ಬೆಂಗಳೂರು: ಬಹು ನಿರೀಕ್ಷಿತ ಜಾತಿವಾರು ಜನಗಣತಿಯ ವರದಿಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇಂದು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ ಜಯಪ್ರಕಾಶ್ ಹೆಗ್ಡೆ ಅವರು ಇಂದು ವಿಧಾನಸೌಧದಲ್ಲಿ ಮಧ್ಯಾಹ್ನ 2.45ಕ್ಕೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಮತ್ತು ಸಮೀಕ್ಷೆಯ ದತ್ತಾಂಶಗಳು ಸೇರಿದ ಬೃಹತ್ ಪೆಟ್ಟಿಗೆಯನ್ನು ಸರ್ಕಾರದ ಕೈಗೆ ಒಪ್ಪಿಸಲಿದ್ದಾರೆ.
8 ವರ್ಷದ ಕಾಂತರಾಜು ವರದಿ: ಸಿದ್ದರಾಮಯ್ಯ ನೇತೃತ್ವದ ಮೊದಲ ಸರ್ಕಾರದ ಅವಧಿಯಲ್ಲಿ 2015ರಲ್ಲಿ ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ತಿಳಿಯುವ ಉದ್ದೇಶದಿಂದ ಎಚ್ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 158.74 ಕೋಟಿ ವೆಚ್ಚದಲ್ಲಿ ಈ ಸಮೀಕ್ಷೆ ನಡೆಸಿತು. 8 ವರ್ಷಗಳ ಹಿಂದೆ ನಡೆಸಲಾದ ಈ ವರದಿಯನ್ನು ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಲ್ಲಿಕೆ ಮಾಡಲಾಗಿತ್ತಾದರೂ ಅದಕ್ಕೆ ಸದಸ್ಯ ಕಾರ್ಯದರ್ಶಿಗಳ ಸಹಿ ಆಗಿರಲಿಲ್ಲ. ಬಳಿಕ ಬಂದ ಸರ್ಕಾರಗಳು ಸಹ ಈ ವರದಿಯನ್ನು ಪಕ್ಕಕ್ಕೆ ಸರಿಸಿದ್ದವು.
ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದ ಈ ಜಾತಿಗಣತಿ ವರದಿಯನ್ನು ತಮ್ಮ ನೇತೃತ್ವದ ಸರ್ಕಾರದಿಂದ ಸ್ವೀಕಾರ ಮಾಡಲು ಬದ್ಧ ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಮುನ್ನೆಲೆಗೆ ಬಂದಿತು. ಈ ನಡುವೆ ವರದಿ ಸಲ್ಲಿಕೆಗೆ ಆಯೋಗದ ಅಧ್ಯಕ್ಷರ ಸೇವಾ ಅವಧಿಯನ್ನು ಕೂಡ ಸರ್ಕಾರ ವಿಸ್ತರಿಸಿತ್ತು. ಈ ವೇಳೆ ಕಾಂತರಾಜು ವರದಿಯ ಮೂಲ ಪ್ರತಿ ಕಳೆದು ಹೋಗಿದೆ ಎಂಬ ಆರೋಪವೂ ಕೇಳಿ ಬಂದಿತು.