ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಸಹಜ ಲೈಂಗಿಕ ಕಿರುಕುಳ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣನಿಗೆ ನಗರದ ಸೆಷನ್ಸ್ ನ್ಯಾಯಾಲಯ ಇಂದು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಸ್ವಪಕ್ಷದ ಕಾರ್ಯಕರ್ತ ನೀಡಿದ ದೂರಿನ ಹಿನ್ನೆಲೆ ಬಂಧನಕ್ಕೆ ಒಳಗಾಗಿರುವ ಸೂರಜ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಆದೇಶ ನೀಡಿದೆ.
ಷರತ್ತುಗಳು: 2 ಲಕ್ಷ ರೂ.ಗಳ ಶ್ಯೂರಿಟಿ, ತನಿಖೆಗೆ ಸಹಕರಿಸಬೇಕು, ಪಾಸ್ಪೋರ್ಟ್ ತನಿಖಾಧಿಕಾರಿಗಳಿಗೆ ಒಪ್ಪಿಸಬೇಕು, ಆರೋಪ ಪಟ್ಟಿ ಸಲ್ಲಿಸುವವರೆಗೆ ಇಲ್ಲವೇ ಮುಂದಿನ ಆರು ತಿಂಗಳು ಕಾಲ ಪ್ರತಿ ಎರಡನೇ ಭಾನುವಾರ ಠಾಣೆಗೆ ಭೇಟಿ ನೀಡಿ ಸಹಿ ಮಾಡಬೇಕು, ಸಾಕ್ಷ್ಯಗಳಿಗೆ ಬೆದರಿಕೆ ಹಾಕಬಾರದು, ಸಾಕ್ಷಿಗಳನ್ನು ಸಂಪರ್ಕಿಸಲು ಪ್ರಯತ್ನ ಮಾಡಬಾರದು ಎಂಬುದಾಗಿ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಹಿನ್ನೆಲೆ:ಹೊಳೆನರಸೀಪುರದಲ್ಲಿ ಘನ್ನಿಗಡ ಫಾರ್ಮ್ ಹೌಸ್ಗೆ ಜೂನ್ 16ರಂದು ಕರೆಯಿಸಿಕೊಂಡು ಸೂರಜ್ ರೇವಣ್ಣ ತಮ್ಮ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ವಿಚಾರವನ್ನು ಬಹಿರಂಗಪಡಿಸಿದರೆ ಕೊಲ್ಲುವ ಬೆದರಿಕೆಯನ್ನೂ ಹಾಕಿದ್ದಾರೆ. ಈ ಸಂಬಂಧ ಹಣದ ಆಮಿಷವನ್ನೂ ಒಡ್ಡಿದ್ದರು ಎಂದು ಸಂತ್ರಸ್ತ ಯುವಕ ಸೂರಜ್ ಮತ್ತು ಅವರ ಬೆಂಬಲಿಗ ಶಿವಕುಮಾರ್ ವಿರುದ್ಧ ಜೂನ್ 22ರಂದು ದೂರು ನೀಡಿದ್ದರು. ಇದನ್ನು ಆಧರಿಸಿ ಹೊಳೆನರಸೀಪುರ ಗ್ರಾಮೀಣ ಠಾಣೆಯಲ್ಲಿ ಸೂರಜ್ ಮತ್ತು ಶಿವಕುಮಾರ್ ವಿರುದ್ಧ ಐಪಿಸಿ ವಿವಿಧ ಸೆಕ್ಷನ್ಗಳ ಅಡಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸೂರಜ್ ಬಂಧನವಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸೂರಜ್ ಆಪ್ತ ಎನ್ನಲಾದ ಶಿವಕುಮಾರ್ ನೀಡಿದ ದೂರಿನ ಮೇರೆಗೆ ಸೂರಜ್, ಚನ್ನರಾಯಪಟ್ಟಣದ ರಕ್ಷಿತ್ ಮತ್ತು ಹಾಸನದ ಸಚಿನ್ ವಿರುದ್ಧ ಐಪಿಸಿ ಸೆಕ್ಷನ್ಗಳ ಅಡಿ ಜೂನ್ 25ರಂದು ಹೊಳೆನರಸೀಪುರದ ಗ್ರಾಮೀಣ ಠಾಣೆಯಲ್ಲಿ ಮತ್ತೊಂದು ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ:ಅಪ್ರಾಪ್ತೆ ಅತ್ಯಾಚಾರ, ಮದುವೆ: ಮಗು - ತಾಯಿಯ ಭವಿಷ್ಯಕ್ಕಾಗಿ ಆರೋಪಿ ಮೇಲಿನ ಕೇಸ್ ರದ್ದು - High Court Quashed POCSO Case