ಬೆಂಗಳೂರು: "ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿ ಸಕ್ರಿಯವಾಗಿದ್ದ ಜೆಬಿಎಫ್ ಕಂಪನಿಯು ಆರ್ಥಿಕ ತೊಂದರೆಗೆ ಸಿಲುಕಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ 34 ಉದ್ಯೋಗಿಗಳಿಗೆ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ (ಗೈಲ್) ಉದ್ಯೋಗ ಕೊಡಬೇಕೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ನಿರಂತರವಾಗಿ ವ್ಯವಹರಿಸಲಾಗುತ್ತಿದೆ. ಜತೆಗೆ, ಗೈಲ್ ಸಂಸ್ಥೆಯ ಉನ್ನತಾಧಿಕಾರಿಗಳೊಂದಿಗೆ ಮತ್ತೊಮ್ಮೆ ಮಾತುಕತೆ ನಡೆಸಲಾಗುವುದು" ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, "ಸಂಕಷ್ಟಕ್ಕೆ ಸಿಲುಕಿರುವವರು ಜೆಬಿಎಫ್ ಕಂಪನಿಗೆ ಜಮೀನು ನೀಡಿ, ನಿರ್ವಸಿತರಾಗಿರುವವರು. ಸರ್ಕಾರದ ನಿಯಮಗಳಂತೆ ಆ ಕಂಪನಿಯು ಇಂತಹ 115 ಮಂದಿಗೆ ಉದ್ಯೋಗ ನೀಡಬೇಕಿತ್ತು. 2012ರಲ್ಲಿ 81 ಜನರನ್ನು ಉದ್ಯೋಗಕ್ಕೆ ತೆಗೆದುಕೊಂಡ ಕಂಪನಿ 2017ರಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಎನ್.ಸಿ.ಎಲ್.ಟಿ. ಪ್ರಕ್ರಿಯೆಯಡಿಯಲ್ಲಿ ಜೆಬಿಎಫ್ ಕಂಪನಿಯನ್ನು ಕೇಂದ್ರ ಸರ್ಕಾರದ ಗೈಲ್ಗೆ ವಹಿಸಲಾಯಿತು. ಆ ಸಂಸ್ಥೆ ಇವರಿಗೆ 2023ರ ಮಾರ್ಚ್ ತನಕ ವೇತನ ನೀಡಿದೆ. ಆದರೆ, ನಂತರ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳನ್ನು ನಡೆಸಿ, ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಿದೆ. ಇದರಿಂದ ಈಗ ಸಮಸ್ಯೆ ಉದ್ಭವಿಸಿದೆ" ಎಂದು ವಿವರಿಸಿದರು.