಲ್ಲಿ ಬಿಜೆಪಿ ಕೂಡ ಬಲವರ್ಧನೆಯ ಹಾದಿಯಲ್ಲಿದೆ. ಜೆಡಿಎಸ್ ಯಾರನ್ನೇ ಕಣಕ್ಕಿಳಿಸಿದರೂ ಬಿಜೆಪಿ ಬಿಟ್ಟು ಸ್ವಂತ ಬಲದಿಂದ ಗೆಲ್ಲುವುದು ಸುಲಭದ ಮಾತಲ್ಲ ಹಾಗಾಗಿ ಜೆಡಿಎಸ್​ಗೆ ಮೂರು ಕ್ಷೇತ್ರ ಹಂಚಿಕೆಯಾದರು, ಬಿಜೆಪಿ ಬಲ ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು ತಮ್ಮನ್ನು ಬಿಜೆಪಿ ಸಭೆ ಸಮಾರಂಭಗಳಿಗೆ ಆಹ್ವಾನಿಸಬೇಕು, ಸಮನ್ವಯ ಸಮಿತಿ ರಚಿಸಬೇಕು, ತಳಮಟ್ಟದ ಕಾರ್ಯಕರ್ತರಿಗೆ ಮೈತ್ರಿ ಧರ್ಮ ಪಾಲನೆ ಮಾಡಲು ನಿರ್ದೇಶನ ನೀಡಬೇಕು ಎಂದು ಹೇಳುತ್ತಿರುವುದು. ಮೈತ್ರಿ ಧರ್ಮ ಪಾಲನೆ ಯಾವ ರೀತಿ ನಡೆಯುತ್ತದೆ ಎಂಬುದರ ಮೇಲೆ ಜೆಡಿಎಸ್ ಅಭ್ಯರ್ಥಿಗಳ ಗೆಲುವು ನಿಂತಿದೆ.

ಕುತೂಹಲ ಕೆರಳಿಸಿದ ಸುಮಲತಾ ಅಂಬರೀಶ್ ಮುಂದಿನ ನಡೆ: ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಜೆಡಿಎಸ್ - ಬಿಜೆಪಿ ನಡುವಿನ ಸೀಟು ಹಂಚಿಕೆಗೆ ಕೊನೆಗೂ ತೆರೆಬಿದ್ದಿದ್ದು, ದಳಪತಿಗಳಿಗೆ ಮಂಡ್ಯ, ಹಾಸನ ಹಾಗೂ ಕೋಲಾರ ಕ್ಷೇತ್ರಗಳು ಅಂತಿಮವಾಗಿದೆ. ಇದರಿಂದಾಗಿ ಸಂಸದೆ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಕೊನೆ ಕ್ಷಣದವರೆಗೂ ಮಂಡ್ಯ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಪಡೆಯಲು ದೆಹಲಿ ಮಟ್ಟದಲ್ಲಿ ಅವರು ನಡೆಸಿದ ಪ್ರಯತ್ನಗಳು ವಿಫಲವಾದವು. ಸುಮಲತಾ ಅಂಬರೀಶ್ ನಡೆ ಈಗ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ ಬಾರಿಯಂತೆ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆಯೇ ? ಅಥವಾ ಇಲ್ಲವೇ ಸಕ್ರಿಯ ರಾಜಕಾರಣದಿಂದ ದೂರ ಇರುತ್ತಾರೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಲತಾ ಅಂಬರೀಶ್ ಅವರು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹಸಚಿವ ಅಮಿತ್ ಶಾ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಅನೇಕರನ್ನು ಭೇಟಿಯಾಗಿ ಮಂಡ್ಯ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಈ ಬೇಡಿಕೆಗೆ ಸೊಪ್ಪು ಹಾಕದ ವರಿಷ್ಠರು ಮೈತ್ರಿ ಧರ್ಮವನ್ನು ಪಾಲನೆ ಮಾಡಬೇಕಾದ ಇಕ್ಕಟ್ಟಿಗೆ ಸಿಲುಕಿರುವ ಕಾರಣ ಮಂಡ್ಯ ಕ್ಷೇತ್ರವು ದಳಪತಿಗಳ ಪಾಲಾಗಿದೆ. ಅದೇ ರೀತಿ, ಕೋಲಾರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ 2ನೇ ಬಾರಿಗೆ ಕಣಕ್ಕಿಳಿಯಲು ತುದಿಗಾಲಲ್ಲಿ ನಿಂತಿದ್ದ ಸಂಸದ ಮುನಿಸ್ವಾಮಿ ರಾಜಕೀಯ ಭವಿಷ್ಯವೂ ಕೂಡ ಅಡಕತ್ತರಿಗೆ ಸಿಲುಕಿದೆ. ಅವರು ಸಹ ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದರು. ಆದರೆ, ಫಲ ಸಿಗಲಿಲ್ಲ.

ಬೆಂಗಳೂರಿನಲ್ಲಿ ಇಂದು ಈ ಬಗ್ಗೆ ಸುಳಿವು ನೀಡಿರುವ ಬಿಜೆಪಿ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರು, ನಾವು ಮೈತ್ರಿಯಂತೆ ಮೂರು ಕ್ಷೇತ್ರಗಳನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟಿದ್ದೇವೆ. ಈ ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಅವರ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಸೂಚನೆ ನೀಡಿದ್ದಾರೆ. ಸದ್ಯ ಚೆಂಡು ಕೇಂದ್ರದ ವರಿಷ್ಠರ ಅಂಗಳದಲ್ಲಿದ್ದು, ಹಾಲಿ ಸಂಸದರಾದ ಸುಮಲತಾ ಹಾಗೂ ಮುನಿಸ್ವಾಮಿ ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಜೆಡಿಎಸ್ ಸೀಟು ಹಂಚಿಕೆ ಚರ್ಚೆಗೆ ತೆರೆ: ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟ ಬಿಜೆಪಿ - Lok Sabha election

ABOUT THE AUTHOR

...view details